ಚಿಕ್ಕಮಗಳೂರು: ಪೋಷಕರು ಬುದ್ದಿವಾದ ಹೇಳಿದ್ದಕ್ಕೆ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ
ಸುರಕ್ಷಾ - ಮೃತ ವಿದ್ಯಾರ್ಥಿನಿ
ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ವರದಿಯಾಗಿದೆ.
ಶೃಂಗೇರಿ ತಾಲೂಕಿನ ಬೇಗಾರ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಹರಾವರಿಯ ಸುರಕ್ಷಾ (19) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ.
ವಿದ್ಯಾರ್ಥಿನಿ ಹಬ್ಬಕ್ಕೆ ಮನೆಗೆ ತೆರಳಿದ್ದಾಗ, ಪೋಷಕರು ಬುದ್ದಿವಾದ ಹೇಳಿದ್ದಾರೆ. ಇದರಿಂದ ಮನನೊಂದು ವಿದ್ಯಾರ್ಥಿನಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ದ್ವಿತೀಯ ಬಿ.ಎ ವ್ಯಾಸಂಗ ಮಾಡುತಿದ್ದ ಸುರಕ್ಷಾ, ಸಚ್ಚಿದಾನಂದಪುರದ ಮೆಟ್ರಿಕ್ ನಂತರದ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ಉಳಿದು ಕಾಲೇಜಿಗೆ ತೆರಳುತ್ತಿದ್ದರು ಎಂದು ತಿಳಿದುಬಂದಿದೆ.
ಗೌರಿ-ಗಣೇಶ ಹಬ್ಬಕ್ಕೆ ಊರಿಗೆ ಹೋದಾಗ ಮನೆಯಲ್ಲಿ ವಿಷ ಸೇವಿಸಿದ್ದು, ಕೊಪ್ಪದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ಆಸ್ಪತ್ರೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಮೃತ ಪಟ್ಟಿದಾರೆ ಎಂದು ಹೇಳಲಾಗಿದೆ.
ಈ ಸಂಬಂಧ ಶೃಂಗೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.