ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ | ಸಿಎಂ, ಡಿಸಿಎಂ ತೀರ್ಮಾನವೇ ಅಂತಿಮ ಆಗಬಾರದು: ಜಿ.ಪರಮೇಶ್ವರ್
ಬೆಂಗಳೂರು : ವಿಧಾನಸಭೆಯಿಂದ ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ತೀರ್ಮಾನವೇ ಅಂತಿಮ ಆಗಬಾರದು. ಪಕ್ಷದ ಹಿರಿಯರನ್ನು ಪರಿಗಣಿಸಬೇಕು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನ ಪರಿಷತ್ ಅಭ್ಯರ್ಥಿಗಳ ಆಯ್ಕೆ ವಿಚಾರ ಸಂಬಂಧ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಅವರಿಬ್ಬರೇ ತೀರ್ಮಾನ ಮಾಡುವುದು ಸರಿಯಲ್ಲ. ಪಕ್ಷದ ಹಿರಿಯ ನಾಯಕರ ಸಲಹೆ, ಅಭಿಪ್ರಾಯಗಳನ್ನೂ ಕೇಳಬೇಕು ಎಂದು ತಿಳಿಸಿದರು.
ಪಕ್ಷದಲ್ಲಿನ ಹಿರಿಯರು, ಅನುಭವಿ ನಾಯಕರ ಜೊತೆ ಚರ್ಚೆ ಒಳ್ಳೆಯದು. ಪಕ್ಷದಲ್ಲಿ ಅನೇಕ ವರ್ಷ ದುಡಿದ ನಾಯಕರ ಸಲಹೆ ಪಡೆಯಬೇಕು. ಜಾತಿವಾರು, ಪ್ರಾದೇಶಿಕವಾರು, ಪಕ್ಷಕ್ಕೆ ದುಡಿದವರಿಗೆ ಸ್ಥಾನ ಕೊಡಬೇಕು.ಇಲ್ಲಿದ್ದರೆ, ಸಮಯ ಬಂದಾಗ ಇದಕ್ಕೆ ಉತ್ತರಿಸುವೆ ಎಂದು ಪರಮೇಶ್ವರ್ ಹೇಳಿದರು.
ಇನ್ನೂ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಚರ್ಚೆ ವಿಚಾರಕ್ಕೆ, ಅದು ಪಕ್ಷದ ತೀರ್ಮಾನ. ಹೈಕಮಾಂಡ್ ಎಲ್ಲವನ್ನೂ ನೋಡಿಕೊಳ್ಳುತ್ತದೆ. ಅದನ್ನು ಡಿ.ಕೆ.ಶಿವಕುಮಾರ್ ಮುಂದುವರಿಯಲಿ ಅಂದರೆ ಅವರೇ ಇರುತ್ತಾರೆ. ಬೇರೆಯವರು ಬರಲಿ ಅಂದರೆ ಬೇರೆಯವರು ಬರುತ್ತಾರೆ ಎಂದು ತಿಳಿಸಿದರು.