ಶರಣಾಗತರಾದ ನಕ್ಸಲೀಯರಿಗೆ ಪುನರ್ವಸತಿ ಕಲ್ಪಿಸಲಾಗುವುದು : ಸಿಎಂ ಸಿದ್ದರಾಮಯ್ಯ
ಬೆಂಗಳೂರು : ನಕ್ಸಲೀಯ ಚಟುವಟಿಕೆಗಳಲ್ಲಿ ತೊಡಗಿರುವವರು ಶರಣಾಗಿ ಮುಖ್ಯವಾಹಿನಿಗೆ ಬರಬೇಕೆಂದು ಸರಕಾರವು ಬಯಸುತ್ತದೆ. ಈ ಮಧ್ಯೆ ನಕ್ಸಲೀಯರು ಪ್ರಜಾತಾಂತ್ರಿಕತೆಯ ಮುಖ್ಯವಾಹಿನಿಗೆ ಬರಬೇಕೆಂದು ಪ್ರತಿಪಾದಿಸುವ ಹಾಗೂ ಜೀವಹಾನಿಯು ಯಾವ ಕಡೆಯು ನಡೆಯಬಾರದು ಎಂದು ಬಯಸುವ ವಿವಿಧ ಪ್ರಗತಿಪರ ಹಾಗೂ ಜನಪರ ವೇದಿಕೆಗಳ ಹಲವಾರು ಮುಖಂಡರು ನನ್ನನ್ನು ಭೇಟಿ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕರ್ನಾಟಕದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಮತ್ತು ಶಾಂತಿ ನೆಲೆಸುವಂತೆ ಮಾಡಲು ಸರಕಾರವು ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಹಿಂಜರಿಯುವುದಿಲ್ಲ. ಆದರೆ ನಕ್ಸಲೀಯರು ಮುಖ್ಯವಾಹಿನಿಗೆ ಬರಲು ಮಾತುಕತೆ ನಡೆಸಲು ಮುಂದಾಗಿದ್ದರೆ, ಈ ಪ್ರಕ್ರಿಯೆಯನ್ನು ಸರಕಾರ ಕಾನೂನಿನ ಚೌಕಟ್ಟಿನಲ್ಲಿ ಸ್ವಾಗತಿಸಿ, ಸಹಾನುಭೂತಿಯಿಂದ ನಡೆದುಕೊಳ್ಳುತ್ತದೆ ಎಂದು ಭರವಸೆ ನೀಡಿದ್ದಾರೆ.
ನಕ್ಸಲೀಯ ಚಟುವಟಿಕೆಗಳು ಕರ್ನಾಟಕದಲ್ಲಿ ಎಂದೂ ನೆರೆಯ ರಾಜ್ಯಗಳಂತೆ ವಿಪರೀತ ಪ್ರಮಾಣದಲ್ಲಿ ನಡೆದಿಲ್ಲ. ಆದರೆ, ಮಲೆನಾಡಿನಲ್ಲಿ ಎರಡು ದಶಕಗಳಿಂದ ಆಗಾಗ್ಗೆ ನಕ್ಸಲೀಯ ಚಟುವಟಿಕೆಗಳು ಕಾಣುತ್ತಲಿವೆ ಮತ್ತು ಆ ಕಾರಣದಿಂದ ಹಿಂಸೆ ಹಾಗೂ ಸಾವು-ನೋವುಗಳು ಸಂಭವಿಸಿವೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಹಲವಾರು ಅಮಾಯಕರ, ಪೊಲೀಸರ ಮತ್ತು ನಕ್ಸಲೀಯ ಚಟುವಟಿಕೆಗಳಲ್ಲಿ ಇದ್ದವರ ಜೀವಹಾನಿಯೂ ಆಗಿದೆ. ಆದರೆ, ಪ್ರಜಾತಾಂತ್ರಿಕ ಸಮಾಜದಲ್ಲಿ ಬಂದೂಕಿನ ಮೂಲಕ ಬದಲಾವಣೆ ತರಲು ಹೊರಟಿರುವ ಆದರ್ಶವಾದಿಗಳು ತಮ್ಮ ಜೀವವನ್ನೂ ತೆತ್ತುಕೊಳ್ಳುತ್ತಾರೆ, ಇತರರ ಜೀವಹಾನಿಗೂ ಕಾರಣವಾಗುತ್ತಾರೆ. ಇದು ನೋವಿನ ವಿಚಾರವಾದರೂ, ಸಂವಿಧಾನಬದ್ಧವಾಗಿ ಆಡಳಿತ ನಡೆಸುವ ಸರಕಾರ ಸುಮ್ಮನೇ ಕೂರುವುದು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಕರ್ನಾಟಕದ ಎಲ್ಲ ನಕ್ಸಲೀಯರು ಸಂಪೂರ್ಣವಾಗಿ ಶರಣಾಗತರಾಗಿ ಮುಖ್ಯವಾಹಿನಿಗೆ ಬರಲು ನಮ್ಮ ಸರಕಾರವು ಬಯಸುತ್ತದೆ. ನಕ್ಸಲೀಯರು ಮುಖ್ಯವಾಹಿನಿಗೆ ಬರಲು ಮುಂದಾದ್ದಲ್ಲಿ ಶರಣಾಗತಿ ಕುರಿತು ಈಗಾಗಲೇ ಸರಕಾರವು ನೀತಿಯನ್ನು ರೂಪಿಸಿದ್ದು, ಈ ನೀತಿಯನ್ನು ಸರಳೀಕರಣಗೊಳಿಸಿ, ಸಮಪರ್ಕವಾಗಿ ಜಾರಿ ಮಾಡಲಾಗುವುದೆಂದು ಭರವಸೆ ನೀಡುತ್ತೇನೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ನಕ್ಸಲೀಯರ ಶರಣಾಗತಿ ನೀತಿಯನ್ವಯ ಹಂತ ಹಂತವಾಗಿ ಆರ್ಥಿಕ ನೆರವು ನೀಡಲಾಗುವುದು ಹಾಗೂ ಆಯುಧಗಳನ್ನು ಸರಕಾರಕ್ಕೆ ಅದ್ಯಾರ್ಪಣೆ ಮಾಡುವ ನಕ್ಸಲೀಯರಿಗೆ ಪ್ರೋತ್ಸಾಹ ಧನ, ಕೌಶಲ್ಯ ತರಬೇತಿಗಳು ನೀಡುವುದಲ್ಲದೆ ಅವರ ಪುನರ್ವಸತಿಗೂ ಎಲ್ಲ ಕ್ರಮಗಳನ್ನು ಸಹಾನುಭೂತಿಯಿಂದ ಹಾಗೂ ಆದ್ಯತೆ ಮೇರೆಗೆ ಪರಿಗಣಿಸಲು ಕ್ರಮವಹಿಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಶರಣಾಗತರಾಗುವ ನಕ್ಸಲೀಯರ ಮೇಲಿನ ಮೊಕದ್ದಮೆ, ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಲು ಸರಕಾರದಿಂದ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ, ಅವರಿಗೆ ಕಾನೂನಿನ ನೆರವು ನೀಡಲಾಗುವುದು. ಈಗಾಗಲೇ ಶರಣಾಗತರಾದ ನಕ್ಸಲೀಯರ ಅಗತ್ಯಗಳನ್ನು ಗುರುತಿಸಿ ಅವರಿಗೂ ಸಹ ಪುನರ್ವಸತಿ ಕಲ್ಪಿಸುವ ಪ್ರಕ್ರಿಯೆಯನ್ನು ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಅದೇ ಸಂದರ್ಭದಲ್ಲಿ ಕಾನೂನನ್ನು ಕೈಗೆತ್ತಿಕೊಳ್ಳುವ ಮತ್ತು ಹಿಂಸಾತ್ಮಕ ಚಟುವಟಿಕೆಗಳಲ್ಲಿ ತೊಡಗುವ ಯಾರೇ ಆದರೂ, ಅವರ ವಿರುದ್ಧ ಕಠಿಣವಾದ ಕಾನೂನು ಕ್ರಮವನ್ನು ನಮ್ಮ ಸರಕಾರವು ತೆಗೆದುಕೊಳ್ಳಲಿದೆ ಎಂದೂ ಈ ಸಂದರ್ಭದಲ್ಲಿ ಸ್ಪಷ್ಟಪಡಿಸಬಯಸುತ್ತೇನೆ ಎಂದು ಮುಖ್ಯಮಂತ್ರಿ ಎಚ್ಚರಿಸಿದ್ದಾರೆ.