ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಸಿಎಂ, ಡಿಸಿಎಂ
ಬೆಂಗಳೂರು: ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಕುಟುಂಬದ ಆಪ್ತರು, ಚಿತ್ರರಂಗ, ರಾಜಕೀಯ ವಲಯದ ಹಲವು ಗಣ್ಯರು ಹಾಗೂ ಅಭಿಮಾನಿಗಳು ಆಗಮಿಸುತ್ತಿದ್ದಾರೆ.
ಸ್ಪಂದನಾ ತಂದೆ ಬಿ.ಕೆ.ಶಿವರಾಂ ಅವರ ಮಲ್ಲೇಶ್ವರಂ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಚಿತ್ರ ನಟರಾದ ರವಿ ಚಂದ್ರನ್, ಯಶ್, ಮೇಘನಾ ರಾಜ್, ಉಮಾಶ್ರೀ ಸೇರಿದಂತೆ ಹಲವು ಗಣ್ಯರು ಅಂತಿಮ ದರ್ಶನ ಪಡೆದರು.
ಒಂದು ವಾರದ ಹಿಂದೆ ವಿಜಯ ರಾಘವೇಂದ್ರ ದಂಪತಿ ಬಂದು ನನ್ನನ್ನು ಭೇಟಿ ಮಾಡಿದ್ದರು. ಇಲ್ಲಿ ನೆರೆದಿರುವ ಅಭಿಮಾನಿಗಳ ಸಾಗರವೇ ಅವರನ್ನು ಜನ ಎಷ್ಟು ಇಷ್ಟ ಪಟ್ಟಿದ್ದರು ಎನ್ನುವುದು ಗೊತ್ತಾಗುತ್ತೆ. ಚಿಕ್ಕ ವಯಸ್ಸಿನಲ್ಲಿ ಹೀಗೆ ಆಗಬಾರದಿತ್ತು. ಅವರ ಕುಟುಂಬದರೆಲ್ಲ ನಮಗೆ ಬಹಳ ಆತ್ಮೀಯರು ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಂತಾಪ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಅಪೂರ್ವ ಎಂಬ ಸಿನಿಮಾದಲ್ಲಿ ನಟಿಸಿದ್ದ ಸ್ಪಂದನಾ ಅಕಾಲಿಕ ಮರಣಕ್ಕೆ ತುತ್ತಾಗಿದ್ದಾರೆ. ಬಾಳಿ ಬದುಕಬೇಕಾಗಿದ್ದ ಸ್ಪಂದನಾ ಅವರದು ಸುಂದರ ಕುಟುಂಬ. ಥೈಲ್ಯಾಂಡ್ ದೇಶಕ್ಕೆ ಪ್ರವಾಸಕ್ಕೆಂದು ತೆರಳಿದ್ದ ಸಂದರ್ಭದಲ್ಲಿ ಸ್ಪಂದನಾ ಅವರು ಮೃತಪಟ್ಟಿರುವುದು ನೋವಿನ ಸಂಗತಿ. ಬಿ.ಕೆ.ಶಿವರಾಂ ಹಾಗೂ ವಿಜಯ ರಾಘವೇಂದ್ರ ಕುಟುಂಬಕ್ಕೆ ಸ್ಪಂದನಾ ಅವರ ಸಾವಿನಿಂದ ತುಂಬಲಾರದ ನಷ್ಟವುಂಟಾಗಿದೆ. ಅವರ ಆತ್ಮಕ್ಕೆ ಶಾಂತಿ ದೊರೆಯಲಿ. ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ಅಗಲಿಕೆಯ ದು:ಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.
ಇಂದು ಸಂಜೆ ಹರಿಶ್ಚಂದ್ರ ಘಾಟ್ ನಲ್ಲಿ ಅಂತ್ಯ ಸಂಸಾರ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.