ʼಮುಡಾ ಅಕ್ರಮದ ಸಾಕ್ಷ್ಯ ನಾಶಕ್ಕೆ ಯತ್ನʼ ; ಸಿಎಂ ವಿರುದ್ಧ ವಿಪಕ್ಷಗಳ ಆರೋಪ
ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಲ್ಲಿನ ಅಕ್ರಮ ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ನಾಶಕ್ಕೆ ಯತ್ನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ವಿರುದ್ಧ ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಆರೋಪಿಸಿವೆ.
ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ‘ಕಪ್ಪು ಚುಕ್ಕೆ ಮೇಲೆ ವೈಟ್ನರ್’ ಹಾಕಿ ಸಾಕ್ಷ್ಯ ನಾಶ. ಭ್ರಷ್ಟ ಸಿದ್ದರಾಮಯ್ಯನವರ ಮುಡಾ ಹಗರಣದ ಒಂದೊಂದೇ ದಾಖಲೆಗಳು ದಿನಕ್ಕೊಂದರಂತೆ ಬಯಲಾಗುತ್ತಲೇ ಇವೆ. ಇದರ ನಡುವೆ ಬಿಡುಗಡೆ ಆಗುತ್ತಿರುವ ದಾಖಲೆಗಳನ್ನು ಕುತಂತ್ರದ ಮೂಲಕ ಮುಚ್ಚಿ ಹಾಕಲಾಗುತ್ತಿದೆ ಎಂದು ಬಿಜೆಪಿ ದೂರಿದೆ.
ಈ ಸಂಬಂಧ ಮುಡಾ ಅಧಿಕಾರಿಗಳಿಗೆ ಮುಖ್ಯಮಂತ್ರಿಯವರ ಪತ್ನಿ ಬರೆದಿದ್ದಾರೆ ಎನ್ನಲಾದ ಪತ್ರವನ್ನು ಲಗತ್ತಿಸಿ ಟ್ವೀಟ್ ಮಾಡಿರುವ ಬಿಜೆಪಿ, ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಅವರು ವಿಜಯನಗರದಲ್ಲೆ ಸೈಟು ಕೊಡಿ ಎಂದು ಪತ್ರ ಬರೆದಿದ್ದು ಬೆಳಕಿಗೆ ಬಂದಿದೆ. ಆದರೆ, ಸಿದ್ದರಾಮಯ್ಯ ಹಾಕಿದ ಭ್ರಷ್ಟಾಚಾರದ ಗಂಜಿಗೆ ಮುಡಾ ಅಧಿಕಾರಿಗಳು ಸಿಎಂ ಪತ್ನಿ ಬರೆದ ಪತ್ರದಲ್ಲಿನ ಸಾಲುಗಳಿಗೆ ವೈಟ್ನರ್ ಹಾಕಿ ಹಗರಣ ಮುಚ್ಚಿ ಹಾಕಲು ಸಾಕ್ಷ್ಯ ನಾಶ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ತಮ್ಮ ಭ್ರಷ್ಟಾಚಾರ ಮುಚ್ಚಿಕೊಳ್ಳಲು ವಾಮಮಾರ್ಗ ಹಿಡಿದಿರುವ ಸಿದ್ದರಾಮಯ್ಯ ಕೊತ್ವಾಲ್ ಶಿಷ್ಯಂದಿರನ್ನು ರಾಜ್ಯದ ತುಂಬಾ ಬಿಟ್ಟು ದೊಂಬಿ ಎಬ್ಬಿಸುತ್ತಿದ್ದಾರೆ. ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕೂಡಲೇ ರಾಜೀನಾಮೆ ನೀಡಬೇಕು. ಹಾಗಾದಾರೆ ಮಾತ್ರ ಭ್ರಷ್ಟಾಚಾರ ಹೊರ ಬರಲು ಸಾಧ್ಯ. ಇಲ್ಲದೆ ಹೋದರೆ ತಮಗೆ ತಾವೇ ಕ್ಲೀನ್ ಚಿಟ್ ಕೊಟ್ಟುಕೊಂಡು ಜಗತ್ತಿನ ಮುಂದೆ ನಾನು ಸತ್ಯಹರಿಶ್ಚಂದ್ರನ ತುಂಡು ಎಂದು ಲಜ್ಜೆಬಿಟ್ಟು ಬಿಂಬಿಸಿಕೊಂಡರೂ ಅಚ್ಚರಿ ಇಲ್ಲ ಎಂದು ಬಿಜೆಪಿ ಟೀಕಿಸಿದೆ.
ಮುುಡಾ ಹಗರಣದಲ್ಲಿ ಮುಖ್ಯಮಂತ್ರಿಯ ಭ್ರಷ್ಟಾಚಾರದ ‘ಕೈ’ ವಾಡಕ್ಕೆ ಮತ್ತಷ್ಟು ಸಾಕ್ಷಿಗಳನ್ನು ಮಾಧ್ಯಮಗಳೇ ಬೆತ್ತಲು ಮಾಡುತ್ತಿವೆ. ನಾವು ಇಂತಹ ಜಾಗದಲ್ಲೇ ನಿವೇಶನ ಕೊಡಿ ಎಂದು ಅರ್ಜಿ ಹಾಕಿರಲಿಲ್ಲ ಎಂದು ಸುಳ್ಳು ಸಮರ್ಥನೆ ಕೊಟ್ಟಿದ್ದ ಸಿಎಂ ಸಿದ್ದರಾಮಯ್ಯ ಅವರೇ ಈಗೇನು ಹೇಳುತ್ತೀರಿ? ಎಂದು ಜೆಡಿಎಸ್ ಪ್ರಶ್ನಿಸಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಜೆಡಿಎಸ್, ಇಂತಹದ್ದೇ ಜಾಗದಲ್ಲಿ ಸೈಟು ಕೊಡುವಂತೆ ನಿಮ್ಮ ಧರ್ಮಪತ್ನಿ ಪಾರ್ವತಿ ಅವರೇ ಮುಡಾ ಪ್ರಾಧಿಕಾರಕ್ಕೆ ಬರೆದಿರುವ ಪತ್ರವೇ ಪ್ರತ್ಯಕ್ಷ್ಯ ಸಾಕ್ಷಿಯಾಗಿ ನಿಂತಿದೆ. ಆ ಪತ್ರದಲ್ಲಿ ಯಾವ ಸ್ಥಳದಲ್ಲಿ ಎಂದು ಬರೆದಿರುವ ಜಾಗಕ್ಕೆ ವೈಟ್ ನರ್ ಹಾಕಿದವರು ಯಾರು? ಎಂದು ಕೇಳಿದೆ.
ಇದು ಅಭಿವೃದ್ಧಿ ಹೊಂದಿದ ಬಡಾವಣೆಯಲ್ಲಿ ನೀವು ನಿವೇಶನ ಕಬಳಿಸಲು ಹಾಗೂ ನಿಮ್ಮ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಮಾಡಿರುವ ಷಡ್ಯಂತ್ರ ಅಲ್ಲವೇ ಸಿದ್ದರಾಮಯ್ಯನವರೇ? ಮುಖ್ಯಮಂತ್ರಿಯಾಗಿ ಸ್ವಜನ ಪಕ್ಷಪಾತ, ಅಧಿಕಾರ ದುರ್ಬಳಕೆ, ಕಾನೂನಿನ ದುರುಪಯೋಗ ಮಾಡಿಕೊಂಡಿದ್ದೀರಿ ಎಂದು ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ.
ಸತ್ಯಹರಿಶ್ಚಂದ್ರ ಎಂದು ಬೆನ್ನುತಟ್ಟಿಕೊಳ್ಳುವ ನೀವು ಹಾಗೂ ನಿಮ್ಮ ಕಾಂಗ್ರೆಸ್ ನಾಯಕರು ರಾಜ್ಯದ ಜನತೆಗೆ ಆ ಪತ್ರದ ಬಗ್ಗೆ ಉತ್ತರಿಸಿ. ಮುಡಾದಲ್ಲಿ ಭ್ರಷ್ಟಾಚಾರ ಎಸಗಿರುವ ನೀವು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಆ ಹುದ್ದೆಯ ಘನತೆಯನ್ನು ಕಾಪಾಡಿ ಎಂದು ಜೆಡಿಎಸ್ ಒತ್ತಾಯಿಸಿದೆ.