ನಾನು ಅಧಿಕಾರದಲ್ಲಿರುವಾಗ ಕನ್ನಡಕ್ಕೆ ಚ್ಯುತಿಯಾಗಲು ಬಿಡುವುದಿಲ್ಲ : ಸಿಎಂ ಸಿದ್ದರಾಮಯ್ಯ
‘ಕನ್ನಡ ಕಲಿಯುವ ವಾತಾವರಣ ನಿರ್ಮಿಸಿದಾಗ ಭಾಷೆ ಬೆಳೆಯಲು ಸಾಧ್ಯ’
PC : @siddaramaiah
ಬೆಂಗಳೂರು: ‘ಕನ್ನಡೇತರರು ಕನ್ನಡವನ್ನು ಕಲಿಯುವ ವಾತಾವರಣವನ್ನು ನಾವು ನಿರ್ಮಿಸಿದಾಗ ಮಾತ್ರ, ನಮ್ಮ ಭಾಷೆ ಎತ್ತರಕ್ಕೆ ಬೆಳೆಯಲು ಸಾಧ್ಯ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ತಿಳಿಸಿದ್ದಾರೆ.
ಶುಕ್ರವಾರ ಇಲ್ಲಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಕರ್ನಾಟಕ ರಾಜ್ಯೋತ್ಸವ ಸಮಿತಿ ನೃಪತುಂಗ ಮಂಟಪ ಆಯೋಜಿಸಲಾಗಿದ್ದ ರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, 1956ರ ನ.1ರಂದು ರಾಜ್ಯ ಏಕೀಕರಣಗೊಂಡು ಮೈಸೂರು ರಾಜ್ಯ ಉದಯವಾಯಿತು. ಮಾಜಿ ಸಿಎಂ ದೇವರಾಜ ಅರಸು ಅವಧಿಯಲ್ಲಿ 1973ರ ನ.1ರಂದು ಮೈಸೂರು ರಾಜ್ಯ, ಇಡೀ ರಾಜ್ಯವನ್ನು ಪ್ರತಿನಿಧಿಸುವ ಹೆಸರಾದ ಕರ್ನಾಟಕವೆಂದು ಮರುನಾಮಕರಣಗೊಂಡಿತು ಎಂದರು.
ಈ ಸುವರ್ಣ ಸಂಭ್ರಮವನ್ನು 2023ರ ನ.1ರಂದು 51ನೆ ವರ್ಷ ಎಂದು ಕರ್ನಾಟಕ ನಾಮಕರಣಗೊಂಡ ದಿನವೆಂದು ವರ್ಷಪೂರ್ತಿ ಆಚರಿಸಬೇಕೆಂದು ನಿರ್ಧರಿಸಲಾಯಿತು. ಇಡೀ ರಾಜ್ಯದಲ್ಲಿ ಕನ್ನಡ ನಾಡು, ನುಡಿ, ನೆಲ, ಜಲದ ಮಹತ್ವ ಪ್ರಚುರಪಡಿಸಲು ‘ಹೆಸರಾಯಿತು ಕರ್ನಾಟಕ, ಉಸಿರಾಯಿತು ಕನ್ನಡ’ ಎಂಬ ಘೋಷವಾಕ್ಯದಡಿ ಇಡೀ ವರ್ಷ ಕನ್ನಡವನ್ನು ಸಂಭ್ರಮಿಸಲಾಯಿತು. ಕನ್ನಡ ನಾಡಿನ ಏಕೀಕರಣಕ್ಕೆ, ಏಳಿಗೆಗೆ ನೂರು ಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಹೇಳಿದರು.
ಭಾಷೆಯ ಬಗ್ಗೆ ಅಭಿಮಾನವಿರಲಿ: ನಾನು ಅಧಿಕಾರದಲ್ಲಿರುವಾಗ ಕನ್ನಡಕ್ಕೆ ಚ್ಯುತಿಯಾಗಲು ಬಿಡುವುದಿಲ್ಲ. 1983ರ ಕನ್ನಡ ಕಾವಲು ಸಮಿತಿಯ ಅಧ್ಯಕ್ಷನಾಗಿದ್ದೆ. ಕನ್ನಡವನ್ನು ಕಾಯಲು ಸಮಿತಿ ಬೇಕೆನ್ನುವ ಸ್ಥಿತಿ ಕರ್ನಾಟಕದಲ್ಲಿ ಉಂಟಾಗಿದೆ. ಇಂದಿಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಎಂದು ಈ ಸಮಿತಿ ಕಾರ್ಯನಿರ್ವಹಿಸುತ್ತಿದೆ. ಮನುಷ್ಯ ಮನುಷ್ಯನನ್ನು ಪ್ರೀತಿಸುವ ವಿಷಯದಲ್ಲಿ ಉದಾರತನವಿರಬೇಕು ಎಂದರು.
ಭಾಷೆ ಸಂಸ್ಕೃತಿಯ ಬಗ್ಗೆ ಅಭಿಮಾನವಿರಬೇಕು. ಬೇರೆ ಭಾಷೆ ಕಲಿತರೂ, ಕನ್ನಡ ತಾಯಿಭಾಷೆಯನ್ನು ಮರೆಯಬಾರದು. ಕನ್ನಡ ಭಾಷೆಗೆ ಶಾಸ್ತ್ರೀಯ ಭಾಷೆ ಎಂಬ ಸ್ಥಾನಮಾನ ದೊರೆತಿದೆ. ಕನ್ನಡಕ್ಕೆ ಸೂಕ್ತ ಗೌರವ ಸಿಗುವ ಕೆಲಸವನ್ನು ನಾವೆಲ್ಲರೂ ಮಾಡಬೇಕಿದೆ. ವಿಧಾನಸೌಧದ ಆವರಣದಲ್ಲಿ ಭುವನೇಶ್ವರಿ ತಾಯಿಯ ಪ್ರತಿಮೆಯನ್ನು ಸಧ್ಯದಲ್ಲಿಯೇ ಸ್ಥಾಪಿಸಲಾಗುವುದು ಎಂದು ಹೇಳಿದರು.
ಅಧಿಕಾರಕ್ಕೆ ಹಪಹಪಿಸಿದವರಲ್ಲ: ಪ್ರತಿ ವರ್ಷದ ನ.1ಕ್ಕೆ ಕನ್ನಡ ಹಬ್ಬದ ದಿನ. ಕನ್ನಡ ಚಳವಳಿ ಪಕ್ಷದ ವಾಟಾಳ್ ನಾಗರಾಜ್ ಇದೇ ರೀತಿ 100 ರಾಜ್ಯೋತ್ಸವಗಳನ್ನು ಆಚರಿಸುವಂತಾಗಲಿ. ಕನ್ನಡಪರ ಹೋರಾಟಗಾರರಾದ ಇವರು ದೀರ್ಘಕಾಲದಿಂದ ಕನ್ನಡ ನಾಡು, ನುಡಿ, ನೆಲ,ಜಲಗಳ ಸಂರಕ್ಷಣೆಗೆ ಶ್ರಮಿಸಿದ್ದಾರೆ. ರಾಜಕೀಯವಾಗಿ ಬೇರೆ ಪಕ್ಷಗಳಿಂದ ಆಹ್ವಾನ ಬಂದಿದ್ದರೂ, ಕನ್ನಡ ಚಳವಳಿ ಪಕ್ಷ ಬಿಟ್ಟು ಬೇರೆಡೆಗೆ ಅವರು ಮುಖ ಮಾಡಲಿಲ್ಲ. ನನ್ನನ್ನೂ ಸೇರಿದಂತೆ, ಕೆಂಗಲ್ ಹನುಮಂತಯ್ಯ, ವೀರೇಂದ್ರ ಪಾಟೀಲ್, ದೇವರಾಜ ಅರಸು, ಗುಂಡೂರಾವ್ ಸೇರಿದಂತೆ ಹಲವು ರಾಜಕೀಯ ಧುರೀಣರಿಗೆ ಆಪ್ತರಾಗಿದ್ದರೂ, ಎಂದಿಗೂ ಅಧಿಕಾರಕ್ಕೆ ಹಪಹಪಿಸಿದವರಲ್ಲ ಎಂದು ನುಡಿದರು.
‘ಸಿದ್ದರಾಮಯ್ಯರನ್ನು ಯಾವುದಾದರೂ ಶಕ್ತಿ ಸಿಎಂ ಸ್ಥಾನದಿಂದ ಕೆಳಗಿಳಿಸಲು ಹೋದರೆ ಕರ್ನಾಟಕದಲ್ಲಿ ಕ್ರಾಂತಿ ಆಗುತ್ತದೆ. ಸಿಎಂ ಸ್ಥಾನದಿಂದ ಅವರನ್ನು ಕೆಳಗಿಳಿಸಿದರೆ ಸಿದ್ದರಾಮಯ್ಯರಿಗೆ ಮಾತ್ರವಲ್ಲ, ಪ್ರಜಾಪ್ರಭುತ್ವಕ್ಕೆ ಅನ್ಯಾಯ ಮಾಡಿದಂತೆ. ಯಾರೋ ಬೀದಿಯಲ್ಲಿ ಹೋಗುವವರಿಬ್ಬರು ದೂರು ಕೊಟ್ಟರೆಂದು ವಿಪಕ್ಷದವರು ಎತ್ತಿಕಟ್ಟಿ ವಿಚಾರಣೆಗೆ ಅನುಮತಿ ಕೊಡಿಸಿದ್ದಾರೆ. ಸಿದ್ದರಾಮಯ್ಯರ ನಂತರ ಯಾರು ಎಂಬ ಪ್ರಶ್ನೆಗೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ನಲ್ಲಿ ಉತ್ತರವಿಲ್ಲ. ಸಂವಿಧಾನ ಬದ್ಧವಾಗಿ ಯಾರೂ ಬೇಕಾದರೂ ಸಿಎಂ ಆಗಬಹುದು. ಆದರೆ ಸಿದ್ದರಾಮಯ್ಯ ಇತಿಹಾಸವೇನು, ಅವರ ಅನುಭವವೇನು?. ವಿಧಾನಸಭೆಗೆ ದರೋಡೆ ಮಾಡಿದವರು, ಜೈಲಿಗೆ ಹೋದವರು ಬರಬೇಕೇ?’
-ವಾಟಾಳ್ ನಾಗರಾಜ್, ಕನ್ನಡಪರ ಹೋರಾಟಗಾರ