ಚಿಕ್ಕಮಗಳೂರು | ಹಲ್ಲೆಗೊಳಗಾದ ತೋಟದ ಕಾರ್ಮಿಕರಿಗೆ ಚಿಕಿತ್ಸೆ ನೀಡಲು ಮುಂದಾದ ವೈದ್ಯನಿಗೂ ಹಲ್ಲೆ: ಪ್ರಕರಣ ದಾಖಲು
ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರ ಆರೋಗ್ಯ ವಿಚಾರಿಸಿದ ಸಚಿವ ಗುಂಡೂರಾವ್ ► ಆರೋಪಿಗಳ ವಿರುದ್ಧ ಕ್ರಮಕ್ಕೆ ಪೊಲೀಸರಿಗೆ ಸೂಚನೆ
ಆಸ್ಪತ್ರೆಯಲ್ಲಿ ವೈದ್ಯರ ಆರೋಗ್ಯ ವಿಚಾರಿಸುತ್ತಿರುವ ಸಚಿವ ಗುಂಡೂರಾವ್
ಚಿಕ್ಕಮಗಳೂರು, ಸೆ.15: ಕಿಡಿಗೇಡಿಗಳಿಂದ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ವೈದ್ಯನನ್ನು ಸಚಿವ ದಿನೇಶ್ ಗುಂಡೂರಾವ್ ಶುಕ್ರವಾರ ಆಸ್ಪತ್ರೆಯಲ್ಲಿ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಲ್ಲದೇ ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಪೊಲೀಸರಿಗೆ ಸೂಚನೆ ನೀಡಿದ ಘಟನೆ ಜಿಲ್ಲೆಯ ಬಾಳೆಹೊನ್ನೂರು ಪಟ್ಟಣದಲ್ಲಿ ನಡೆದಿದೆ.
ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಬಾಳೆಹೊನ್ನೂರು ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿರುವ ಗಣೇಶ್ ಎಂಬವರ ತೋಟದ ಕಾರ್ಮಿಕರ ಮೇಲೆ ಪಕ್ಕದ ತೋಟದ ಕಾರ್ಮಿಕರು ಹಲ್ಲೆ ಮಾಡಿದ್ದರು. ವಿಷಯ ತಿಳಿದ ವೈದ್ಯ ಗಣೇಶ್ ಕೂಡಲೇ ತಮ್ಮ ತೋಟಕ್ಕೆ ತೆರಳಿ ಹಲ್ಲೆಗೊಳಗಾದ ಕಾರ್ಮಿಕರಿಗೆ ಚಿಕಿತ್ಸೆ ನೀಡಲು ಮುಂದಾಗಿದ್ದರು. ಈ ವೇಳೆ ಕಾರ್ಮಿಕರ ಮೇಲೆ ಹಲ್ಲೆ ಮಾಡಿದ್ದ ಪಕ್ಕದ ತೋಟದ ಕಾರ್ಮಿಕರು ಸ್ಥಳಕ್ಕೆ ಬಂದು ವೈದ್ಯ ಗಣೇಶ್ರೊಂದಿಗೆ ವಾಗ್ವಾದ ನಡೆಸಿ ಜಗಳವಾಡಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಕೆಲ ಕಾರ್ಮಿಕರು ವೈದ್ಯರಿಗೆ ಹಲ್ಲೆ ಮಾಡಿದ್ದಲ್ಲದೇ ಚಾಕುವಿನಿಂದ ಹೊಟ್ಟೆ ಹಾಗೂ ಕೈ, ಕಾಲಿಗೆ ಚುಚ್ಚಿದ್ದಾರೆಂದು ತಿಳಿದು ಬಂದಿದೆ.
ಹಲ್ಲೆಯಿಂದ ಗಾಯಗೊಂಡ ವೈದ್ಯರನ್ನು ಕೂಡಲೇ ಬಾಳೆಹೊನ್ನೂರು ಪಟ್ಟಣದ ಸರಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆಗೆ ದಾಖಲಿಸಲಾಗಿದೆ. ಈ ವೇಳೆ ಶೃಂಗೇರಿ ದೇವಾಲಯಕ್ಕೆ ತೆರಳಿದ್ದ ಸಚಿವ ದಿನೇಶ್ಗುಂಡೂರಾವ್ ಸುದ್ದಿ ತಿಳಿಯುತ್ತಿದ್ದಂತೆ ಮಾರ್ಗಮಧ್ಯೆ ಬಾಳೆಹೊನ್ನೂರು ಪಟ್ಟಣದಲ್ಲಿ ತಮ್ಮ ಕಾರು ನಿಲ್ಲಿಸಿ ಆಸ್ಪತ್ರೆಗೆ ತೆರಳಿ ವೈದ್ಯರ ಆರೋಗ್ಯ ವಿಚಾರಿಸಿ ಧೈರ್ಯ ಹೇಳಿದ್ದಾರೆ.
ವೈದ್ಯರ ಮೇಲೆ ಹಲ್ಲೆ ಮಾಡಿದ ಕಿಡಿಗೇಡಿಗಳ ವಿರುದ್ಧ ದೂರು ದಾಖಲಿಸಿಕೊಂಡು ತನಿಖೆ ನಡೆಸಬೇಕೆಂದು ಈ ವೇಳೆ ಸಚಿವರು ಪೊಲೀಸರಿಗೆ ಸೂಚಿಸಿದ್ದು, ಬಾಳೆಹೊನ್ನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಕಾರ್ಮಿಕರ ಗುಂಪೊಂದು ವೈದ್ಯ ಗಣೇಶ್ ಮೇಲೆ ಹಲ್ಲೆ ಮಾಡಿದ್ದಾರೆಂದು ತಿಳಿಯಿತು. ಹಲ್ಲೆಗೆ ಕಾರಣ ಗೊತ್ತಿಲ್ಲ. ಹಲ್ಲೆ ಸುದ್ದಿ ತಿಳಿದಿದ್ದರಿಂದ ಕೂಡಲೇ ಆಸ್ಪತ್ರೆಗೆ ತೆರಳಿ ವೈದ್ಯರ ಆರೋಗ್ಯ ವಿಚಾರಿಸಿದ್ದೇನೆ. ವೈದ್ಯರ ಪ್ರಾಣಕ್ಕೆ ಯಾವುದೇ ತೊಂದರೆ ಇಲ್ಲ. ಆರೋಪಿಗಳ ವಿರುದ್ಧ ಪೊಲೀಸರು ಕ್ರಮಕೈಗೊಳ್ಳಬೇಕೆಂದು ಸೂಚಿಸಿದ್ದೇನೆ. ವೈದ್ಯರ ಮೇಲಿನ ಹಲ್ಲೆಯನ್ನು ಸಹಿಸುವುದಿಲ್ಲ.
- ದಿನೇಶ್ಗುಂಡೂರಾವ್, ಸಚಿವ