ಚಿಕ್ಕಮಗಳೂರು : ಮಂಗನ ಕಾಯಿಲೆಗೆ ವ್ಯಕ್ತಿ ಬಲಿ
ಸಾಂದರ್ಭಿಕ ಚಿತ್ರ
ಚಿಕ್ಕಮಗಳೂರು: ಮಂಗನ ಕಾಯಿಲೆಗೆ (ಕೆಎಫ್ ಡಿ ) ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ಶೃಂಗೇರಿ ತಾಲೂಕಿನ ಬೇಗಾನೆ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಇತ್ತೀಚೆಗೆ 79 ವರ್ಷದ ವ್ಯಕ್ತಿಯಲ್ಲಿ ಮಂಗನಕಾಯಿಲೆ ಕಾಣಿಸಿ ಕೊಂಡಿತ್ತು. ಮೂರು ದಿನಗಳ ಕಾಲ ಕೊಪ್ಪ ಸರಕಾರಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆದು ಕೊಂಡ ಅವರು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.
ಜಿಲ್ಲೆಯಲ್ಲಿ ಇದುವರೆಗೂ ಮೂರು ಪ್ರಕರಣಗಳು ಕಾಣಿಸಿ ಕೊಂಡಿದ್ದು, ಕೊಪ್ಪ ತಾಲೂಕಿನ ಜೋಗಿಸರದ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಅಲ್ಲಿಸುತ್ತಿರುವ 35 ವರ್ಷದ ಮಹಿಳೆಯಲ್ಲಿ ಮಂಗನಕಾಯಿಲೆ ಕಾಣಿಸಿಕೊಂಡಿತ್ತು. ಮಹಿಳೆ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗೆಯೇ ಕೊಪ್ಪ ತಾಲೂಕಿನ 65 ವರ್ಷದ ವ್ಯಕ್ತಿಯಲ್ಲಿ ಮಂಗನಕಾಯಿಲೆ ಕಾಣಿಸಿಕೊಂಡಿದ್ದು ಇವರು ಗುಣಮುಖರಾಗಿದ್ದಾರೆ. ಈ ವರ್ಷ ಕಾಣಿಸಿಕೊಂಡ ಮೂರು ಪ್ರಕರಣದಲ್ಲಿ ಮಂಗನಕಾಯಿಲೆಯಿಂದ ಓರ್ವ ಮೃತಪಟ್ಟಿದ್ದಾನೆ. ಇದಕ್ಕೂ ಮೊದಲು ಶಿವಮೊಗ್ಗ ಜಿಲ್ಲೆಯಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದರು. ಮಂಗನ ಕಾಯಿಲೆ ಕಾಣಿಸಿಕೊಂಡ ಪ್ರದೇಶದಲ್ಲಿ ಆರೋಗ್ಯ ಇಲಾಖೆ ಮುಂಜಾಗೃತ ಕ್ರಮ ಕೈಗೊಂಡಿದೆ ಎಂದು ತಿಳಿದುಬಂದಿದೆ.