ನಿಮ್ಮನ್ನು ವಿಪಕ್ಷ ನಾಯಕನನ್ನಾಗಿ ಮಾಡುತ್ತಾರೆಯೇ?: ಸದನದಲ್ಲಿ ಪದೇ ಪದೇ ಎದ್ದು ನಿಂತ ಶಾಸಕ ಯತ್ನಾಳ್ ಕಾಲೆಳೆದ ಸಿಎಂ ಸಿದ್ದರಾಮಯ್ಯ
ಬೆಂಗಳೂರು, ಜು. 5: ‘ವಿಧಾನಸಭೆ ಅಧಿವೇಶನ ಆರಂಭವಾಗಿ ಮೂರು ದಿನ ಕಳೆದರೂ ಪ್ರತಿಪಕ್ಷ ನಾಯಕನನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗದ ಬಿಜೆಪಿ ಸದಸ್ಯರು ಇಲ್ಲಿಗೆ ಬಂದು ಬುರುಡೆ ಬಿಡುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಇಂದಿಲ್ಲಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬುಧವಾರ ವಿಧಾನಸಭೆಯಲ್ಲಿ ‘ಐದೂ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಂಬಂಧ ‘ನಿಲುವಳಿ ಸೂಚನೆ ಪೂರ್ವಭಾವಿ ಪ್ರಸ್ತಾಪದ ವೇಳೆ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ರೀ..ಯತ್ನಾಳ್ ನೀವು ಪದೇ ಪದೇ ಎದ್ದು ನಿಂತು ಮಾತನಾಡಿದರೆ, ನಿಮ್ಮನ್ನು ವಿರೋಧ ಪಕ್ಷದ ನಾಯಕನನ್ನಾಗಿ ಮಾಡುತ್ತಾರೆಯೇ?’ ಎಂದು ಪ್ರಶ್ನಿಸಿದರು.
‘ಬಿಜೆಪಿ ಸದಸ್ಯರು ರಸ್ತೆ ಸಾರಿಗೆ ಬಸ್‍ಗಳಲ್ಲಿ ಹೆಣ್ಣುಮಕ್ಕಳಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿರುವುದನ್ನು ಬಿಜೆಪಿಯವರು ವಿರೋಧ ಮಾಡುತ್ತಿದ್ದಾರೆ. ನಮ್ಮ ಆರೋಪಕ್ಕೆ ಉತ್ತರ ಕೊಡದೆ ಓಡಿಹೋದವರು, ಜನರು ಚುನಾವಣೆಯಲ್ಲಿ ನಿಮಗೆ ತಕ್ಕ ಪಾಠ ಕಲಿಸಿ ವಿಪಕ್ಷದ ಸ್ಥಾನದಲ್ಲಿ ಕೂರಿಸಿದ್ದಾರೆ. ಜನ ಈ ರೀತಿಯ ತೀರ್ಪು ಕೊಟ್ಟರೂ ನಿಮಗೆ ಬುದ್ದಿ ಬಂದಿಲ್ಲ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
‘ಹೆಣ್ಣುಮಕ್ಕಳ ಉಚಿತ ಪ್ರಯಾಣದ ಪರವೋ? ವಿರುದ್ಧವೋ? ಎಂಬುದನ್ನು ಮೊದಲು ಬಿಜೆಪಿಯವರು ಹೇಳಲಿ. ನಾವು ಚರ್ಚೆಗೆ ಉತ್ತರ ಕೊಡಲು ತಯಾರಿದ್ದೇವೆ. 2018ರಲ್ಲಿ ಬಿಜೆಪಿ ನೀಡಿದ್ದ ಒಂದೂ ಆಶ್ವಾಸನೆಯನ್ನು ಈಡೇರಿಸಿಲ್ಲ. ಅವರು ತಮ್ಮ ಪ್ರಣಾಳಿಕೆಯಲ್ಲಿ ಅವರ ಮುಖವನ್ನು ನೋಡಿಕೊಳ್ಳಲಿ’ ಎಂದು ಸಿದ್ದರಾಮಯ್ಯ ಟೀಕಾಪ್ರಹಾರ ನಡೆಸಿದರು.
ಗ್ಯಾರಂಟಿ ಅನುಷ್ಟಾನ ನಿಶ್ಚಿತ: ‘ಚುನಾವಣೆ ಪೂರ್ವದಲ್ಲಿ ನಮ್ಮ ಪಕ್ಷ ನೀಡಿದ್ದ ಐದು ಗ್ಯಾರಂಟಿಗಳನ್ನು ಯಾರು ಏನೇ ಹೇಳಿದರೂ, ಎಷ್ಟೇ ಕಷ್ಟವಾದರೂ 100ಕ್ಕೆ ನೂರರಷ್ಟು ಐದು ಗ್ಯಾರಂಟಿ ಯೋಜನೆಗಳನ್ನು ಇದೇ ಆರ್ಥಿಕ ವರ್ಷದಲ್ಲಿ ಈಡೇರಿಸುತ್ತೇವೆ. ಈ ಬಗ್ಗೆ ಯಾರಿಗೂ ಸಂಶಯ ಬೇಡ. ಈಗಾಗಲೇ ಮೂರು ಗ್ಯಾರಂಟಿಗಳನ್ನು ಈಡೇರಿಸಿದ್ದು, ನಾಲ್ಕನೆ ಗ್ಯಾರಂಟಿ ಯೋಜನೆ ಆಗಸ್ಟ್ 15ಕ್ಕೆ ಅನುಷ್ಟಾನಕ್ಕೆ ಬರಲಿದೆ’ ಎಂದು ಸಿದ್ದರಾಮಯ್ಯ ನುಡಿದರು.