ಶಕ್ತಿ ಯೋಜನೆಯಿಂದ ಚಿಕ್ಕಮಗಳೂರು ಜಿಲ್ಲಾದ್ಯಂತ ಗರಿಗೆದರಿದ ಪ್ರವಾಸೋದ್ಯಮ; ಜೂನ್ ತಿಂಗಳ ಅಂತ್ಯಕ್ಕೆ 30 ಲಕ್ಷ ಪ್ರವಾಸಿಗರ ಭೇಟಿ
ಚಿಕ್ಕಮಗಳೂರು, ಜು.18: ಕರ್ನಾಟಕದ ಕಾಶ್ಮೀರ ಎಂದೇ ಖ್ಯಾತಿಯಾಗಿರುವ ಕಾಫಿನಾಡು ಅನೇಕ ಪ್ರಾಕೃತಿಕ ಸೌಂದರ್ಯಕ್ಕೆ ಹೆಸರಾಗಿರುವ ರಾಜ್ಯದ ಪ್ರಮುಖ ಪ್ರವಾಸಿ ತಾಣವಾಗಿದೆ. ರಾಜ್ಯ ಸರಕಾರದ ಶಕ್ತಿ ಯೋಜನೆ ಜಾರಿಯಾದ ಬಳಿಕ ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ದುಪ್ಪಟ್ಟಾಗಿದ್ದು, ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಜಿಲ್ಲೆಗೆ ಆಗಮಿಸಿರುವುದು ದಾಖಲಾಗಿದೆ.
2022ರಲ್ಲಿ ಜಿಲ್ಲೆಗೆ 69.70ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದರೆ, 2023 ಜೂನ್ ಅಂತ್ಯಕ್ಕೆ 29.24ಲಕ್ಷ ಜನರು ಭೇಟಿ ನೀಡಿದ್ದಾರೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ (ಶಕ್ತಿ ಯೋಜನೆ)ಯೋಜನೆ ಜಾರಿಯಾದ ಬಳಿಕ ಧಾರ್ಮಿಕ ಕೇಂದ್ರ ಮತ್ತು ಪ್ರವಾಸಿ ಕೇಂದ್ರಗಳಿಗೆ ಭಾರೀ ಪ್ರಮಾಣದಲ್ಲಿ ಮಹಿಳೆಯರು ಲಗ್ಗೆ ಇಡುತ್ತಿದ್ದು, ಇದನ್ನು ಅಂಕಿ ಅಂಶಗಳು ಸಾಕ್ಷ್ಯೀಕರಿಸಿವೆ. ಚಿಕ್ಕಮಗಳೂರು ತಾಲೂಕಿನ ಚಂದ್ರದ್ರೋಣ ಪರ್ವತ ಸಾಲಿನಲ್ಲಿರುವ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಬಾಬಾಬುಡನ್ ಗಿರಿ, ಕೆಮ್ಮಣ್ಣುಗುಂಡಿ ಹಾಗೂ ಪ್ರಕೃತಿ ವಿಸ್ಮಯದ ಜಲಪಾತಗಳು, ಶೃಂಗೇರಿ ಶಾರದಾಂಬ ದೇಗುಲ, ಹೊರನಾಡು ಅನ್ನಪೂರ್ಣೇಶ್ವರಿ ದೇಗುಲ ಹಾಗೂ ಕಳಸ ಪಟ್ಟಣದ ಕಳಸೇಶ್ವರ ದೇವಾಲಯಗಳಿದ್ದು, ಪ್ರವಾಸಿ ಕೇಂದ್ರ ಮತ್ತು ಧಾರ್ಮಿಕ ಶ್ರದ್ಧೆ ಭಕ್ತಿಯ ಕೇಂದ್ರಗಳನ್ನು ಹೊಂದಿದ್ದು, ಶಕ್ತಿ ಯೋಜನೆ ಬಳಿಕ ಈ ಪ್ರವಾಸಿ ತಾಣ ಹಾಗೂ ಧಾರ್ಮಿಕ ಕೇಂದ್ರಗಳಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಹರಿದು ಬಂದಿದ್ದಾರೆ.
ಈ ಬಾರಿ ಮುಂಗಾರು ಮಳೆ ಕ್ಷೀಣಿಸಿದ್ದು, ಪ್ರವಾಸಿ ಕೇಂದ್ರಗಳಿಗೆ ಭೇಟಿ ನೀಡಲು ಸೂಕ್ತ ಸಮಯವಾಗಿದೆ. ಮೋಡ ಕವಿದ ವಾತಾವರಣ, ತುಂತುರು ಮಳೆ, ಜೀವಕಳೆ ತುಂಬಿಕೊಂಡಿರುವ ಜಲಪಾತಗಳು ಹಾಗೂ ಧಾರ್ಮಿಕ ಕೇಂದ್ರಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ರಾಜ್ಯದಲ್ಲಿ ಶಕ್ತಿ ಯೋಜನೆ ಆರಂಭಗೊಂಡು ಒಂದು ತಿಂಗಳು ಪೂರೈಸಿದ್ದು, ಜೂನ್ ತಿಂಗಳಲ್ಲಿ ಜಿಲ್ಲೆಯ ಶೃಂಗೇರಿ ಶಾರದಾಂಬೆ ದೇವಸ್ಥಾನಕ್ಕೆ 1.60ಲಕ್ಷ, ಹೊರನಾಡು ದೇವಸ್ಥಾನಕ್ಕೆ 2.20ಲಕ್ಷ, ಕಳಸ ದೇವಸ್ಥಾನಕ್ಕೆ 1.5ಲಕ್ಷ, ದತ್ತಪೀಠಕ್ಕೆ 1.16ಲಕ್ಷ, ಕೆಮ್ಮಣ್ಣುಗುಂಡಿಗೆ 71ಸಾವಿರ ಸೇರಿದಂತೆ ಒಟ್ಟು 7.17ಲಕ್ಷ ಮಂದಿ ಪ್ರವಾಸಿಗರು ಭೇಟಿ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ವರ್ಷ ಇದೇ ತಿಂಗಳಲ್ಲಿ ಶೃಂಗೇರಿ 1.20ಲಕ್ಷ, ಹೊರನಾಡು 88ಸಾವಿರ, ಕಳಸ 8,100, ದತ್ತಪೀಠ 63ಸಾವಿರ, ಕೆಮ್ಮಣ್ಣುಗುಂಡಿ 18ಸಾವಿರ, ಒಟ್ಟು 2.97ಲಕ್ಷ ಜನರು ಭೇಟಿ ನೀಡಿದ್ದರು. ಈ ಬಾರಿ ಪ್ರವಾಸಿಗರ ಸಂಖ್ಯೆ ಹೆಚ್ಚಳಕ್ಕೆ ರಾಜ್ಯ ಸರಕಾರದ ಶಕ್ತಿ ಯೋಜನೆ ಕಾರಣ ಎನ್ನಲಾಗುತ್ತಿದೆ. ಜನವರಿ ತಿಂಗಳಿನಲ್ಲಿ ಜಿಲ್ಲೆಗೆ ಒಟ್ಟು 8,13,600 ಪ್ರವಾಸಿಗರು ಭೇಟಿ ನೀಡಿದ್ದರೆ, ಫೆಬ್ರವರಿಯಲ್ಲಿ 3,03,500 ಮಂದಿ, ಮಾರ್ಚ್ನಲ್ಲಿ 2,93,150, ಎಪ್ರಿಲ್ ನಲ್ಲಿ 3,66,800, ಮೇ ತಿಂಗಳಿನಲ್ಲಿ 4,30,550 ಪ್ರವಾಸಿಗರು, ಜೂನ್ ತಿಂಗಳಿನಲ್ಲಿ 7.17ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದು, ಈ ಅಂಕಿಅಂಶಗಳನ್ನು ಗಮನಿಸಿದಾಗ ಜೂನ್ ತಿಂಗಳಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಭಾರೀ ಹೆಚ್ಚಳ ಆಗಿದೆ. ಇದಕ್ಕೆ ರಾಜ್ಯ ಸರಕಾರದ ಶಕ್ತಿ ಯೋಜನೆ ಕಾರಣವಾಗಿದೆ ಎನ್ನಲಾಗಿದೆ.
'ಕಳೆದ 6 ತಿಂಗಳಲ್ಲಿ ಜಿಲ್ಲೆಗೆ ಅಂದಾಜು 30ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದು, ಈ ಪ್ರಮಾಣದಲ್ಲಿ ಪ್ರವಾಸಿಕೇಂದ್ರ ಮತ್ತು ಧಾರ್ಮಿಕ ಕೇಂದ್ರಗಳಿಗೆ ಭಾರೀ ಪ್ರಮಾಣದಲ್ಲಿ ಪ್ರವಾಸಿಗರು ಬರಲು ರಾಜ್ಯ ಸರಕಾರದ ಶಕ್ತಿ ಯೋಜನೆಯೂ ಕಾರಣವಾಗಿದೆ. ಇದನ್ನು ಹೊರತುಪಡಿಸಿ ನೀಲ ಕುರುವಂಜಿ ಸಮಯದಲ್ಲೂ ಹೆಚ್ಚಿನ ಪ್ರಮಾಣದ ಪ್ರವಾಸಿಗರು ಮುಳ್ಳಯ್ಯನಗಿರಿಗೆ ಭೇಟಿ ನೀಡಿದ್ದಾರೆ. ಶಕ್ತಿ ಯೋಜನೆ ಜಾರಿಯಾದಾಗಿನಿಂದ ಜಿಲ್ಲೆಯ ಪ್ರವಾಸಿ ತಾಣಗಳು ಹಾಗೂ ಧಾರ್ಮಿಕ ಕೇಂದ್ರಗಳಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರಲಾರಂಭಿಸಿದ್ದಾರೆ. ವ್ಯಾಪಾರ ವಹಿವಾಟುಗಳು ಚುರುಕಿನಿಂದ ನಡೆಯುತ್ತಿವೆ. ಪ್ರವಾಸೋದ್ಯಮಕ್ಕೆ ಈ ಯೋಜನೆ ಭಾರೀ ಶಕ್ತಿ ನೀಡುತ್ತಿದೆ'
- ಲೋಹಿತ್, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ.