ಕೃಷಿ ಪಂಪ್ ಸೆಟ್ಗೆ ಆಧಾರ್ ಜೋಡಣೆ ಕೈಬಿಡಲು ಒತ್ತಾಯಿಸಿ ಸಿಎಂಗೆ ಮನವಿ
ಬೆಂಗಳೂರು : ಕೃಷಿ ಪಂಪ್ಸೆಟ್ಗೆ ಆಧಾರ್ ಜೋಡಣೆ ಮಾಡುತ್ತಿರುವುದನ್ನು ಕೈಬಿಡಬೇಕು, ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ರದ್ದು ಮಾಡಬೇಕೆಂದು ಒತ್ತಾಯಿಸಿ ರೈತ ಸಂಘಟನೆಗಳ ಒಕ್ಕೂಟ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ಮಂಗಳವಾರ ವಿಧಾನಸೌಧದಲ್ಲಿನ ಸಿಎಂ ಕಚೇರಿಯಲ್ಲಿ ತಮ್ಮನ್ನು ಭೇಟಿ ಮಾಡಿದ ರೈತರ ಬೇಡಿಕೆಗಳಿಗೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೃಷಿ ಪಂಪ್ಸೆಟ್ಗೆ ಆಧಾರ್ ಜೋಡಣೆ ಮಾಡಬೇಕಾಗಿಲ್ಲ. ಸದ್ಯಕ್ಕೆ ಹೇಗಿದೆಯೋ ಹಾಗೆ ಮುಂದುವರಿಯಲಿದೆ ಎಂದು ಭರವಸೆ ನೀಡಿದ್ದಾರೆಂದು ಕುರುಬೂರು ತಿಳಿಸಿದರು.
ಎಲ್ಲ ಜಲಾಶಯಗಳ ಹಾಗೂ ಕೆರೆಗಳ ಹೂಳು ತೆಗೆಸಿ, ಆ ಮಣ್ಣನ್ನು ರೈತರ ಜಮೀನಿಗೆ ಸರಬರಾಜು ಮಾಡುವ ಯೋಜನೆ ರೂಪಿಸಬೇಕು. ತೆಲಂಗಾಣ ಮಾದರಿಯಲ್ಲಿ ಈ ಕೆಲಸ ಮಾಡಬೇಕು. ಕೃಷಿ ಸಾಲ ಪಾವತಿಸದ ರೈತರ ಜಮೀನು ವಶಪಡಿಸಿಕೊಳ್ಳುವ ಕಾಯ್ದೆ ಜಾರಿ ರದ್ದುಗೊಳಿಸಲು ಕೋರಿ ಕೇಂದ್ರಕ್ಕೆ ಒತ್ತಾಯಿಸಬೇಕೆಂದು ಮನವಿ ಮಾಡಿದ್ದೇವೆ ಎಂದು ಕುರುಬೂರು ಶಾಂತಕುಮಾರ್ ಮಾಹಿತಿ ನೀಡಿದರು.