ವಿಧಾನಸಭೆ: ಕರಾವಳಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಕುರಿತು ಚರ್ಚೆ
ಪ್ರವಾಸ್ಯೋದಮ, ಉದ್ಯೋಗ ಸೃಷ್ಟಿಗೆ ಒತ್ತು ನೀಡುವಂತೆ ಆಗ್ರಹ

ಬೆಂಗಳೂರು : ರಾಜ್ಯದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡುವುದರ ಜೊತೆಗೆ ಉದ್ಯೋಗ ಸೃಷ್ಟಿಗೂ ಆದ್ಯತೆ ನೀಡಬೇಕು ಎಂದು ಕರಾವಳಿ ಭಾಗದ ಶಾಸಕರು ಸರಕಾರವನ್ನು ಒತ್ತಾಯಿಸಿದರು.
ಗುರುವಾರ ವಿಧಾನಸಭೆಯಲ್ಲಿ ನಿಯಮ 69ರಡಿ ಕರಾವಳಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳ ಬಗ್ಗೆ ನಡೆದ ಚರ್ಚೆಯಲ್ಲಿ ಸದಸ್ಯರಾದ ವಿ.ಸುನೀಲ್ ಕುಮಾರ್, ಯಶ್‍ಪಾಲ್ ಎ.ಸುವರ್ಣ, ಕಿರಣ್ ಕುಮಾರ್ ಕೊಡ್ಗಿ, ಹರೀಶ್ ಪೂಂಜ, ಅಶೋಕ್ ಕುಮಾರ್ ರೈ ಹಾಗೂ ಇನ್ನಿತರರು ಪ್ರಸ್ತಾಪಿಸಿದರು.
ಬಿಜೆಪಿ ಸದಸ್ಯ ವಿ.ಸುನೀಲ್ ಕುಮಾರ್ ಮಾತನಾಡಿ, ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಭಾಗದಲ್ಲಿ ಭಿನ್ನ ಸಮಸ್ಯೆಗಳು, ಅವಕಾಶಗಳು ಇವೆ. ಎಲ್ಲ ಸರಕಾರಗಳು ಅಧಿಕಾರಕ್ಕೆ ಬಂದಾಗ ಮೂರು ಜಿಲ್ಲೆಗಳನ್ನು ಅಭಿವೃದ್ಧಿಪಡಿಸಲು ಪ್ರಯತ್ನಗಳು ನಡೆಸಿವೆ. ಆದರೆ, ನಮ್ಮ ಬೇಡಿಕೆಗಳು, ನಿರೀಕ್ಷೆಗಳು ಇನ್ನೂ ಇವೆ. ಸರಕಾರ ಹಾಗೂ ಅಧಿಕಾರಿ ವರ್ಗ ಅವುಗಳಿಗೆ ವೇಗ ನೀಡಬೇಕು ಎಂದು ಹೇಳಿದರು.
ಕರಾವಳಿಯವರು ಹೊಟೇಲ್ ಮ್ಯಾನೇಜ್‍ಮೆಂಟ್, ಟೆಂಪಲ್ ಮ್ಯಾನೇಜ್‍ಮೆಂಟ್ ಹಾಗೂ ಖಾಸಗಿ ಬಸ್‍ಗಳ ನಿರ್ವಹಣೆಯಲ್ಲಿ ಪ್ರಸಿದ್ಧರು. ಆದರೂ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಆಗಿಲ್ಲ. ನಂಜುಂಡಪ್ಪ ವರದಿ ಬಗ್ಗೆ ಎಲ್ಲಾ ಅಧಿವೇಶನಗಳಲ್ಲೂ ಚರ್ಚೆ ಮಾಡುತ್ತೇವೆ. ಆದರೆ, ಇತರೆ ತಾಲೂಕುಗಳನ್ನು ಹೋಲಿಸಿದರೆ ನಮ್ಮ ಕರಾವಳಿ ಭಾಗಕ್ಕೆ ಅನುದಾನ ಕಡಿಮೆ ಹಾಗೂ ಯಾವುದೇ ವಿಶೇಷ ಪ್ಯಾಕೇಜ್ ಇಲ್ಲ. ಇದಕ್ಕೆ ಅಧಿಕಾರಿ ವರ್ಗದಲ್ಲಿರುವ ನಿರ್ಲಕ್ಷ್ಯವು ಕಾರಣ ಎಂದು ಅವರು ತಿಳಿಸಿದರು.
ಸರಕಾರವನ್ನು ಅವಲಂಬಿಸದೆ ಸರಕಾರಿ ಶಾಲೆಗಳನ್ನು ಅಭಿವೃದ್ಧಿ ಹಾಗೂ ನಿರ್ವಹಣೆ ಮಾಡುತ್ತಿದ್ದೇವೆ. ಬೆಳಗಾವಿಯಲ್ಲಿ ಅಧಿವೇಶನ ನಡೆದರೆ ಉತ್ತರ ಕರ್ನಾಟಕ ಭಾಗದ ಚರ್ಚೆ ಆಗುತ್ತೆ, ಬೆಂಗಳೂರಿನಲ್ಲಿ ಅಧಿವೇಶನ ನಡೆದರೆ ಗ್ರೇಟರ್ ಬೆಂಗಳೂರು ಕುರಿತು ಚರ್ಚೆ ಮಾಡುತ್ತೇವೆ. ಇದೇ ಮೊದಲ ಬಾರಿಗೆ ಕರಾವಳಿ ಭಾಗದ ಸಮಸ್ಯೆಗಳ ಕುರಿತು ಚರ್ಚಿಸಲು ಅವಕಾಶ ಕಲ್ಪಿಸಿದಕ್ಕೆ ಸ್ಪೀಕರ್‌ಗೆ ಅಭಿನಂದನೆಗಳು ಎಂದು ಸುನೀಲ್ ಕುಮಾರ್ ಹೇಳಿದರು.
ಕರಾವಳಿ ಜಿಲ್ಲೆಗಳನ್ನು ಟೆಂಪಲ್ ಟೂರಿಸಂ, ಇಕೋ ಟೂರಿಸಂ ಹಾಗೂ ಬೀಚ್ ಟೂರಿಸಂ ಆಗಿ ಅಭಿವೃದ್ಧಿಪಡಿಸಲು ಅವಕಾಶಗಳು ಇವೆ. ಜೊತೆಗೆ ಬಂದರುಗಳನ್ನು ಅಭಿವೃದ್ಧಿಪಡಿಸಿದರೆ ನೂರಾರು ಕೋಟಿ ರೂ.ಗಳ ಆರ್ಥಿಕ ಚಟುವಟಿಕೆಗಳು ನಡೆಯುತ್ತವೆ. ಪಶ್ಚಿಮ ವಾಹಿನಿ ಯೋಜನೆಗೆ ಅಗತ್ಯ ಅನುದಾನ ಒದಗಿಸಿ, ಮಳೆ ನೀರು ಸಂಗ್ರಹಿಸಲು ಕಿಂಡಿ ಅಣೆಕಟ್ಟುಗಳನ್ನು ನಿರ್ಮಾಣ ಮಾಡಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಅವರು ಕೋರಿದರು.
ಮಳೆಯಿಂದ ಹಾನಿಯಾಗುವ ರಸ್ತೆಗಳನ್ನು ದುರಸ್ಥಿ ಮಾಡಲು ಪ್ರತಿ ಬಜೆಟ್‍ನಲ್ಲಿ ಪ್ರತ್ಯೇಕ ಪ್ಯಾಕೇಜ್ ಕರಾವಳಿ ಜಿಲ್ಲೆಗಳಿಗೆ ನೀಡಬೇಕು. ನಮ್ಮ ಭಾಗದ ಭೌಗೊಳಿಕ ವಾತಾವರಣಕ್ಕೆ ಅನುಗುಣವಾಗಿ ಸರಕಾರಿ ಕಟ್ಟಡಗಳ ವಿನ್ಯಾಸವನ್ನು ರೂಪಿಸಬೇಕು. ಮೂರು ಜಿಲ್ಲೆಗಳನ್ನು ಹಾದು ಹೋಗುವ ಕೊಂಕಣ ರೈಲಿನ ರೈಲ್ವೆ ನಿಲ್ದಾಣಗಳನ್ನು ಮಹಾರಾಷ್ಟ್ರ ಹಾಗೂ ಗೋವಾ ಮಾದರಿಯಲ್ಲಿ ರಾಜ್ಯ ಸರಕಾರವೇ ಅಭಿವೃದ್ಧಿಪಡಿಸಬೇಕು ಎಂದು ಅವರು ಆಗ್ರಹಿಸಿದರು.
ಯಕ್ಷಗಾನ, ಹುಲಿವೇಷ, ಕಂಬಳ ಎಲ್ಲವೂ ನಮ್ಮ ಕರಾವಳಿಯ ಸಂಸ್ಕೃತಿ. ಇದಕ್ಕೆ ದೊಡ್ಡ ಪ್ರಮಾಣದಲ್ಲಿ ಪ್ರೋತ್ಸಾಹ ನೀಡಬೇಕು. ಪ್ರತಿ ಕಂಬಳಕ್ಕೆ 5 ಲಕ್ಷ ರೂ. ನೀಡಬೇಕು. ಏಕ ವಿನ್ಯಾಸದ ನಕ್ಷೆಗಳಿಂದ ಆಗಿರುವ ಸಮಸ್ಯೆ ಕುರಿತು ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ ಹಾಗೂ ಕಂದಾಯ ಸಚಿವರು ಕೂತು ಚರ್ಚೆ ಮಾಡಿ ಸಮಸ್ಯೆ ಬಗೆಹರಿಸಬೇಕು ಎಂದು ಅವರು ಒತ್ತಾಯಿಸಿದರು.
ಕೇರಳ ರಾಜ್ಯದಲ್ಲಿ ಸಿ.ಆರ್.ಝೆಡ್ ವ್ಯಾಪ್ತಿಯಲ್ಲಿ ರಿಯಾಯಿತಿಗಳನ್ನು ನೀಡಲಾಗಿದೆ. ಅದರಂತೆ, 2161 ಜನಸಂಖ್ಯೆ ಇರುವ ಪ್ರದೇಶಗಳಲ್ಲಿ 50 ಮೀಟರ್ ಒಳಗೆ ಕಟ್ಟಡಗಳನ್ನು ಕಟ್ಟಲು ರಿಯಾಯಿತಿ ನೀಡಿದೆ. ಕರ್ನಾಟಕದಲ್ಲಿ 200 ಮೀಟರ್ ಒಳಗೆ ಕಟ್ಟಡಗಳನ್ನು ಕಟ್ಟಬೇಕು. ಈವರೆಗೆ ರಾಜ್ಯದಲ್ಲಿ ಈ ಬಗ್ಗೆ ಸರ್ವೇ ಮಾಡಿಲ್ಲ. ಆದಷ್ಟು ಬೇಗ ಈ ಸಂಬಂಧ ಸರ್ವೆ ಮಾಡಿ ಸಿ.ಆರ್.ಝೆಡ್ ತೊಡಕು ನಿವಾರಣೆ ಮಾಡಬೇಕು ಎಂದು ಸುನೀಲ್ ಕುಮಾರ್ ಕೋರಿದರು.
ಕಾಂಗ್ರೆಸ್ ಸದಸ್ಯ ಅಶೋಕ್ ಕುಮಾರ್ ರೈ ಮಾತನಾಡಿ, ರಾಜ್ಯದಲ್ಲಿ ತೆರಿಗೆಯಲ್ಲಿ ಪಾವತಿ ಮಾಡುವುದರಲ್ಲಿ ಕರಾವಳಿ ಭಾಗ ಎರಡನೆ ಸ್ಥಾನದಲ್ಲಿದೆ. ಆದರೆ, ಬಜೆಟ್‍ನಲ್ಲಿ ಹೆಚ್ಚಿನ ಪ್ರಾಧಾನ್ಯತೆ ಸಿಗುತ್ತಿಲ್ಲ. ಗ್ರಾಮೀಣ ಭಾಗದಲ್ಲಿ ಗುಡಿಸಲುಗಳಲ್ಲಿ ಜೀವನ ನಡೆಸುವವರು ಇನ್ನೂ ಇದ್ದಾರೆ. ಗುಡ್ಡ ಕುಸಿತ ಆಗಿರುವ ಪ್ರದೇಶದಲ್ಲಿ ಮಣ್ಣು ತೆಗೆದು ರಸ್ತೆ ಸರಿಪಡಿಸುವ ಕೆಲಸ ಮಾಡಿಲ್ಲ. ತುಳು ಭಾಷೆಯನ್ನು ರಾಜ್ಯದ ಹೆಚ್ಚುವರಿ ಭಾಷೆಯಾಗಿ ಮಾಡಬೇಕು ಎಂದು ಸದನದಲ್ಲಿ ನಾಲ್ಕು ಬಾರಿ ಪ್ರಸ್ತಾಪ ಮಾಡಿದ್ದೇವೆ. ಆದರೆ, ಯಾವುದೇ ಮುಂದಿನ ಕ್ರಮ ಆಗುತ್ತಿಲ್ಲ ಎಂದು ಹೇಳಿದರು.
ಪುತ್ತೂರಿನಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡುವುದಾಗಿ ಬಜೆಟ್‍ನಲ್ಲಿ ಘೋಷಣೆ ಮಾಡಿರುವುದು ಸ್ವಾಗತಾರ್ಹ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯನ್ನು ಪುತ್ತೂರಿಗೆ ಸ್ಥಳಾಂತರ ಮಾಡಬೇಕು. ಮಂಗಳೂರು ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆಗಾಗಿ ಅಗತ್ಯವಿರುವ ಕ್ರಮ ಕೈಗೊಳ್ಳಬೇಕು. ಸರೋಜಿನಿ ಮಹಿಷಿ ವರದಿಯಂತೆ ಸಾರ್ವಜನಿಕ ಸಹಭಾಗಿತ್ವದ ಸಂಸ್ಥೆಗಳಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶದಲ್ಲಿ ಆದ್ಯತೆ ನೀಡಬೇಕು ಎಂದು ಅವರು ಹೇಳಿದರು.
ಅಡಿಕೆ ಬೆಳೆಗೆ ಹಳದಿ ಎಲೆ ಚುಕ್ಕೆ ರೋಗ ಬರುವುದನ್ನು ತಡೆಗಟ್ಟಲು 62 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಈ ರೋಗವನ್ನು ನಿಯಂತ್ರಿಸಲು ಅಗತ್ಯವಿರುವ ಸಂಶೋಧನೆ ನಡೆಸಬೇಕು. ಬಂಟ ಅಭಿವೃದ್ಧಿ ನಿಗಮ, ಬ್ಯಾರಿ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು ಎಂದು ಅವರು ತಿಳಿಸಿದರು.
ಬಿಜೆಪಿ ಸದಸ್ಯ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಸಂಪ್ರದಾಯಿಕವಾಗಿ ಮರಳು ತೆಗೆಯುವ ಕೆಲಸಕ್ಕೆ ಅವಕಾಶ ನೀಡಬೇಕು. ಉಪ್ಪು ನೀರು ಹೊಲಗಳಿಗೆ ನುಗ್ಗುತ್ತಿದೆ. ಅದನ್ನು ತಡೆಯಲು ಕ್ರಮ ಕೈಗೊಳ್ಳಬೇಕು. ಎಲ್ಲ ಧರ್ಮ, ಸಮಾಜದವರು, ಜಾತಿಯವರು ಒಂದಾಗಿ ಬಾಳುವಂತಹ ಪರಿಸ್ಥಿತಿ ನಿರ್ಮಾಣ ಮಾಡಬೇಕು ಎಂದು ಹೇಳಿದರು.
ಬಿಜೆಪಿ ಸದಸ್ಯ ಗುರುರಾಜ್ ಶೆಟ್ಟಿ ಗಂಟಿಹೊಳೆ ಮಾತನಾಡಿ, ಕೆಂಪುಕಲ್ಲು ಅನ್ನು ಗಣಿಗಾರಿಕೆಗೆ ಸೇರಿಸಿದ್ದಾರೆ. ಹೆಂಚಿನ ಕಾರ್ಖಾನೆಗಳಿಗೆ ಮಣ್ಣು ಪೂರೈಸಲು ಆಗುತ್ತಿಲ್ಲ. ಗ್ರಾಮ ಲೆಕ್ಕಿಗರು, ಪಶು ವೈದ್ಯಾಧಿಕಾರಿಗಳು, ಪಿಡಿಒಗಳ ಕೊರತೆಯಿದೆ. ಕಡಲಕೊರೆತ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತಿಲ್ಲ ಎಂದು ಹೇಳಿದರು.
ಬಿಜೆಪಿಯ ದಿನಕರ್ ಶೆಟ್ಟಿ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ ಮಾಡಬೇಕು. ಹಾಗೂ ಕಾರವಾರದಿಂದ ಮಂಗಳೂರುವರೆಗೆ ಸಮುದ್ರ ಮಾರ್ಗ ಅಭಿವೃದ್ಧಿಪಡಿಸಬೇಕು ಎಂದು ಸಲಹೆ ನೀಡಿದರು.
ಯಶ್‍ಪಾಲ್ ಸುವರ್ಣ, ಉಡುಪಿ ಜಿಲ್ಲೆಗೆ ಸರಕಾರಿ ವೈದ್ಯಕೀಯ, ಇಂಜಿನಿಯರಿಂಗ್ ಹಾಗೂ ಕೃಷಿ ಕಾಲೇಜು ಕಲ್ಪಿಸಿಕೊಡಬೇಕು. ಐಟಿ ಪಾರ್ಕ್ ಪ್ರಾರಂಭ ಮಾಡಬೇಕು. ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ನೀಡಿರುವಂತೆ ಕರಾವಳಿ ಭಾಗಕ್ಕೂ ವಿಶೇಷ ಪ್ಯಾಕೇಜ್ ನೀಡಬೇಕು ಎಂದರು.
ಬಿಜೆಪಿ ಸದಸ್ಯ ಹರೀಶ್ ಪೂಂಜ ಮಾತನಾಡಿ, ಗೋವಾ ರಾಜ್ಯದ ಮಾದರಿಯಲ್ಲಿ ನಮ್ಮ ರಾಜ್ಯದ ಕರಾವಳಿ ಭಾಗವನ್ನು ಪ್ರವಾಸೋದ್ಯಮಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಅಭಿವೃದ್ಧಿಪಡಿಸಬೇಕು. ಟೆಕ್ಸ್ ಟೈಲ್ಸ್ ಉದ್ಯಮಕ್ಕೆ ಹೆಚ್ಚಿನ ಅವಕಾಶವಿದೆ ಅದನ್ನು ಬಳಸಿಕೊಳ್ಳಬೇಕು. ಕರಾವಳಿ ಭಾಗದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಮಾಡಬೇಕು ಎಂದು ಮನವಿ ಮಾಡಿದರು.
ಬಿಜೆಪಿ ಸದಸ್ಯ ಡಾ.ಭರತ್ ಶೆಟ್ಟಿ ಮಾತನಾಡಿ, ಶಾಲಾ, ಕಾಲೇಜುಗಳ ಬಳಿ ಅವ್ಯಾಹತವಾಗಿ ನಡೆಯುತ್ತಿರುವ ಡ್ರಗ್ಸ್ ಮಾರಾಟ ದಂಧೆಗೆ ಕಡಿವಾಣ ಹಾಕಬೇಕು. ಇಲ್ಲದಿದ್ದರೆ ನಾವು ಭವಿಷ್ಯದಲ್ಲಿ ದೊಡ್ಡ ಸಮಸ್ಯೆಗೆ ಸಿಲುಕುತ್ತೇವೆ. 220 ಐಟಿ ಕಂಪೆನಿಗಳು ನಮ್ಮ ಭಾಗದಲ್ಲಿವೆ. ಅವುಗಳಿಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಕಲ್ಪಿಸಿಕೊಡಬೇಕು ಎಂದು ಹೇಳಿದರು.
ಬಿಜೆಪಿ ಸದಸ್ಯ ಭಾಗೀರಥಿ ಮುರುಳ್ಯ ಮಾತನಾಡಿ, ಅರಣ್ಯ ಹಾಗೂ ಕಂದಾಯ ಜಮೀನಿನ ಗಡಿಯನ್ನು ಗುರುತಿಸಬೇಕು. ವಿದ್ಯುತ್ ಸಂಪರ್ಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ತಾಲೂಕು ಮಟ್ಟದಲ್ಲಿ ಯುವಜನ ಮೇಳಗಳನ್ನು ಆಯೋಜಿಸಲು ಅವಕಾಶ ಕಲ್ಪಿಸಬೇಕು. ಶಾಲಾ ಮಕ್ಕಳಿಗೆ ಅನುಕೂಲವಾಗುವಂತೆ ಬಸ್ ಸೌಲಭ್ಯ ಹೆಚ್ಚಿಸಬೇಕು ಎಂದು ಹೇಳಿದರು.
ಚರ್ಚೆಯಲ್ಲಿ ಬಿಜೆಪಿ ಸದಸ್ಯರಾದ ಕಿರಣ್ ಕುಮಾರ್ ಕೊಡ್ಗಿ, ಉಮಾನಾಥ್ ಕೋಟ್ಯಾನ್, ವೇದ ವ್ಯಾಸ ಕಾಮತ್ ಮಾತನಾಡಿದರು.
‘ಕರಾವಳಿ ಭಾಗದ ಸಮಸ್ಯೆಗಳ ಕುರಿತು ನಡೆದಿರುವ ಚರ್ಚೆ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು ಕ್ರಮಗಳನ್ನು ಕೈಗೊಳ್ಳಲಿದ್ದಾರೆ. ಸಮಗ್ರ ಅಭಿವೃದ್ಧಿ ಅಂದರೆ ಸೇತುವೆಗಳು, ರಸ್ತೆಗಳ ನಿರ್ಮಾಣ ಅಲ್ಲ. ಪೇಟೆಯ ಮುಖ್ಯ ರಸ್ತೆಯಲ್ಲಿ ಹಿಂದೂ, ಮುಸ್ಲಿಮ್, ಎಸ್ಸಿ, ಎಸ್ಟಿ, ಹಿಂದುಳಿದ ವರ್ಗದವರು ಎಲ್ಲರೂ ಪರಸ್ಪರ ಕೈ ಹಿಡಿದುಕೊಂಡು ನಡೆಯುವ ಮೂಲಕ ಪ್ರೀತಿ, ಸಹೋದರತೆ, ಸಹಬಾಳ್ವೆಯ ಸಂದೇಶ ನೀಡುವಂತಿರಬೇಕು. ಎಲ್ಲವನ್ನೂ ಶಾಸಕರೇ ಮಾಡಲು ಸಾಧ್ಯವಿಲ್ಲ. ಪ್ರತಿಯೊಂದು ಮನೆಯಲ್ಲಿ ಅಂತಹ ವಾತಾವರಣ ನಿರ್ಮಿಸಲು ಸಹಕಾರ ನೀಡಬೇಕು. ದ್ವೇಷ ಭಾಷಣ ಮಾಡುವವರಿಗೆ ಅವಕಾಶ ನೀಡಬಾರದು. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ನಮ್ಮ ಆದ್ಯತೆಯಾಗಬೇಕೇ ಹೊರತು, ನಾವೇ ಸಮಸ್ಯೆಗಳಿಗೆ ಆಹ್ವಾನ ನೀಡುವಂತಿರಬಾರದು’
-ಯು.ಟಿ.ಖಾದರ್, ಸ್ಪೀಕರ್