ಉದ್ಯಮಶೀಲತೆ, ಸುಸ್ಥಿರ ಅಭಿವೃದ್ಧಿಯ ವಾತಾವರಣ ಕಲ್ಪಿಸಲು ಸರಕಾರ ಬದ್ಧ : ಸಿಎಂ ಸಿದ್ದರಾಮಯ್ಯ
ಯು.ಎಸ್-ಇಂಡಿಯಾ ಬಿಸಿನೆಸ್ ಕೌನ್ಸಿಲ್ನ ಪ್ರತಿನಿಧಿಗಳೊಂದಿಗೆ ದುಂಡು ಮೇಜಿನ ಸಭೆ
PC : x/@CMofKarnataka
ಬೆಂಗಳೂರು : ಉದ್ಯಮಶೀಲತೆ ಹಾಗೂ ಸುಸ್ಥಿರ ಅಭಿವೃದ್ಧಿಯನ್ನು ಪೋಷಿಸುವ ವಾತಾವರಣವನ್ನು ಕಲ್ಪಿಸಲು ನಮ್ಮ ಸರಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ ಯು.ಎಸ್-ಇಂಡಿಯಾ ಬಿಸಿನೆಸ್ ಕೌನ್ಸಿಲ್ನ ಪ್ರತಿನಿಧಿಗಳೊಂದಿಗೆ ದುಂಡು ಮೇಜಿನ ಸಭೆಯಲ್ಲಿ ಮಾತನಾಡಿದ ಅವರು, ಕರ್ನಾಟಕ ಅಪಾರ ಅವಕಾಶಗಳನ್ನು ಒದಗಿಸುವ ರಾಜ್ಯವಾಗಿದ್ದು, ನಮ್ಮ ಜನ ಹಾಗೂ ಜಾಗತಿಕ ಸಮುದಾಯದ ಭವಿಷ್ಯಕ್ಕಾಗಿ ಇವುಗಳನ್ನು ಬಳಸಿಕೊಳ್ಳಲು ಬದ್ಧರಾಗಿದ್ದೇವೆ ಎಂದು ಹೇಳಿದರು.
ಇಂದು ನಾವು ನಡೆಸಿದ ಚರ್ಚೆಯು ಕರ್ನಾಟಕ ಮತ್ತು ಯುನೈಟೆಡ್ ಸ್ಟೇಟ್ಸ್ ಮಧ್ಯೆ ಇರುವ ಸದೃಢ ಮತ್ತು ಕ್ರಿಯಾತ್ಮಕ ಪಾಲುದಾರಿಕೆಗೆ ಸಾಕ್ಷಿಯಾಗಿದೆ. ಈ ದುಂಡುಮೇಜಿನ ಸಭೆಯಲ್ಲಿ ನಾವು ಕೇವಲ ವ್ಯಾವಹಾರಿಕ ಅವಕಾಶಗಳನ್ನಷ್ಟೇ ಚರ್ಚೆ ಮಾಡುತ್ತಿಲ್ಲ. ಹಿಂದೆಂದಿಗಿಂತಲೂ ಹೆಚ್ಚಿನ ಸಂಪರ್ಕ ಹೊಂದಿರುವ ಹಾಗೂ ಭವಿಷ್ಯದಲ್ಲಿ ಹೆಚ್ಚು ಸಮೃದ್ಧಿಯನ್ನು ತರುವ ನೀಲನಕ್ಷೆಯನ್ನು ರೂಪಿಸುತ್ತಿದ್ದೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಬೆಂಗಳೂರು ಕರ್ನಾಟಕದ ರಾಜಧಾನಿ ಮಾತ್ರವಲ್ಲದೆ ಭಾರತದ ಸಿಲಿಕಾನ್ ವ್ಯಾಲಿ ಕೂಡ ಹೌದು. ಈ ನಗರವು ಭಾರತದ ತಂತ್ರಜ್ಞಾನ ಕ್ರಾಂತಿಯ ಮುಂಚೂಣಿಯಲ್ಲಿರುವುಲ್ಲದೇ ನಾವೀನ್ಯತೆ, ಉದ್ಯಮಶೀಲತೆ ಮತ್ತು ಅತ್ಯಾಧುನಿಕ ಸಂಶೋಧನೆ ಮತ್ತು ಅಭಿವೃದ್ಧಿಯ ಕೇಂದ್ರವಾಗಿ ಮುಂದುವರೆದಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಅಭಿವೃದ್ಧಿ ಮತ್ತು ಯಶಸ್ಸಿಗೆ ಪೂರಕವಾದ ವಾತಾವರಣವನ್ನು ಸೃಜಿಸಲು ನಾವು ನಿರಂತರವಾಗಿ ಶ್ರಮಿಸುತ್ತಿದ್ದೇವೆ. ಕರ್ನಾಟಕ ವೈವಿಧ್ಯಮಯ ಸಂಪನ್ಮೂಲಗಳ ನಾಡು. ಕೌಶಲ್ಯಭರಿತ ಕಾರ್ಯಪಡೆಯಿಂದ ಹಿಡಿದು ನೈಸರ್ಗಿಕ ಸಂಪತ್ತಿನವರೆಗೆ, ವೇಗವಾಗಿ ಬೆಳೆಯುತ್ತಿರುವ ಸ್ಟಾರ್ಟ್ ಅಪ್ ಸಂಸ್ಕೃತಿಯಿಂದ ಹಿಡಿದು ಸದೃಢ ಉತ್ಪಾದನಾ ತಳಪಾಯ ಇಲ್ಲಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ರಾಜ್ಯವು ಜಗತ್ತಿನ ಮುಂಚೂಣಿಯಲ್ಲಿರುವ ಐ.ಟಿ. ಕಂಪೆನಿಗಳಿಗೆ, ಬಯೋ ಟೆಕ್ನಾಲಜಿ ಉದ್ಯಮಗಳಿಗೆ ಮತ್ತು ಸ್ಟಾರ್ಟ್ಅಪ್ಗಳಿಗೆ ತವರೂರಾಗಿದೆ. ನಾವೀನ್ಯತೆ, ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್ ಹಾಗೂ ಸುಸ್ಥಿರ ಅಭಿವೃದ್ಧಿಗೆ ಪೂರಕವಾಗಿ ನಮ್ಮ ನೀತಿಗಳನ್ನು ರೂಪಿಸಲಾಗಿದೆ. ಕರ್ನಾಟಕ ರಾಜ್ಯ ವ್ಯಾಪಾರ -ವ್ಯವಹಾರಗಳಿಗೆ ಮುಕ್ತವಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಕರ್ನಾಟಕದಲ್ಲಿರುವ ಉತ್ತಮ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಲು ಆಹ್ವಾನಿಸುತ್ತೇನೆ. ಐಟಿ-ಬಿಟಿ, ಏರೋಸ್ಪೇಸ್ ಅಥವಾ ಇನ್ಯಾವುದೇ ಕ್ಷೇತ್ರವಿರಲಿ, ಜಾಗತಿಕ ಸವಾಲುಗಳನ್ನು ಎದುರಿಸಲು ನಿಮ್ಮ ಸಹಯೋಗದೊಂದಿಗೆ ಒಟ್ಟಾಗಿ ಪರಿಹಾರಗಳನ್ನು ಕಂಡುಕೊಳ್ಳಲು ನಾವು ಸಿದ್ಧರಿದ್ದೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ಐ.ಟಿ.-ಬಿ.ಟಿ. ಇಲಾಖೆಯ ಪ್ರಧಾನ ಕಾರ್ಯದರ್ಶಿ ಏಕ್ರೂಪ್ ಕೌರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಸೇರಿ ಹಲವರು ಉಪಸ್ಥಿತರಿದ್ದರು.