ವಿಧಾನಸೌಧದಲ್ಲಿ ಯುವನಿಧಿ ಯೋಜನೆಗೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಐದನೇ ಗ್ಯಾರಂಟಿಯಾದ ಯುವನಿಧಿ ಯೋಜನೆಯ ನೋಂದಣಿ ಪ್ರಕ್ರಿಯೆಯ ಚಾಲನೆ ನೀಡಿದ್ದಾರೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮವನ್ನು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಉದ್ಘಾಟಿಸಿದರು.
ಈ ಕುರಿತು ʼಎಕ್ಸ್ʼ ಪೋಸ್ಟ್ ಹಂಚಿಕೊಂಡಿರುವ ಅವರು, ʼಪ್ರಧಾನಿ ಮೋದಿಯವರೇ ಕರ್ನಾಟಕ ರಾಜ್ಯದಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆ. ಗ್ಯಾರಂಟಿ ಜಾರಿಯಾದರೆ ರಾಜ್ಯ ಸರ್ಕಾರ ದಿವಾಳಿಯಾಗುತ್ತದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಮಾತು ಸುಳ್ಳಾಗಿದೆʼ ಎಂದು ಹೇಳಿದ್ದಾರೆ.
ಯುವನಿಧಿ ಜತೆಗೆ ಉಚಿತ ತರಬೇತಿ, ಅರ್ಜಿ ಶುಲ್ಕವೂ ಉಚಿತ. ರಾಜ್ಯದ ಜನರಿಗೆ ಇದು ಮುಟ್ಟಿದೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀನಿ ಅಂದ ಮೋದಿಯವರೇ ನೀವು ಉದ್ಯೋಗ ಸೃಷ್ಟಿ ಮಾಡಿದ್ದೀರಾ?. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಅಂದ್ರೆ ಇಷ್ಟೊತ್ತಿಗೆ 20 ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿತ್ತು. ಎಲ್ಲಿ ಸೃಷ್ಟಿಯಾಯ್ತು ಮೋದಿಯವರೇ?. ನೀವು ಮಾತಿಗೆ ತಪ್ಪಿದ ಮೋದಿ ಆಗಿದ್ದೀರಿ ಎಂದು ಪ್ರಶ್ನಿಸಿದರು.
ಭಾರತದ ಇತಿಹಾಸದಲ್ಲಿ ಮೋದಿಯವರಷ್ಟು ಸುಳ್ಳು ಹೇಳುವ ಪ್ರಧಾನಿ ಇವತ್ತಿನವರೆಗೂ ಬಂದಿಲ್ಲ. ಮೋದಿಯವರೇನು ಆರ್ಥಿಕ ತಜ್ಞರಾ?. ರಾಜ್ಯದ ಜನರಿಗೆ ಗ್ಯಾರಂಟಿ ಯೋಜನೆಗಳನ್ನು ಕೊಟ್ಟರೆ ರಾಜ್ಯ ದಿವಾಳಿ ಆಗುತ್ತದೆ ಎಂದು ಭಾಷಣ ಮಾಡಿದರು. ಈಗ ಐದೂ ಯೋಜನೆ ಜಾರಿಯಾಗಿ ರಾಜ್ಯ ಆರ್ಥಿಕವಾಗಿ ಸದೃಢವಾಗಿದೆ ಎಂದು ಎಂದು ಸಂತಸ ವ್ಯಕ್ತಪಡಿಸಿದರು.
ವಿವೇಕಾನಂದ ಜಯಂತಿಯಂದು ಲಕ್ಷಾಂತರ ಯುವಕ ಯುವತಿಯರ ಸಮ್ಮುಖದಲ್ಲಿ ಯುವನಿಧಿಯನ್ನು ನೇರವಾಗಿ ಅರ್ಹರ ಖಾತೆಗೆ ಜಮೆ ಮಾಡುವ ಕಾರ್ಯಕ್ರಮ ನಡೆಸುತ್ತೇವೆ. ರಾಜ್ಯದಲ್ಲಿ ಖಾಲಿ ಇರುವ ಉದ್ಯೋಗಗಳನ್ನೂ ಭರ್ತಿ ಮಾಡಲಾಗುವುದು. ಮಾತು ತಪ್ಪಿದ ಮೋದಿಯವರೇ ನಿಮ್ಮ ಮಾತು ಏನಾಯ್ತು?. ರಾಜ್ಯದ ಯುವ ಸಮೂಹ ನಿಮ್ಮನ್ನು ಪ್ರಶ್ನಿಸುತ್ತಿದ್ದಾರೆ ಎಂದರು.
ಕವನ ಓದಿದ ಡಿಕೆಶಿ..!
ಕಾರ್ಯಕ್ರಮದಲ್ಲಿ ಪುಸ್ತಕದಲ್ಲಿ ಬರೆದ ಕವನವನ್ನು ಉಲ್ಲೇಖಿಸಿದ ಡಿ.ಕೆ.ಶಿವಕುಮಾರ್, “ಕೊಟ್ಟ ಮಾತನ್ನು ಉಳಿಸಿಕೊಂಡ ಕೈಗೆ ಶಕ್ತಿ ಬಂತು, ಐದು ಬೆರಳು ಸೇರಿ ಮುಷ್ಟಿಯಾಯಿತು, ಅರಳಿದ್ದ ಕಮಲ ಮುದುಡಿ ಹೋಯಿತು, ಅತ್ತ-ಇತ್ತ ನೋಡುತ್ತಿದ್ದ ಮಹಿಳೆ ತೆನೆ ಎಸೆದು ಓಡಿ ಹೋಯಿತು, ಕರ್ನಾಟಕ ಸಮೃದ್ಧವಾಯಿತು, ಕರ್ನಾಟಕ ಪ್ರಬುದ್ಧವಾಯಿತು ಎನ್ನುವ ಮೂಲಕ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಿಗೆ ತಿರುಗೇಟು ನೀಡಿದರು.
ಶಿವಮೊಗ್ಗದಲ್ಲಿ ಚಾಲನೆ..!
ಯುವನಿಧಿ ಯೋಜನೆಗೆ ಇಂದಿನಿಂದ ನೋಂದಣಿ ಕಾರ್ಯ ಆರಂಭವಾಗಲಿದೆ. ವಿವೇಕಾನಂದ ಜಯಂತಿಯಾದ ಜನವರಿ 12 ರಂದು ಶಿವಮೊಗ್ಗದಲ್ಲಿ ಯೋಜನೆಗೆ ಚಾಲನೆ ನೀಡಲಾಗುತ್ತದೆ. ಅಂದೇ ನಿರುದ್ಯೋಗಿ ಯುವಕ-ಯುವತಿಯರ ಖಾತೆಗಳಿಗೆ ಹಣ ಜಮೆಯಾಗಲಿದೆ ಎಂದು ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಪ್ರಕಟಿಸಿದರು.