'ಗೃಹಲಕ್ಷ್ಮಿ' ಯೋಜನೆಯ ನೋಂದಣಿ ಪ್ರಕ್ರಿಯೆಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಚಾಲನೆ.
ಬೆಂಗಳೂರು, ಜು.19: ಕಾಂಗ್ರೆಸ್ ಸರಕಾರದ ಐದು ಗ್ಯಾರಂಟಿಗಳ ಪೈಕಿ ಬಹು ನಿರೀಕ್ಷಿತ ‘ಗೃಹಲಕ್ಷ್ಮಿ ಯೋಜನೆ’ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಬುಧವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಚಾಲನೆ ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಗೃಹಲಕ್ಷ್ಮಿ ಯೋಜನೆಯ ಲಾಂಛನ ಮತ್ತು ಪೋಸ್ಟರ್ ಅನಾವರಣಗೊಳಿಸಿದರು.
ಈ ಸಂದರ್ಭದಲ್ಲಿ ಸಚಿವರಾದ ಕೆ.ಎಚ್ ಮುನಿಯಪ್ಪ, ರಾಮಲಿಂಗಾ ರೆಡ್ಡಿ, ಭೈರತಿ ಸುರೇಶ್, ಶಾಸಕರಾದ ರಿಝ್ವಾನ್ ಅರ್ಶದ್ ಉಪಸ್ಥಿತರಿದ್ದರು.
ಪೊಲೀಸರ ನಿಯೋಜನೆ: ಗೃಹಲಕ್ಷ್ಮಿ ಯೋಜನೆಯ ಅರ್ಹ ಫಲಾನುಭವಿಗಳ ನೋಂದಣಿಗೆ ಗುರುತಿಸಲ್ಪಟ್ಟಿರುವ ಗ್ರಾಮ ಒನ್, ಬೆಂಗಳೂರು ಒನ್, ಕರ್ನಾಟಕ ಒನ್, ಬಾಪೂಜಿ ಸೇವಾ ಕೇಂದ್ರ, ನಗರ ಸ್ಥಳೀಯ ಆಡಳಿತ ಕಚೇರಿ ಕೇಂದ್ರಗಳಲ್ಲಿ ಮೇಲ್ವಿಚಾರಣೆಯನ್ನು ನಿರ್ವಹಿಸಲು ಓರ್ವ ಸರಕಾರಿ ಅಧಿಕಾರಿ, ಪೊಲೀಸ್ ಸಿಬ್ಬಂದಿಯನ್ನು ನೇಮಿಸಲಾಗಿದೆ. ತಾಂತ್ರಿಕ ದೋಷ ಉಂಟಾಗದಂತೆ ನೋಡಿಕೊಳ್ಳಲು ಬ್ಯಾಟರಿ, ಪ್ರಿಂಟರ್ ವ್ಯವಸ್ಥೆ ಕಲ್ಪಿಸಲು ಸೂಚನೆ ನೀಡಲಾಗಿದೆ.
ಪ್ರತಿ ತಾಲೂಕು ಕೇಂದ್ರಗಳಲ್ಲಿ ಸಹಾಯ ಕೇಂದ್ರ ಸ್ಥಾಪನೆ, ಪ್ರಜಾಪ್ರತಿನಿಧಿಗಳಿಗೆ ತರಬೇತಿ, ಮಳೆ ಸಂದರ್ಭದಲ್ಲಿ ಸುರಕ್ಷಣೆಗೂ ಸೂಚನೆ ನೀಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದೆ.
ಗೊಂದಲವಿದ್ದರೆ 1902 ನಂಬರ್ ಕರೆ ಮಾಡಿ:
‘ಗೃಹಲಕ್ಷ್ಮಿ ಯೋಜನೆಯ ಉಚಿತ ಲಾಭ ಪಡೆದುಕೊಳ್ಳಲು ಸಹಾಯವಾಣಿ ಸಂಖ್ಯೆ ಬಿಡುಗಡೆ ಮಾಡಲಾಗಿದ್ದು, ಪಡಿತರ ಚೀಟಿಯ ಸಂಖ್ಯೆಯನ್ನು 8147500500 ಸಂಖ್ಯೆಗೆ ಮೊಬೈಲ್ ಮೂಲಕ ಎಸ್‍ಎಂಎಸ್ ಮಾಡಬಹುದು. ಆನಂತರ, ಕೂಡಲೇ ಮನೆಯ ಮುಖ್ಯಸ್ಥೆಗೆ ಸ್ಥಳ, ಗೊತ್ತುಪಡಿಸಿದ ದಿನಾಂಕ, ಸಮಯ ಎಸ್‍ಎಂಎಸ್ ಸಂದೇಶ ಹೋಗುತ್ತದೆ. ಈ ಬಗ್ಗೆ ಗೊಂದಲ ಉಂಟಾದರೆ, 1902 ನಂಬರ್ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು.