ಸಿಎಂ ವಿರುದ್ಧ ಗಣಿ ಗುತ್ತಿಗೆ ಕಿಕ್ಬ್ಯಾಕ್ ಆರೋಪ: ವಿಚಾರಣೆಗೆ ಅನುಮತಿ ಕೋರಿ ರಾಜ್ಯಪಾಲರಿಗೆ ಪತ್ರ
ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ನಿವೇಶನ ಹಂಚಿಕೆ ಪ್ರಕರಣದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರಾಳರಾದ ಬೆನ್ನಲ್ಲೆ, 8 ಗಣಿ ಗುತ್ತಿಗೆಗಳ ನವೀಕರಣಕ್ಕೆ ಕಿಕ್ಬ್ಯಾಕ್ ಪಡೆದಿದ್ದಾರೆ ಎಂದು ಆರೋಪಿಸಿ ವಿಚಾರಣೆಗೆ ಅನುಮತಿ ಕೋರಿ ರಾಜ್ಯಪಾಲರಿಗ ದೂರು ಸಲ್ಲಿಸಲಾಗಿದೆ.
ಸಾಮಾಜಿಕ ಕಾರ್ಯಕರ್ತ ರಾಮಮೂರ್ತಿ ಗೌಡ ಎಂಬುವರು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಪತ್ರ ಬರೆದಿದ್ದು, ರಾಜ್ಯಪಾಲರು ಸಿಎಂ ಸಿದ್ದರಾಮಯ್ಯರ ವಿರುದ್ಧ ವಿಚಾರಣೆಗೆ ಅನುಮತಿ ನೀಡಬೇಕೆ? ಅಥವಾ ಅರ್ಜಿಯನ್ನು ತಿರಸ್ಕರಿಸಬೇಕೇ? ಎಂಬ ಕುರಿತು ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಗೊತ್ತಾಗಿದೆ.
ಬಳ್ಳಾರಿಯ ರಾಮಗಢ ಮಿನರಲ್ಸ್ ಸೇರಿದಂತೆ ಒಟ್ಟು 8 ಗಣಿ ಗುತ್ತಿಗೆಗಳ ನವೀಕರಣಕ್ಕೆ ಅಧಿಕಾರ ದುರುಪಯೋಗಪಡಿಸಿಕೊಂಡು ಸಿಎಂ ಸಿದ್ದರಾಮಯ್ಯ 500 ಕೋಟಿ ರೂ.ಕಿಕ್ಬ್ಯಾಕ್ ಪಡೆದಿದ್ದು, ಇದರಿಂದ ರಾಜ್ಯದ ಬೊಕ್ಕಸಕ್ಕೆ 5 ಸಾವಿರ ಕೋಟಿ ರೂ.ಗಳಿಗೂ ಅಧಿಕ ಮೊತ್ತದ ನಷ್ಟ ಉಂಟಾಗಿದೆ ಎಂದು ರಾಮಮೂರ್ತಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
2014-15ರ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ 8 ಗಣಿ ಕಂಪೆನಿಗಳ ಗುತ್ತಿಗೆಗಳಿಗೆ ನವೀಕರಣ ನೀಡಿದ್ದ ಅನುಮೋದನೆ ಹಾಗೂ ಲೋಕಾಯುಕ್ತ ಸಂಸ್ಥೆಗೆ ಸಲ್ಲಿಸಿರುವ ಅಫಿಡೆವಿಟ್ನಲ್ಲಿ ಸಿದ್ದರಾಮಯ್ಯ ಆಸ್ತಿ ಏರಿಕೆಯಾಗಿರುವುದರ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಹಿಂದೆ ಇದೇ ಪ್ರಕರಣದಲ್ಲಿ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ರಾಮಮೂರ್ತಿ ಗೌಡ ದೂರು ನೀಡಿದ್ದರು. ಆದರೆ, ಅಗತ್ಯ ದಾಖಲೆಗಳನ್ನು ಸಲ್ಲಿಕೆ ಮಾಡದ ಕಾರಣ ಪ್ರಕರಣ ಮುಕ್ತಾಯಗೊಳಿಸಲಾಗಿತ್ತು.