ಎಲ್ಲ ಕಾಮಗಾರಿಗಳನ್ನು ಟೆಂಡರ್ ಆಹ್ವಾನಿಸಿಯೇ ಅನುಷ್ಠಾನಗೊಳಿಸಬೇಕು : ಅಧಿಕಾರಿಗಳಿಗೆ ಸಿಎಂ ತಾಕೀತು
ಬೆಂಗಳೂರು: ಕ್ರೀಡಾ ಇಲಾಖೆಯ ಕಾಮಗಾರಿಗಳ ಯೋಜನೆ ರೂಪಿಸಲು, ಮೇಲ್ವಿಚಾರಣೆಗೆ ಲೋಕೋಪಯೋಗಿ ಇಲಾಖೆಯಿಂದ ಇಬ್ಬರು ಎಂಜಿನಿಯರುಗಳ ಸೇವೆ ಪಡೆಯಬೇಕು. ಜತೆಗೆ ಎಲ್ಲ ಕಾಮಗಾರಿಗಳನ್ನು ಟೆಂಡರ್ ಆಹ್ವಾನಿಸಿಯೇ ಅನುಷ್ಠಾನಗೊಳಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ತಾಕೀತು ಮಾಡಿದ್ದಾರೆ.
ಮಂಗಳವಾರ ಇಲ್ಲಿನ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಹೊಸಪೇಟೆ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಹಾಗೂ 120 ತಾಲೂಕುಗಳಲ್ಲಿ ತಾಲೂಕು ಕ್ರೀಡಾಂಗಣಗಳಿಲ್ಲ. 5 ವರ್ಷಗಳಲ್ಲಿ ಶೇ.95ರಷ್ಟು ಕಾಮಗಾರಿಗಳನ್ನು ಕೆಆರ್ ಐಡಿಎಲ್ ಮೂಲಕ ಟೆಂಡರ್ ಕರೆಯದೆ ಮಾಡುತ್ತಿದ್ದಾರೆ. ಎರಡು ಕೋಟಿ ರೂ.ಮಿತಿಯಲ್ಲಿ ಕಾಮಗಾರಿಗಳನ್ನು ಸೀಮಿತಗೊಳಿಸಿ, ಅಪೂರ್ಣವಾಗಿರುವಂತಹ ಸ್ಥಿತಿ ಬಂದಿದೆ ಎಂದು ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಮಾಹಿತಿ ಆಧರಿಸಿ ಮೇಲ್ಕಂಡ ಸೂಚನೆ ನೀಡಿದರು.
ಬೆಂಗಳೂರಿನಲ್ಲಿ ಬಾಸ್ಕೆಟ್ ಬಾಲ್ ಹಾಗೂ ಮೈಸೂರಿನಲ್ಲಿ ಸೈಕ್ಲಿಂಗ್ ವೆಲೋಡ್ರೋಂ ಘೋಷಣೆ ಬಗ್ಗೆ ಭೂಮಿ ಗುರುತಿಸಲಾಗುತ್ತಿದೆ. ಕಂಠೀರವ ಕ್ರೀಡಾಂಗಣದಲ್ಲಿ ವಸ್ತುಸಂಗ್ರಹಾಲಯ ನಿರ್ಮಾಣ ಕುರಿತಂತೆ ಯಾವುದೇ ಕ್ರಮ ಆಗದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಮುಖ್ಯಮಂತ್ರಿ, ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಇಲಾಖೆ ಆಯುಕ್ತರಿಗೆ ಸೂಚಿಸಿದರು.
ಸಭೆಯಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದರಾಜು, ಸಿಎಂ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ಕಾರ್ಯದರ್ಶಿ ಡಾ.ಕೆ.ವಿ.ತ್ರಿಲೋಕಚಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಎನ್.ಮಂಜುನಾಥ ಪ್ರಸಾದ್, ಆಯುಕ್ತ ಶಶಿಕುಮಾರ್ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.