ಚಿಕ್ಕಮಗಳೂರು: ವಕೀಲನ ಮೇಲೆ ಹಲ್ಲೆ ಪ್ರಕರಣ: ಮುಂಜಾನೆವರೆಗೂ ಪೊಲೀಸ್ ಸಿಬ್ಬಂದಿಯಿಂದ ಧರಣಿ
ಹಲ್ಲೆಗೊಳಗಾದ ವಕೀಲ ಸೇರಿ 6 ಮಂದಿಯ ವಿರುದ್ಧ ಎಫ್‍ಐಆರ್
ಚಿಕ್ಕಮಗಳೂರು: ವಕೀಲನ ಮೇಲೆ ಪೊಲೀಸರು ಹಲ್ಲೆ ನಡೆಸಿದ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಪ್ರಕರಣ ಸಂಬಂಧ 6 ಮಂದಿ ಪೊಲೀಸರನ್ನು ಅಮಾನತು ಮಾಡಿರುವುದು ಹಾಗೂ ಮೊಕದ್ದಮೆ ದಾಖಲಿಸಿರುವುದನ್ನು ಖಂಡಿಸಿ ಶನಿವಾರ ರಾತ್ರಿ ಇಡೀ ಪೊಲೀಸ್ ಸಿಬ್ಬಂದಿ ತಮ್ಮ ಕೆಲಸ ಸ್ಥಗಿತಗೊಳಿಸಿ ಧರಣಿ ನಡೆಸಿದರು. ತಮ್ಮ ಕರ್ತವ್ಯಕ್ಕೆ ವಕೀಲರು ಅಡ್ಡಿಪಡಿಸಿದ್ದು, ವಕೀಲರ ವಿರುದ್ಧ ಎಫ್‍ಐಆರ್ ದಾಖಲಿಸಬೇಕೆಂದು ಪಟ್ಟು ಹಿಡಿದು ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ನಗರ ಠಾಣೆಯಲ್ಲಿ ವಕೀಲರ ವಿರುದ್ಧ ನಾಲ್ಕು ಪತ್ಯೇಕ ಎಫ್‍ಐಆರ್ ಗಳನ್ನು ದಾಖಲಿಸಿಕೊಳ್ಳಲಾಗಿದೆ.
ಶನಿವಾರ ರಾತ್ರಿ ನಗರ ವ್ಯಾಪ್ತಿಯ 6 ಪೊಲೀಸ್ ಠಾಣೆಗಳ ಅಧಿಕಾರಿ, ಸಿಬ್ಬಂದಿಗಳು ಕಡೂರು-ಮಂಗಳೂರು ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿ ಧರಣಿ ನಡೆಸಿದರು. ಈ ವೇಳೆ ಸ್ಥಳಕ್ಕೆ ಭೇಟಿ ನೀಡಿದ ಐಜಿಪಿ ಚಂದ್ರಗುಪ್ತ ಅವರು, ಸೂಕ್ತ ಕ್ರಮದ ಭರವಸೆ ನೀಡಿದರೂ ಪೊಲೀಸ್ ಸಿಬ್ಬಂದಿ ಧರಣಿ ಕೈಬಿಡದೇ, ವಕೀಲ ಪ್ರೀತಮ್ ಪೊಲೀಸರ ಕಪಾಳಕ್ಕೆ ಹೊಡೆದ ಕಾರಣಕ್ಕೆ ಪೊಲೀಸರು ಆತನಿಗೆ ಹಲ್ಲೆ ಮಾಡಿದ್ದಾರೆ. ಹಲ್ಲೆ ನೆಪದಲ್ಲಿ ನಗರಠಾಣೆ ಬಳಿ ಜಮಾಯಿಸಿದ ವಕೀಲರ ತಂಡ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಪೊಲೀಸರ ಮೇಲೆ ಹಲ್ಲೆ ಮಾಡಿದ ವಕೀಲ ಪ್ರೀತಮ್ ಹಾಗೂ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ವಕೀಲರ ವಿರುದ್ಧ ದೂರು ನೀಡಿದ್ದರೂ ದೂರು ದಾಖಲಿಸಿಲ್ಲ. ಹಿರಿಯ ಪೊಲೀಸ್ ಅಧಿಕಾರಿಗಳು ಸರಿಯಾದ ವಿಚಾರಣೆ ನಡೆಸದೇ 6 ಮಂದಿ ಪೊಲೀಸರನ್ನು ಅಮಾನತು ಮಾಡಿದ್ದಾರೆ. ಅಮಾನತು ಆದೇಶವನ್ನು ಹಿಂಪಡೆಯಬೇಕು. ವಕೀಲರ ವಿರುದ್ಧವೂ ಎಫ್‍ಐಆರ್ ದಾಖಲಿಸಬೇಕೆಂದು ಪಟ್ಟು ಹಿಡಿದರು. ಪೊಲೀಸ್ ಸಿಬ್ಬಂದಿಯ ಧರಣಿಗೆ ನಗರದ ಕೆಲ ಸಾರ್ವಜನಿಕರು, ಸಂಘಸಂಸ್ಥೆಗಳ ಮುಖಂಡರು ಬೆಂಬಲ ನೀಡಿ ಪೊಲೀಸರ ಧರಣಿಯಲ್ಲಿ ಭಾಗವಹಿಸಿದ್ದರು.
ಲಾಠಿ ಸುಟ್ಟು ಆಕ್ರೋಶ: ರಸ್ತೆ ತಡೆದು ಧರಣಿ ನಡೆಸುತ್ತಿದ್ದ ಪೊಲೀಸ್ ಸಿಬ್ಬಂದಿ ಶನಿವಾರ ರಾತ್ರಿ ತಮ್ಮ ಲಾಠಿಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಲಾಠಿ ಹಿಡಿದು ಸಾರ್ವಜನಿಕರಿಗರ ರಕ್ಷಣೆ ನೀಡುವ ಕೆಲಸವನ್ನು ಇದುವರೆಗೂ ಮಾಡುತ್ತಿದ್ದೆವು. ಸದ್ಯ ಲಾಠಿ ಹಿಡಿದ ಪೊಲೀಸರಿಗೆ ರಕ್ಷಣೆ ಇಲ್ಲ ಎಂದಾದರೇ ಲಾಠಿ ಹಿಡಿದು ಏನು ಪ್ರಯೋಜನ? ಎಂದು ರಸ್ತೆ ಮೇಲೆ ಲಾಠಿ ಎಸೆದು ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದರು.
ಧರಣಿಯಲ್ಲಿ ಭಾಗಿಯಾದ ಆರೋಪಿ ಗುರುಪ್ರಸಾದ್: ವಕೀಲ ಪ್ರೀತಮ್ ಮೇಲಿನ ಹಲ್ಲೆ ಘಟನೆ ಸಂಬಂಧ ಪಿಎಸ್ ಐ ಸೇರಿ 6ಮಂದಿ ಪೊಲೀಸರನ್ನು ಎಸ್ಪಿ ಅಮಾನತು ಮಾಡಿದ್ದು, ಪ್ರಕರಣ ಸಂಬಂಧ ಪೇದೆ ಗುರುಪ್ರಸಾದ್ ಎಂಬವರನ್ನು ಶನಿವಾರ ರಾತ್ರಿ ಚಿಕ್ಕಮಗಳೂರು ವೃತ್ತದ ಡಿವೈಎಸ್ಪಿ ಶೈಲೆಂದ್ರ ನೇತೃತ್ವದ ಪೊಲೀಸ್ ಅಧಿಕಾರಿಗಳ ತಂಡ ಡಿವೈಎಸ್ಪಿ ಕಚೇರಿಯಲ್ಲೇ ವಿಚಾರಣೆ ನಡೆಸಿದರು. ಕೆಲ ಹೊತ್ತು ವಿಚಾರಣೆ ನಡೆಸಿದ ಬಳಿಕ ಆರೋಪಿಯನ್ನು ಬಿಟ್ಟು ಕಳುಹಿಸಲಾಯಿತು. ಈ ವೇಳೆ ಗುರುಪ್ರಸಾದ್ ಹನುಮಂತಪ್ಪ ವೃತ್ತದಲ್ಲಿ ರಸ್ತೆ ತಡೆದು ಧರಣಿ ನಡೆಸುತ್ತಿದ್ದ ಸ್ಥಳಕ್ಕಾಗಮಿಸಿದರು. ಈ ವೇಳೆ ಪೊಲೀಸ್ ಸಿಬ್ಬಂದಿ ಜಯಕಾರ ಕೂಗಿದರು. ನಂತರ ಪೊಲೀಸ್ ಸಿಬ್ಬಂದಿಯ ಧರಣಿಯಲ್ಲಿ ಗುರುಪ್ರಸಾದ್ ಭಾಗವಹಿಸಿದ್ದು, ಈ ವೇಳೆ ಕಣ್ಣೀರು ಹಾಕುತ್ತಾ, ವಕೀಲರ ವಿರುದ್ಧವೂ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿದರು.
ಹಲ್ಲೆಗೊಳಗಾದ ವಕೀಲ ಸೇರಿ 6ಮಂದಿ ವಕೀಲರ ವಿರುದ್ಧ 3 ಎಫ್‍ಐಆರ್: ಹಲ್ಲೆ ಪ್ರಕರಣ ಸಂಬಂಧ ವಕೀಲ ಪ್ರೀತಮ್ ನೀಡಿದ್ದ ದೂರಿನ ಮೇರೆಗೆ ನಗರಠಾಣೆಯಲ್ಲಿ 6ಮಂದಿ ಪೊಲೀಸರ ವಿರುದ್ಧ ಎಫ್‍ಐಆರ್ ದಾಖಲಾಗಿದ್ದು, ಶನಿವಾರ ರಾತ್ರಿ ಪೊಲೀಸ್ ಸಿಬ್ಬಂದಿಯ ಧರಣಿ ಬಳಿಕ ಪೇದೆ ಗುರುಪ್ರಸಾದ್ ನೀಡಿರುವ ದೂರಿನ ಮೇರೆಗೆ ವಕೀಲ ಪ್ರೀತಮ್ ವಿರುದ್ಧವೂ ನಗರ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಿಕೊಳ್ಳಲಾಗಿದೆ. ವಕೀಲ ಪ್ರೀತಮ್ ಪೊಲೀಸ್ ಠಾಣೆಯಲ್ಲಿ ತನ್ನ ಕಪಾಳಕ್ಕೆ ಹೊಡೆದಿದ್ದಾನೆಂದು ಪೇದೆ ಗುರುಪ್ರಸಾದ್ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ. ಅಲ್ಲದೇ ಪೊಲೀಸರು ಕರ್ತವ್ಯಕ್ಕೆ ಅಡ್ಡಿಪಡಿಸಿರುವುದು ಹಾಗೂ ಠಾಣೆಗೆ ನುಗ್ಗಿ ದಾಂಧಲೆ ನಡೆಸಿರುವ ದೂರಿನ ಮೇರೆಗೆ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಸುಧಾಕರ್ ಸೇರಿದಂತೆ ಸುರೇಂದ್ರ, ನಂದೀಶ್, ಮಹೇಶ್ ಕುಮಾರ್ ಎಂಬ ವಕೀಲರ ಮೇಲೆ ಪ್ರತ್ಯೇಕವಾಗಿ 2 ಎಫ್‍ಐಆರ್ ಗಳನ್ನು ದಾಖಲಿಸಲಾಗಿದೆ.