ಹೊಸದಿಲ್ಲಿಯಲ್ಲಿ ಹೈಕಮಾಂಡ್ ನಾಯಕರ ಜತೆ ಜರ್ಚೆ : ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?
ಬೆಂಗಳೂರು : ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರ ಹಾಗೂ ವಿಪಕ್ಷಗಳ ನಡೆ ಹಾಗೂ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ಪಕ್ಷದ ವರಿಷ್ಠರೊಂದಿಗೆ ಚರ್ಚೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಗಾಂಧಿಭವನದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿನ್ನೆ ಉಪಮುಖ್ಯಮಂತ್ರಿಗಳು, ಗೃಹ ಸಚಿವರು ಸೇರಿದಂತೆ ಕೆಲ ಸಚಿವರೊಂದಿಗೆ ಹೊಸದಿಲ್ಲಿಗೆ ತೆರಳಾಗಿತ್ತು. ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ಪಕ್ಷದ ವರಿಷ್ಠರಿಗೆ ವಿವರಿಸಲಾಗಿದೆ. ವಿಪಕ್ಷಗಳು ಮುಡಾ ಪ್ರಕರಣಕ್ಕೆ ಪಾದಯಾತ್ರೆ ಮಾಡಿದ್ದು, ಅದನ್ನು ರಾಜಕೀಯವಾಗಿ ಎದುರಿಸುವ ಬಗ್ಗೆ ಚರ್ಚಿಸಲಾಗಿದೆ. ನಮ್ಮ ಸರ್ಕಾರ ರಾಜ್ಯಪಾಲರು ಕೊಟ್ಟಿರುವ ಅನುಮತಿ ಕಾನೂನು ಬಾಹಿರ ಮತ್ತು ಸಂವಿಧಾನ ಬಾಹಿರವಾಗಿದೆ ಎಂದು ತಿಳಿಸಿ, ರಾಜ್ಯಪಾಲರ ನಿರ್ಣಯವನ್ನು ಉಚ್ಛ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದ್ದು, ವಿಚಾರಣೆ ಆಗಸ್ಟ್ 29 ಕ್ಕೆ ಮುಂದೂಡಿದೆ. ಸಚಿವ ಸಂಪುಟದಲ್ಲಿಯೂ ಅವರ ನಿರ್ಣಯವನ್ನು ಸ್ಪಷ್ಟವಾಗಿ ಖಂಡಿಸಿರುವ ಬಗ್ಗೆಯೂ ವರಿಷ್ಠರಿಗೆ ವಿವರಿಸಲಾಗಿದೆ ಎಂದರು.
ವಾಪಸ್ಸಾಗಿರುವ ಬಿಲ್ಗಳ ಪರಿಶೀಲನೆ :
ಸರ್ಕಾರ ಸಲ್ಲಿಸಿದ ಬಿಲ್ ಗಳನ್ನು ರಾಜ್ಯಪಾಲರು ವಾಪಸ್ಸು ಕಳಿಸಿದ್ಧು, ರಾಜಭವನ ಮತ್ತು ಸರ್ಕಾರದ ನಡುವೆ ಸಂಘರ್ಷ ಪ್ರಾರಂಭವಾಗಿದೆಯೇ ಎಂಬ ಬಗ್ಗೆ ಪ್ರತಿಕ್ರಿಯೆ ನೀಡಿ, ಆರು ಮಸೂದೆಗಳನ್ನು ವಾಪಸ್ಸು ಕಳಿಸಲಾಗಿದ್ದು, ಈ ಬಗ್ಗೆ ಮತ್ತೊಮ್ಮೆ ಸಚಿವಸಂಪುಟದಲ್ಲಿ ಚರ್ಚಿಸಲಾಗುವುದು. ರಾಜ್ಯಪಾಲರಿಗೆ ಸಲ್ಲಿಸಲಾಗಿದ್ದ ಮಸೂದೆಗಳು, ವಿಧಾನಸಭೆ ಹಾಗೂ ವಿಧಾನಪರಿಷತ್ತಿನಲ್ಲಿ ಅಂಗೀಕೃತಗೊಂಡಿದ್ದರಿಂದ , ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದರು.
ದರ ಹೆಚ್ಚಳದ ಬಗ್ಗೆ ಚರ್ಚಿಸಿ ಕ್ರಮ :
ಸರ್ಕಾರ ಬಸ್ ದರಗಳನ್ನು ಹೆಚ್ಚಿಸಲಿದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಸ್ ದರದಂತೆಯೇ ನೀರಿನ ದರವನ್ನು ಏರಿಸಲಾಗುವುದು ಎಂದಿದ್ದರು. ಆದರೆ ಯಾವುದೇ ತೀರ್ಮಾನವನ್ನು ಇನ್ನೂ ಕೈಗೊಂಡಿಲ್ಲ. ನೀರಿನ ದರವನ್ನೂ ಬಹಳ ವರ್ಷಗಳಿಂದ ಏರಿಸಿಲ್ಲ. ಜಲಮಂಡಳಿಯಲ್ಲಿ ಕಷ್ಟ ಪರಿಸ್ಥಿತಿಯಿದ್ದು, ದರಗಳನ್ನು ಹೆಚ್ಚಿಸುವ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.