ಚಿಕ್ಕಮಗಳೂರು: ಡೆಂಗಿ ಜ್ವರದಿಂದ ಕಾಲೇಜು ವಿದ್ಯಾರ್ಥಿನಿ ಮೃತ್ಯು
ಚಿಕ್ಕಮಗಳೂರು, ಫೆ.8: ಕಾಫಿನಾಡಿನಲ್ಲಿ ಮಂಗನಕಾಯಿಲೆ ಹಾವಳಿ ತೀವ್ರಗೊಳ್ಳುತ್ತಿರುವ ಮಧ್ಯೆಯೇ ಡೆಂಗಿ ಜ್ವರ ಹಬ್ಬುತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿದೆ. ಡೆಂಗಿ ಜ್ವರ ಬಾಧೆಗೆ ಬುಧವಾರ ರಾತ್ರಿ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಬಲಿಯಾಗಿದ್ದಾಳೆ.
ನಗರದ ಮುಹಮ್ಮದ್ ಖಾನ್ ಬಡಾವಣೆ ನಿವಾಸಿ ಸಹರಾ ಬಾನು(18) ಮೃತಪಟ್ಟ ಕಾಲೇಜು ವಿದ್ಯಾರ್ಥಿನಿ. ನಗರದ ಎಂಇಎಸ್ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಸಹರಾ ಕೆಲದಿನಗಳಿಂದ ಡೆಂಗಿ ಜ್ವರದಿಂದ ಬಳಲುತ್ತಿದ್ದರು. ನಗರದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದ ಅವರು ಚಿಕಿತ್ಸೆ ಫಲಿಸದೆ ಬುಧವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.
ಮುಹಮ್ಮದ್ ಖಾನ್ ಬಡಾವಣೆಯಲ್ಲಿ ಇತ್ತೀಚೆಗೆ ಯುಜಿಡಿ ಒಡೆದು ಕೊಳಚೆ ನೀರು ಚರಂಡಿಯಲ್ಲಿ ತುಂಬಿ ನಿಂತಿದ್ದು, ಇದರಿಂದ ಬಡಾವಣೆಯಲ್ಲಿ ಸೊಳ್ಳೆಗಳು ಹೆಚ್ಚಾಗಿ ಡೆಂಗಿ ರೋಗ ಹರಡಿದೆ ಎಂದು ಸ್ಥಳೀಯರು ದೂರಿದ್ದಾರೆ.
ನಗರಸಭೆ ಅಧ್ಯಕ್ಷ ವೇಣುಗೋಪಾಲ್ ಮೃತ ಯುವತಿಯ ಮನೆಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆದಿದ್ದು, ನಗರದಲ್ಲಿ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಕೆಲ ಲೋಪಗಳಿದ್ದು, ಅದನ್ನು ಸರಿಪಡಿಸಲಾಗುವುದು ಎಂದು ತಿಳಿಸಿದ್ದಾರೆ.