ಚಿಕ್ಕಮಗಳೂರು | ಅಕ್ರಮ ಭೂ ಮಂಜೂರಾತಿ ಆರೋಪ: ಮೂಡಿಗೆರೆ ಹಿಂದಿನ ತಹಶೀಲ್ದಾರ್ ಎಚ್.ಎಂ.ರಮೇಶ್ ವಿರುದ್ಧ ಪ್ರಕರಣ ದಾಖಲು
ತಹಶೀಲ್ದಾರ್, ಶಿರಸ್ತೇದಾರ್ ಬಂಧನಕ್ಕೆ ಪೊಲೀಸರ ಶೋಧ
ತಹಶೀಲ್ದಾರ್ ರಮೇಶ್
ಚಿಕ್ಕಮಗಳೂರು, ಸೆ.26: ಸರಕಾರಿ ಭೂಮಿಯನ್ನು ಅಕ್ರಮವಾಗಿ ಖಾಸಗಿ ವ್ಯಕ್ತಿಗಳಿಗೆ ಮಂಜೂರು ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಕಡೂರು ತಾಲೂಕಿನ ಹಿಂದಿನ ತಹಶೀಲ್ದಾರ್ ಬಂಧನಕ್ಕೊಳಗಾಗಿದ್ದ ಪ್ರಕರಣದ ಬೆನ್ನಲ್ಲೇ ಸದ್ಯ ಮೂಡಿಗೆರೆ ತಾಲೂಕಿನ ಹಿಂದಿನ ತಹಶೀಲ್ದಾರ್ ಎಚ್.ಎಂ.ರಮೇಶ್ ಅವರಿಗೂ ಬಂಧನ ಭೀತಿ ಎದುರಾಗಿದ್ದು, ಅಕ್ರಮ ಭೂ ಮಂಜೂರಾತಿ ಪ್ರಕರಣ ಸಂಬಂಧ ಮೂಡಿಗೆರೆ ತಾಲೂಕಿನ ಹಾಲಿ ತಹಶೀಲ್ದಾರ್ ವೈ.ತಿಪ್ಪೇಸ್ವಾಮಿ ಹಿಂದಿನ ತಹಶೀಲ್ದಾರ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ಮೂಡಿಗೆರೆ ತಾಲೂಕಿನಲ್ಲಿ ನಡೆದಿರುವ ಅಕ್ರಮ ಭೂ ಮಂಜೂರಾತಿ ಪ್ರಕರಣ ಮೂಡಿಗೆರೆ ತಾಲೂಕಿನ ಬಾಳೂರು ಹೋಬಳಿ ಪ್ರಭಾರ ಕಂದಾಯಾಧಿಕಾರಿ ಹಾಗೂ ಗ್ರಾಮಲೆಕ್ಕಿಗ ಎನ್.ಎನ್.ಗಿರೀಶ್ ಎಂಬವರನ್ನು ಸೋಮವಾರ ರಾತ್ರಿ ಬಂಧಿಸಿದ್ದ ಮೂಡಿಗೆರೆ ಪೊಲೀಸರು, ತಡರಾತ್ರಿ ಮೂಡಿಗೆರೆ ಭೂಮಿ ಕೇಂದ್ರದ ಆಪರೇಟರ್ ನೇತ್ರಾ ಎಂಬವರನ್ನು ಬಂಧಿಸಿದ್ದರು. ಮೂಡಿಗೆರೆಯಲ್ಲಿ ಈ ಹಿಂದೆ ತಹಶೀಲ್ದಾರ್ ಆಗಿದ್ದು, ಸದ್ಯ ವರ್ಗಾವಣೆಗೊಂಡಿರುವ ರಮೇಶ್ ಹಾಗೂ ಆರ್ ಆರ್ಟಿ ಶಿರಸ್ತೇದಾರ್ ಪಾಲಯ್ಯ ಎಂಬವರ ವಿರುದ್ಧ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆಂದು ತಿಳಿದು ಬಂದಿದೆ.
ಚಿಕ್ಕಮಗಳೂರು ಕಂದಾಯ ಉಪವಿಭಾಗಾಧಿಕಾರಿ ಎಚ್.ಡಿ.ರಾಜೇಶ್ ಅವರ ಸೂಚನೆ ಮೇರೆಗೆ ಮೂಡಿಗೆರೆ ತಾಲೂಕು ಕಚೇರಿಯ ಹಾಲಿ ತಹಶೀಲ್ದಾರ್ ವೈ.ತಿಪ್ಪೇಸ್ವಾಮಿ ಅವರು ತಹಶೀಲ್ದಾರ್ ರಮೇಶ್, ಶಿರಸ್ತೇದಾರ್ ಪಾಲಯ್ಯ, ಬಾಳೂರು ಪ್ರಭಾರ ಕಂದಾಯಾಧಿಕಾರಿ ಗಿರೀಶ್ ಹಾಗೂ ಭೂಮಿ ಕೇಂದ್ರದ ಆಪರೇಟರ್ ನೇತ್ರಾ ವಿರುದ್ಧ ದೂರು ನೀಡಿದ್ದು, ದೂರಿನ ಮೇರೆಗೆ ಇಬ್ಬರನ್ನು ಬಂಧಿಸಲಾಗಿದೆ.
ಅಕ್ರಮ ಭೂಮಂಜೂರಾತಿ ಪ್ರಕರಣಗಳ ಬಗ್ಗೆ ತಹಶೀಲ್ದಾರ್ ಗಳ ತಂಡದಿಂದ ತನಿಖೆ ಪೂರ್ಣ: ಮೂಡಿಗೆರೆ ಹಾಗೂ ಕಡೂರು ತಾಲೂಕು ವ್ಯಾಪ್ತಿಯಲ್ಲಿ ಸಾವಿರಾರು ಎಕರೆ ಸರಕಾರಿ ಭೂಮಿಯನ್ನು ಅಕ್ರಮವಾಗಿ ಮಂಜೂರು ಮಾಡಲಾಗಿದೆ ಎಂಬ ಆರೋಪ ವ್ಯಾಪಕವಾಗಿ ಕೇಳಿ ಬಂದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ 15 ತಹಶೀಲ್ದಾರ್ ನೇತೃತ್ವದ ವಿಶೇಷ ತಂಡದ ಮೂಲಕ ಅಕ್ರಮ ಭೂ ಮಂಜೂರಾತಿ ಪ್ರಕರಣಗಳ ಬಗ್ಗೆ ಸಮಗ್ರ ತನಿಖೆ ನಡೆಸಿದ್ದು, ಸುಮಾರು 2ತಿಂಗಳುಗಳ ಕಾಲ ತನಿಖೆ ನಡೆಸಿರುವ ಅಧಿಕಾರಿಗಳ ತಂಡ ಸದ್ಯ ತನಿಖೆ ಪೂರ್ಣಗೊಳಿಸಿ, ಸರಕಾರಕ್ಕೆ ವರದಿ ಸಲ್ಲಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಅಕ್ರಮ ಭೂಮಂಜೂರಾತಿ ಪ್ರಕರಣದಲ್ಲಿ ಭಾಗಿಯಾಗಿರುವ ಅನೇಕ ಕಂದಾಯಾಧಿಕಾರಿಗಳಲ್ಲಿ ನಡುಕ ಶುರುವಾಗಿದೆ.