́ಬೆಂಗಳೂರು ಟೆಕ್ ಸಮ್ಮಿಟ್ʼ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ
ಬೆಂಗಳೂರು: ದೇಶದಲ್ಲೇ ಮೊದಲು ಜೈವಿಕ ತಂತ್ರಜ್ಞಾನ ನೀತಿಯನ್ನು ರೂಪಿಸಿದ ರಾಜ್ಯ ಕರ್ನಾಟಕ. ಶೀಘ್ರದಲ್ಲಿ ಹೊಸ ಜೈವಿಕ ತಂತ್ರಜ್ಞಾನ ನೀತಿ ಬಿಡುಗಡೆ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ಹಾಗೂ ಎಸ್.ಟಿ.ಪಿ.ಐ - ಬೆಂಗಳೂರು ವತಿಯಿಂದ ಅರಮನೆ ಮೈದಾನದಲ್ಲಿ ಆಯೋಜಿಸಿರುವ "ಬೆಂಗಳೂರು ಟೆಕ್ ಸಮ್ಮಿಟ್ "ನ 26ನೇ ಆವೃತ್ತಿಯ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ರಾಜ್ಯದಲ್ಲಿ ಸಂಶೋಧನೆಗೆ ಪೂರಕವಾದ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಹೂಡಿಕೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಮುಂದಿನ ಹಂತದ ಸಂಶೋಧನೆಯನ್ನು ನಮ್ಮ ಸರ್ಕಾರ ಉತ್ತೇಜಿಸಲಿದೆ. ಇದಕ್ಕಾಗಿ ಉದ್ದಿಮೆಗಳು ಮತ್ತು ಶೈಕ್ಷಣಿಕ ಸಂಸ್ಥೆಗಳ ನಡುವೆ ಸಮನ್ವಯ ಸಾಧಿಸಲು ಆದ್ಯತೆ ನೀಡಲಾಗುವುದು. ಸರ್ಕಾರದ ನೀತಿಗಳಲ್ಲೂ ಅಗತ್ಯ ಬದಲಾವಣೆ ಮಾಡಲಾಗುವುದು ಎಂದು ತಿಳಿಸಿದರು.
ರಾಜ್ಯ ಸರ್ಕಾರವು ಉದ್ಯಮಸ್ನೇಹಿ ವಾತಾವರಣ ನಿರ್ಮಾಣಕ್ಕೆ ಒತ್ತು ನೀಡುತ್ತಿದೆ. ಭೂ ಪರಿವರ್ತನೆಯ ಸರಳೀಕರಣ, ಏಕಗವಾಕ್ಷಿ ಮೂಲಕ ಅನುಮೋದನೆ ನೀಡಲಾಗುತ್ತಿದೆ. ಬೆಂಗಳೂರಿನ ಹೊರಗೆ ಹೂಡಿಕೆದಾರರಿಗೆ ವಿಶೇಷ ಉತ್ತೇಜನ ನೀಡುವ ಮೂಲಕ ಡಿಜಿಟಲ್ ಬೆಳವಣಿಗೆಯಲ್ಲಿನ ಅಸಮತೋಲನ ತಗ್ಗಿಸಲಾಗುತ್ತಿದೆ ಎಂದರು.
ಅನಿಮೇಷನ್ ವಿಷ್ಯುವಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್ಸ್ ಕ್ಷೇತ್ರದಲ್ಲಿ ಹೆಚ್ಚಿನ ಅವಕಾಶಗಳಿವೆ. ಈ ಕ್ಷೇತ್ರವನ್ನು ಉತ್ತೇಜಿಸುವುದಕ್ಕಾಗಿ ಎವಿಜಿಸಿ- ಎಕ್ಸ್ ಆರ್ ನೀತಿಯನ್ನೂ ಜಾರಿಗೊಳಿಸಲಾಗುವುದು ಎಂದರು.
ಈ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಬೃಹತ್ ಮತ್ತು ಕೈಗಾರಿಕೆ, ಹಾಗೂ ಮೂಲ ಸೌಲಭ್ಯ ಅಭಿವೃದ್ದಿ ಸಚಿವ ಎಂ. ಬಿ. ಪಾಟೀಲ, ಗ್ರಾಮೀಣಾಭಿವೃದ್ಧಿ, ಲ ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ ಖರ್ಗೆ, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದರು.