ಅಪಪ್ರಚಾರ, ಸುಳ್ಳು ಆರೋಪಗಳನ್ನು ಮೆಟ್ಟಿನಿಂತು ದಿಗ್ವಿಜಯ ಸಾಧಿಸಿದ್ದೇವೆ : ಸಿಎಂ ಸಿದ್ದರಾಮಯ್ಯ
"ಹಗರಣ ಸೃಷ್ಟಿಸಿ ನನ್ನ ಕುಟುಂಬವನ್ನು ಹಣಿಯುವ ಪ್ರಯತ್ನ ಮಾಡಿದ್ದರು"
ಸಿಎಂ ಸಿದ್ದರಾಮಯ್ಯ
ಬೆಂಗಳೂರು : "ಇದು ಕಾಂಗ್ರೆಸ್ ಪಕ್ಷದ ಸತ್ಯ ಮತ್ತು ಬಿಜೆಪಿ-ಜೆಡಿಸ್ ಪಕ್ಷಗಳ ಸುಳ್ಳುಗಳ ನಡುವಿನ ಚುನಾವಣೆಯಾಗಿತ್ತು. ಸತ್ಯ ಗೆದ್ದಿದೆ. ವಿರೋಧ ಪಕ್ಷಗಳ ನಿರಂತರ ಅಪಪ್ರಚಾರ, ಸುಳ್ಳು ಆರೋಪಗಳನ್ನು ಮೆಟ್ಟಿನಿಂತು ನಾವು ಸಾಧಿಸಿರುವ ಈ ಗೆಲುವು ದಿಗ್ವಿಜಯವಾಗಿ ಕಾಣುತ್ತಿದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಶನಿವಾರ ಗೃಹ ಕಚೇರಿ ಕೃಷ್ಣಾದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ. ಇದು ರಾಜ್ಯ ಸರಕಾರದ ಸಾಧನೆ, ಕಾಂಗ್ರೆಸ್ ಪಕ್ಷದ ಸಿದ್ಧಾಂತ ಮತ್ತು ನಮ್ಮ ಕಾರ್ಯಕರ್ತರ ಅವಿರತ ಶ್ರಮದ ಗೆಲುವು ಎಂದು ಬಣ್ಣಿಸಿದರು.
ಈ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಮತನೀಡಿ, ಆಶೀರ್ವದಿಸಿದ ಶಿಗ್ಗಾಂವಿ, ಸಂಡೂರು ಹಾಗೂ ಚನ್ನಪಟ್ಟಣದ ಮತದಾರರಿಗೆ ನನ್ನ ಅನಂತ ಧನ್ಯವಾದಗಳು. ವಿಧಾನಸಭೆಗೆ ಪ್ರವೇಶಿಸಿರುವ ನಮ್ಮ ಅಭ್ಯರ್ಥಿಗಳಾದ ಯಾಸೀರ್ ಅಹ್ಮದ್ ಖಾನ್ ಪಠಾಣ್, ಅನ್ನಪೂರ್ಣ ತುಕಾರಾಮ್ ಹಾಗೂ ಸಿ.ಪಿ.ಯೋಗೇಶ್ವರ್ಗೆ ಅಭಿನಂದನೆಗಳು ಎಂದು ಮುಖ್ಯಮಂತ್ರಿ ಹೇಳಿದರು.
ಈ ಗೆಲುವು ನಮ್ಮ ಸರಕಾರದ ಮೇಲಿನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ನಮ್ಮ ಸರಕಾರದ ಸಾಧನೆಗಳನ್ನು ಜನ ಬೆಂಬಲಿಸುತ್ತಲೇ ಬಂದಿದ್ದಾರೆ. ನಾನು ದಂತಗೋಪುರದಲ್ಲಿ ಕೂತವನಲ್ಲ, ನಿರಂತರವಾಗಿ ಜನರ ಜೊತೆ ಒಡನಾಟ ಇಟ್ಟುಕೊಂಡವನು, ಗ್ಯಾರಂಟಿ ಯೋಜನಗಳ ಫಲಾನುಭವಿಗಳು ಖುಷಿಯಾಗಿದ್ದಾರೆ ಎಂದು ಅವರು ತಿಳಿಸಿದರು.
ಬಿಜೆಪಿ ಮತ್ತು ಜೆಡಿಎಸ್ ನಾಯಕರು ಮಾಧ್ಯಮಗಳ ಮೂಲಕ ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಪ್ರಚಾರ ಮಾಡುತ್ತಿದ್ದರು. ಸ್ವತಃ ಪ್ರಧಾನಿ ಮೋದಿ ನಮ್ಮ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಬಗ್ಗೆ ಸುಳ್ಳು ಹೇಳಿದರು. ಮಹಾರಾಷ್ಟ್ರದಲ್ಲಿ ಸುಳ್ಳು ಜಾಹೀರಾತು ನೀಡಿದ್ದರು. ಇದಕ್ಕೆಲ್ಲ ಜನ ಉತ್ತರ ಕೊಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದರು.
ಈ ಬಾರಿ ನಾನು ಮುಖ್ಯಮಂತ್ರಿಯಾದ ನಂತರ ನನ್ನ ಮತ್ತು ನಮ್ಮ ಸರಕಾರದ ವಿರುದ್ದ ಸುಳ್ಳು ಆರೋಪಗಳನ್ನು ಮಾಡುತ್ತಾ ನನ್ನ ಚಾರಿತ್ರ್ಯ ಹನನ ಮಾಡುವ ಪ್ರಯತ್ನವನ್ನು ಬಿಜೆಪಿ ಮತ್ತು ಜೆಡಿಎಸ್ ನಾಯಕರು ಮಾಡುತ್ತಾ ಬಂದಿದ್ದಾರೆ. ರಾಜಭವನದಿಂದ ಹಿಡಿದು ಕೇಂದ್ರ ತನಿಖಾ ಸಂಸ್ಥೆಗಳ ವರೆಗೆ ಎಲ್ಲವನ್ನೂ ದುರ್ಬಳಕೆ ಮಾಡಿ ಹಗರಣವನ್ನು ಸೃಷ್ಟಿಸಿ ನನ್ನನ್ನು ಮತ್ತು ನನ್ನ ಕುಟುಂಬವನ್ನು ಹಣಿಯುವ ಪ್ರಯತ್ನ ಮಾಡಿದ್ದರು ಎಂದು ಅವರು ವಾಗ್ದಾಳಿ ನಡೆಸಿದರು.
ಬಿಜೆಪಿ ಮತ್ತು ಜೆಡಿಎಸ್ ಅಪಪ್ರಚಾರದ ಮೂಲಕ ಧಾರ್ಮಿಕ ಉನ್ಮಾದಗಳನ್ನು ಸೃಷ್ಟಿಸಿ ಜಾತಿ-ಧರ್ಮಗಳ ನಡುವೆ ಒಡಕು ಮೂಡಿಸಿ ಕಾಂಗ್ರೆಸ್ ಪಕ್ಷವನ್ನು ಮಣಿಸಲು ಪ್ರಯತ್ನಿಸಿದೆ. ಕರ್ನಾಟಕದ ಜಾತ್ಯತೀತ ಮತ್ತು ಶಾಂತಿಪ್ರಿಯ ಜನತೆ ಇದನ್ನು ಒಪ್ಪಿಕೊಳ್ಳದೆ ನಮ್ಮನ್ನು ಗೆಲ್ಲಿಸಿದ್ದಾರೆ ಎಂದು ಮುಖ್ಯಮಂತ್ರಿ ತಿಳಿಸಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮತದಾರರು 135 ಸ್ಥಾನಗಳನ್ನು ನೀಡಿ ನಮ್ಮನ್ನು ಗೆಲ್ಲಿಸಿದ್ದಾರೆ. ಆದರೆ ಬಿಜೆಪಿ ಮತ್ತು ಜೆಡಿಎಸ್ ನಮ್ಮ ಸರಕಾರವನ್ನು ಉರುಳಿಸುವ ಪ್ರಯತ್ನ ಮಾಡುತ್ತಲೆ ಬಂದಿದ್ದಾರೆ. ಸಾವಿರಾರು ಕೋಟಿ ರೂಪಾಯಿಗಳನ್ನು ಸುರಿದು ನಮ್ಮ ಶಾಸಕರನ್ನು ಖರೀದಿಸುವ ದುಷ್ಟ ಪ್ರಯತ್ನ ಮಾಡಿದ್ದರು ಎಂದು ಅವರು ತಿಳಿಸಿದರು.
ಬಿಜೆಪಿ ಕೋಮುವಾದಿ ರಾಜಕಾರಣಕ್ಕೆ ಉತ್ತರ: ಶಿಗ್ಗಾಂವಿ ಕ್ಷೇತ್ರದಲ್ಲಿ ಮುಸ್ಲಿಮ್ ಅಭ್ಯರ್ಥಿಗೆ ಟಿಕೆಟ್ ನೀಡಿದಾಗ ವಿರೋಧ ವ್ಯಕ್ತವಾಗಿದ್ದು ನಿಜ. ಜಾತಿ-ಧರ್ಮದ ಭೇದ ಮಾಡದೆ ಸಮರ್ಥ ಅಭ್ಯರ್ಥಿಗೆ ಮತ ಹಾಕಿ ಎಂದು ಕೇಳಿಕೊಂಡೆವು. ಜನ ನಮ್ಮ ಮಾತಿಗೆ ಒಪ್ಪಿಕೊಂಡು ಶಿಗ್ಗಾಂವಿಯಲ್ಲಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿದ್ದಾರೆ. ಇದು ಬಿಜೆಪಿಯವರ ಕೋಮುವಾದಿ ರಾಜಕಾರಣಕ್ಕೆ ನೀಡಿದ ಉತ್ತರವಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಉಪಚುನಾವಣೆಗಳಲ್ಲಿ ಸೋಲು ಬಿಜೆಪಿ ನಾಯಕರ ಆತ್ಮಾವಲೋಕನಕ್ಕೆ ಪ್ರೇರಣೆ ನೀಡಲಿ. ಇನ್ನಾದರೂ ಅವರು ದ್ವೇಷದ ರಾಜಕಾರಣವನ್ನು ಕೈಬಿಟ್ಟು ರಚನಾತ್ಮಕ ವಿರೋಧಪಕ್ಷವಾಗಿ ಕೆಲಸ ಮಾಡಲಿ ಎಂದು ಹಾರೈಸಿದ ಸಿದ್ದರಾಮಯ್ಯ, ಬಿಜೆಪಿಯವರು ಮತದಾರರನ್ನು ಪೆದ್ದರು ಎಂದು ಭಾವಿಸುವುದನ್ನು ನಿಲ್ಲಿಸಬೇಕು ಎಂದು ಅವರು, ನಮ್ಮ ಪಕ್ಷದ ಅಧ್ಯಕ್ಷರು, ಮಂತ್ರಿಗಳು, ಸ್ಥಳೀಯ ಮುಖಂಡರು, ಕಾರ್ಯಕರ್ತರು ಎಲ್ಲರ ಶ್ರಮಕ್ಕೆ ಸಾರ್ಥಕತೆ ಸಿಕ್ಕಿದೆ ಎಂದು ಹೇಳಿದರು.
ದೇವೇಗೌಡರ ಆರೋಪದಿಂದ ಬೇಸರ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮಾಡಿದ ಆರೋಪ ನನಗೆ ಬಹಳ ಬೇಸರ ಆಗಿದೆ. ನಾನು ಬಹಳ ವರ್ಷ ಅವರ ಜೊತೆಗೆ ಇದ್ದವನು. ಆದರೂ ಕೂಡ, ಕಾಂಗ್ರೆಸ್ ಸರಕಾರವನ್ನು ಕಿತ್ತೊಗೆಯುವುದೇ ನನ್ನ ಗುರಿ, ಸಿದ್ದರಾಮಯ್ಯ ಅಹಂಕಾರ, ಸೊಕ್ಕು ಮುರಿತೀನಿ ಅಂತೆಲ್ಲಾ ಮಾತನಾಡಿದರು. ನಾನು ಮಂತ್ರಿ ಆಗಿ 40 ವರ್ಷ ಆಯ್ತು. ಎರಡು ಬಾರಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಆಗಿದ್ದೇನೆ. ಯಾವತ್ತೂ ಸೊಕ್ಕು, ಅಹಂಕಾರ ಮಾಡಿಲ್ಲ. ಜನ ಅವಕಾಶ ಕೊಟ್ಟಾಗ ಅಧಿಕಾರ ನಡೆಸಿದ್ದೇವೆ. ಸೋತಾಗ ಹೋರಾಟ ಮಾಡಿದ್ದೇವೆ.
-ಸಿದ್ದರಾಮಯ್ಯ, ಮುಖ್ಯಮಂತ್ರಿ