ರಾಜ್ಯಪಾಲರು ಕೇಂದ್ರ ಸರಕಾರದ ಪ್ರತಿನಿಧಿಯಾಗಿ ಕೆಲಸ ಮಾಡಬಾರದು : ಸಿಎಂ ಸಿದ್ದರಾಮಯ್ಯ
ಬೆಂಗಳೂರು : ತನ್ನ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡುವ ಮೂಲಕ ರಾಜ್ಯಪಾಲರು ತಾರತಮ್ಯವೆಸಗಿದ್ದು, ಅವರು ಭಾರತದ ರಾಷ್ಟ್ರಪತಿಯವರ ಪ್ರತಿನಿಧಿಗಳಾಗಿ ಕೆಲಸ ಮಾಡಬೇಕೆ, ಹೊರತು ಕೇಂದ್ರ ಸರಕಾರದ ಪ್ರತಿನಿಧಿಯಾಗಿ ಕೆಲಸ ಮಾಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಮಂಗಳವಾರ ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಎಚ್.ಡಿ.ಕುಮಾರಸ್ವಾಮಿಯವರ ಮೇಲಿನ ತನಿಖೆಗಾಗಿ ರಾಜ್ಯಪಾಲರು ಅನುಮತಿ ನೀಡಲು ಲೋಕಾಯುಕ್ತ ಮನವಿ ಮಾಡಿರುವ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, "ಸಾಯಿ ವೆಂಕಟೇಶ್ವರ ಮಿನರಲ್ಸ್ ನಲ್ಲಿ ನಡೆದ ಗಣಿಗಾರಿಕೆಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಲೋಕಾಯುಕ್ತದವರು 23-11-2023 ರಂದು ಅನುಮತಿ ಕೋರಿದ್ದು, ಆ ಬಗ್ಗೆ ರಾಜ್ಯಪಾಲರು ಯಾವುದೇ ನಿರ್ಣಯ ಕೈಗೊಳ್ಳದ ಕಾರಣ ,ಲೋಕಾಯುಕ್ತ ಮತ್ತೊಮ್ಮೆ ಕೋರಿದ್ದಾರೆ. ಆದರೆ 26-07-2024 ರಂದು ಅಬ್ರಾಹಂ ರವರು ತನ್ನ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ಕೋರಿದ ತಕ್ಷಣ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದು, ಇಂತಹ ತಾರತಮ್ಯವೇಕೆ" ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು.
ಶಶಿಕಲಾ ಜೊಲ್ಲೆ , ಎಚ್.ಡಿ. ಕುಮಾರಸ್ವಾಮಿ , ಮುರುಗೇಶ್ ನಿರಾಣಿ, ಜನಾರ್ಧನ ರೆಡ್ಡಿನವರ ಮೇಲೆ ಆರೋಪಗಳಿದ್ದು, ಇದುವರೆಗೆ ತನಿಖೆಗೆ ಆದೇಶಿಸಿರುವುದಿಲ್ಲ. ರಾಜ್ಯಪಾಲರ ಹುದ್ದೆ ಸಂವಿಧಾನಾತ್ಮಕವಾಗಿದ್ದು, ಅವರ ಮೇಲೆ ಗೌರವವಿದೆ. ಆದರೆ ರಾಜ್ಯಪಾಲರು ತಾರತಮ್ಯ ಧೋರಣೆ ಅನುಸರಿಸಬಾರದು ಎಂದರು.