ಅವರು ಅಧಿವೇಶನ ಮುಗಿಯುವವರೆಗೂ ಅಲುಗಾಡದೆ ಕೂರುತ್ತಿದ್ದರು: ಶಾಸಕರ ತರಬೇತಿ ಶಿಬಿರದಲ್ಲಿ ವಾಟಾಳ್ ನಾಗರಾಜ್ ರನ್ನು ನೆನೆದ ಸಿಎಂ ಸಿದ್ದರಾಮಯ್ಯ
ಬೆಂಗಳೂರು: 16ನೇ ವಿಧಾನಸಭೆಗೆ ನೂತನವಾಗಿ ಆಯ್ಕೆಯಾದ ಶಾಸಕರುಗಳ ತರಬೇತಿ ಶಿಬಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಶಾಸಕ ಹಾಗೂ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ರನ್ನು ನೆನದುಕೊಂಡರು.
''ಸಂಸದೀಯ ಪ್ರಜಾಪ್ರಭುತ್ವದ ದೇಗುಲ ವಿಧಾನಸಭೆ. ಇಲ್ಲಿ ಜನರ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪ್ರಸ್ತಾಪಿಸಿ ಪರಿಹಾರ ಪಡೆದುಕೊಳ್ಳುವ ಮನಸ್ಥಿತಿಯನ್ನು ಪ್ರತಿಯೊಬ್ಬ ಶಾಸಕ ಬೆಳೆಸಿಕೊಳ್ಳಬೇಕು. ಯಾರು ಸಂವಿಧಾನವನ್ನು ಓದಿ ಅರ್ಥ ಮಾಡಿಕೊಳ್ಳುವುದಿಲ್ಲವೋ ಅವರು ಉತ್ತಮ ಶಾಸಕರಾಗಲು, ಸಂಸದರಾಗಲು ಸಾಧ್ಯವಿಲ್ಲ. ಆದ್ದರಿಂದ ಮೊದಲು ಸಂವಿಧಾನವನ್ನು ಓದಿ ಅದರ ಮೂಲಭೂತ ತತ್ವ ಮತ್ತು ಉದ್ದೇಶಗಳನ್ನು ಅರಿತುಕೊಳ್ಳಬೇಕು'' ಎಂದು ಅವರು ಹೇಳಿದರು.
''ಶಾಂತವೇರಿ ಗೋಪಾಲಗೌಡರನ್ನು ಇವತ್ತಿಗೂ ಇಡೀ ನಾಡು ಯಾಕೆ ಸ್ಮರಿಸುತ್ತದೆ ಎನ್ನುವುದನ್ನು ಅರ್ಥಮಾಡಿಕೊಳ್ಳಿ. ವಾಟಾಳ್ ನಾಗರಾಜ್ ಅವರು ಒಬ್ಬ ಮಾದರಿ ಶಾಸಕರಾಗಿದ್ದರು. ಅಧಿವೇಶನದ ಬೆಲ್ ಆಗುತ್ತಿದ್ದಂತೆ ಸದನದ ಒಳಗೆ ಬಂದು ಕೂರುತ್ತಿದ್ದರು. ಅಧಿವೇಶನ ಮುಗಿಯುವವರೆಗೂ ಅಲುಗಾಡದೆ ಕೂರುತ್ತಿದ್ದರು. ಇದನ್ನು ಪ್ರತಿಯೊಬ್ಬರೂ ಪಾಲಿಸಬೇಕು'' ಎಂದು ಸಲಹೆ ನೀಡಿದರು.
''ನಾನು, ನನ್ನಂಥವರು ಶಾಸಕರಾಗಲು, ಮುಖ್ಯಮಂತ್ರಿ ಆಗಲು ಡಾ.ಅಂಬೇಡ್ಕರ್ ಅವರು ನೀಡಿದ ಸಂವಿಧಾನ ಕಾರಣ. ಸಂವಿಧಾನ ಇಲ್ಲದಿದ್ದರೆ ಸಿ.ಟಿ.ರವಿ, ಕೆ.ಎಸ್.ಈಶ್ವರಪ್ಪ, ನಾನು ಸಹ ಎಲ್ಲೋ ಕುರಿ, ಹಸು ಕಾಯುತ್ತಾ ಇರಬೇಕಾಗಿತ್ತು. ಆದ್ದರಿಂದ ದೇಶದ ಪ್ರತಿಯೊಬ್ಬರು ಸಂವಿಧಾನದ ಮೌಲ್ಯ ಅರಿತುಕೊಳ್ಳಬೇಕು'' ಎಂದು ಅವರು ಹೇಳಿದರು.