ವನ್ಯಜೀವಿಗಳೊಂದಿಗೆ ಸಹಬಾಳ್ವೆ ಇಂದಿನ ಅಗತ್ಯ: ಈಶ್ವರ ಖಂಡ್ರೆ
"ವನ್ಯಜೀವಿಗಳಿಗಾಗಿ ನಡಿಗೆ"ಯಲ್ಲಿ ರಿಷಬ್ ಶೆಟ್ಟಿ ಭಾಗಿ
ಬೆಂಗಳೂರು, ಅ.2: ವನ್ಯಜೀವಿಗಳ ಸಂಖ್ಯೆಯಲ್ಲಿನ ಹೆಚ್ಚಳ ಹಾಗೂ ಅರಣ್ಯ ಪ್ರದೇಶ ಕ್ಷೀಣಿಸುತ್ತಿರುವ ಸಂದರ್ಭದಲ್ಲಿ ಕಾಡಿನಂಚಿನ ಜನರು ವನ್ಯಜೀವಿಗಳೊಂದಿಗೆ ಸಹಬಾಳ್ವೆ ನಡೆಸುವುದು ಅನಿವಾರ್ಯ ಮತ್ತು ಇಂದಿನ ಅಗತ್ಯವಾಗಿದೆ ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಅವರು ಅಭಿಪ್ರಾಯಪಟ್ಟಿದ್ದಾರೆ.
ವನ್ಯ ಜೀವಿ ಸಂರಕ್ಷಣೆಯ ಸಂದೇಶವನ್ನು ಸಾರಲು, ಇಂದಿನಿಂದ ಆರಂಭಗೊಂಡ 70ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಕಬ್ಬನ್ ಪಾರ್ಕ್ ಮುಂಭಾಗದಿಂದ, ಸಸ್ಯಕಾಶಿ ಲಾಲ್ ಬಾಗ್ ವರೆಗೆ ಅರಣ್ಯ ಇಲಾಖೆ ಹಮ್ಮಿಕೊಂಡಿದ್ದ, ಜಾಗೃತಿ ನಡಿಗೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಕೃತಿ ಮತ್ತು ಪರಿಸರ ಸಮತೋಲನವನ್ನು ಕಾಯ್ದುಕೊಳ್ಳುವಲ್ಲಿ ವನ್ಯಜೀವಿಗಳ ಪಾತ್ರ ಮಹತ್ವದ್ದಾಗಿದೆ. ಕಾಡಿನಲ್ಲಿ ಬೆಳೆಯುವ ಹುಲ್ಲು, ಸೊಪ್ಪನ್ನು ಜಿಂಕೆ, ಕಡವೆ, ಕೃಷ್ಣಮೃಗ ಮೊದಲಾದ ಸಸ್ಯಹಾರಿ ಪ್ರಾಣಿಗಳು ತಿನ್ನುತ್ತವೆ. ಈ ಸಸ್ಯಹಾರಿ ಪ್ರಾಣಿಗಳನ್ನು ಚಿರತೆ, ಹುಲಿ, ಕತ್ತೆ ಕಿರುಬ ಮೊದಲಾದ ಪ್ರಾಣಿಗಳು ಬೇಟೆಯಾಡುತ್ತವೆ. ಹೀಗೆ ಪ್ರಕೃತಿ ಸಮತೋಲನ ಕಾಪಾಡುತ್ತವೆ. ಈ ಭೂಮಿಯಲ್ಲಿ ಹುಟ್ಟಿದ ಪ್ರತಿಯೊಂದು ಜೀವಿಗೂ ನಮ್ಮಂತೆಯೇ ಬದುಕುವ ಹಕ್ಕಿದೆ. ಅದು ವನ್ಯಜೀವಿಯಾಗಿರಲಿ, ಕೀಟ, ಪಕ್ಷಿಯೇ ಆಗಿರಲಿ ಅಥವಾ ಸಸ್ಯ ಸಂಕುಲವೇ ಆಗಿರಲಿ ಎಲ್ಲ ಜೀವಿಗಳಿಗೂ ಬದುಕುವ ಹಕ್ಕಿದೆ. ಆದರೆ ಇಂದು ಹಲವು ವನ್ಯ ಜೀವಿಗಳು ಅಳಿವಿನ ಅಂಚಿನಲ್ಲಿವೆ. ಕೆಲವು ನಶಿಸಿಹೋಗಿವೆ. ಹೀಗಾಗಿ ಜನರಲ್ಲಿ ಅರಣ್ಯದ ಬಗ್ಗೆ ವನ್ಯ ಜೀವಿಗಳ ಬಗ್ಗೆ ಜಾಗೃತಿ ಮೂಡಿಸಲು ವನ್ಯಜೀವಿ ಸಪ್ತಾಹ ವನ್ನು ಆಚರಿಸಲಾಗುತ್ತದೆ ಎಂದರು.
ನಮ್ಮ ದೇಶವನ್ನಾಳಿದ ಪ್ರಥಮ ಮಹಿಳಾ ಪ್ರಧಾನಮಂತ್ರಿ ಇಂದಿರಾಗಾಂಧೀ ಅವರಿಗೆ ದೂರದರ್ಶಿತ್ವ ಇತ್ತು. ಹೀಗಾಗಿಯೇ ಅವರು ವನ್ಯಜೀವಿ ಸಂರಕ್ಷಣಾ ಕಾಯಿದೆ 1972, ಅರಣ್ಯ ಸಂರಕ್ಷಣಾ ಕಾಯಿದೆ 1980ನ್ನು ಜಾರಿಗೆ ತಂದರು. ಇದರ ಫಲವಾಗಿ ಇಂದಿಗೂ ಅರಣ್ಯ, ವನ್ಯ ಜೀವಿಗಳು ಉಳಿದಿವೆ. ಈ ಎರಡು ಕಾಯಿದೆ ಇಲ್ಲದೆ ಇದ್ದಿದ್ದರೆ ಇಂದು ವನ್ಯ ಮೃಗಗಳನ್ನು ಮತ್ತು ಕಾಡುಗಳನ್ನು ನಾವು ಫೋಟೋದಲ್ಲಿ ನೋಡಬೇಕಾದ ಸ್ಥಿತಿ ಬರುತ್ತಿತ್ತು ಎಂದರು.
ಭಾರತವು ಪಶ್ಚಿಮ ಘಟ್ಟ, ಪೂರ್ವಘಟ್ಟದ ವಿಶಾಲ ಅರಣ್ಯ ಪ್ರದೇಶಗಳನ್ನು ಒಳಗೊಂಡು ಜೈವಿಕ ಪ್ರಭೇದಗಳಿಗೆ ಹಾಟ್ ಸ್ಪಾಟ್ ಅಂದರೆ ನೆಚ್ಚಿನ ತಾಣವಾಗಿದೆ, ಹಲವಾರು ಪ್ರಾಣಿ ಪ್ರಭೇದಗಳಿಗೆ ಸುರಕ್ಷಿತ ಆವಾಸ ಸ್ಥಾನವಾಗಿದೆ. ಭಾರತವು ಪ್ರಪಂಚದ ಪ್ರತಿಶತ 7 ಜೀವವೈವಿಧ್ಯತೆಯ ತಾಣಗಳಲ್ಲಿ ಒಂದಾಗಿದೆ. ಇದನ್ನು ಕಾಪಾಡಲು ಜನರಲ್ಲಿ ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದೆ. ಹೀಗಾಗಿ ವಸ್ತು ಪ್ರದರ್ಶನ, ಸಮೂಹ ಚರ್ಚೆ, ಕಾಲೇಜು ವಿದ್ಯಾರ್ಥಿಗಳಿಗಾಗಿ ಭಾಷಣ ಸ್ಪರ್ಧೆ, ರಸಪ್ರಶ್ನೆ ಸ್ಪರ್ಧೆ, ವನ್ಯಜೀವಿಗಳ ಅಂಚೆ ಚೀಟಿ ಸಂಗ್ರಹ ಇತ್ಯಾದಿ ಕಾರ್ಯಕ್ರಮಗಳನ್ನು ಹಿಂದಿನಿಂದ ಆಯೋಜಿಸಲಾಗುತ್ತಿದೆ. ಇದರಲ್ಲಿ ಸ್ವಯಂ ಪ್ರೇರಿತರಾಗಿ ಹಲವರು ಭಾಗಿಯಾಗುತ್ತಾರೆ. ಪರಿಸರ, ಪ್ರಕೃತಿ, ಅರಣ್ಯ, ವನ್ಯಜೀವಿಗಳ ಬಗ್ಗೆ ನಿಮಗಿರುವ ಕಳಕಳಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಭೂಭಾಗದ ಶೇ.33ರಷ್ಟು ಅರಣ್ಯ ಇರಬೇಕು ಆದರೆ, ರಾಜ್ಯದಲ್ಲಿ 22ರಷ್ಟು ಮಾತ್ರ ಹಸಿರು ಹೊದಿಕೆ ಇದೆ. ಜೊತೆಗೆ ನಾನು ಸಚಿವನಾದ ತರುವಾಯ ಹಲವಾರು ವರ್ಷಗಳಿಂದ ಒತ್ತುವರಿ ಮಾಡಲಾಗಿದ್ದ ಸಾವಿರಾರು ಎಕರೆ ಅರಣ್ಯ ಭೂಮಿಯನ್ನು ತೆರವು ಮಾಡಿಸಿದ್ದೇನೆ. ಹೊಸದಾಗಿ 10 ಸಾವಿರ ಎಕರೆ ಭೂಮಿಯನ್ನು ಅರಣ್ಯ ಎಂದು ಘೋಷಿಸಲಾಗಿದೆ. ಅಂದರೆ ರಾಜ್ಯದಲ್ಲಿನ ಅರಣ್ಯ ಪ್ರದೇಶ ವ್ಯಾಪ್ತಿ ಹೆಚ್ಚಳವಾಗುತ್ತಿದೆ.
ಅರಣ್ಯ ವ್ಯಾಪ್ತಿ ಕ್ಷೀಣಿಸಿದರೆ, ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಾಗುತ್ತಿದೆ. ಇದಕ್ಕೆ ಅರಣ್ಯ ಪ್ರದೇಶ ಒತ್ತುವರಿಯಾಗದಂತೆ ತಡೆಯುವುದೂ ಅಷ್ಟೇ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಶ್ರಮಿಸುತ್ತಿದೆ. 2015ರ ನಂತರದ ಅರಣ್ಯ ಒತ್ತುವರಿ ತೆರವು ಮಾಡುಸುತ್ತಿದೆ. ಈ ಪೈಕಿ ಪಟ್ಟಾ ಭೂಮಿಯೂ ಸೇರಿ 3 ಎಕರೆಗಿಂತ ಕಡಿಮೆ ಒತ್ತುವರಿ ಮಾಡಿರುವವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವವರೆಗೆ ಒಕ್ಕಲೆಬ್ಬಿಸಬೇಡಿ ಎಂದು ಸೂಚಿಸಿದ್ದೇವೆ. ಆದರೆ ಇದಕ್ಕೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸುಳ್ಳು ಪ್ರಚಾರ ಮಾಡಿ ಉದ್ದೇಶ ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ. ನಾವು ದೊಡ್ಡ ಒತ್ತುವರಿಯನ್ನು ನಿರ್ದಾಕ್ಷಿಣ್ಯವಾಗಿ ತೆರವು ಮಾಡಿಸುತ್ತೇವೆ. ಹೊಸ ಒತ್ತುವರಿದಾರರ ಮೇಲೆ ಕಟ್ಟು ನಿಟ್ಟಿನ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಈ ಬಾರಿಯ ವನ್ಯಜೀವಿ ಸಂರಕ್ಷಣೆಯ ಧ್ಯೇಯ ವಾಕ್ಯ ವನ್ಯಜೀವಿಗಳೊಂದಿಗೆ ಸಹಬಾಳ್ವೆ ಎಂಬುದಾಗಿದೆ. ಅರಣ್ಯದಂಚಿನ ಜನರು ವನ್ಯಜೀವಿಗಳೊಂದಿಗೆ ಸಹಬಾಳ್ವೆ ನಡೆಸಿದಾಗ ಮಾತ್ರ ಪ್ರಕೃತಿ ಪರಿಸರ ಉಳಿಯಲು ಸಾಧ್ಯ. ನಮ್ಮ ಪೂರ್ವಿಕರಿಗೆ ಸಹಬಾಳ್ವೆಯ ಪರಿಚಯ ಚೆನ್ನಾಗಿತ್ತು. ಆದರೆ ನಾವು ಆ ಸಂವೇದನೆ ಕಳೆದುಕೊಳ್ಳುತ್ತಿದ್ದೇವೆ. ಇಂದು ನಾವು ಮತ್ತೆ ವನ ಮತ್ತು ವನ್ಯಜೀವಿಗಳ ಜೊತೆಯೇ ಬಾಳುವುದನ್ನು ಕಲಿಯಬೇಕು. ಆಗ ಮಾತ್ರ ಪ್ರಕೃತಿ ಸಮತೋಲನದಿಂದ ಇರಲು ಸಾಧ್ಯ. ಹೀಗಾಗಿ ಇಂದು ನಡೆಯುತ್ತಿರುವ ಈ ನಡಿಗೆ ನಾಡಿನ ಜನರಲ್ಲಿ ಜಾಗೃತಿ ಮೂಡಿಸಲಿ, ಅರಣ್ಯ ವನ್ಯಜೀವಿ ಉಳಿಯಲಿ ಎಂದು ಹಾರೈಸಿ ಈ ನಡಿಗೆಗೆ ಚಾಲನೆ ನೀಡುತ್ತಿದ್ದೇನೆ. ಬನ್ನಿ ನಾನೂ ನಿಮ್ಮೊಂದಿಗೆ ನಡೆಯುತ್ತೇನೆ. ನಾವು ನೀವು ಕೂಡಿ ಕಬನ್ ಉದ್ಯಾನದಿಂದ ಲಾಲ್ ಬಾಗ್ ವರೆಗೆ ನಡೆಯೋಣ. ವನ್ಯಜೀವಿ ಸಂರಕ್ಷಣೆ ಮತ್ತು ಸಹಬಾಳ್ವೆಯ ಸಂದೇಶ ಸಾರೋಣ ಎಂದು ಹೇಳಿದರು.
ಚಿತ್ರನಟ ರಿಷಬ್ ಶೆಟ್ಟಿ ಮಾತನಾಡಿ, ಅರಣ್ಯ ಸಂರಕ್ಷಣೆ ಎಲ್ಲರ ಹೊಣೆಯಾಗಿದೆ. ನಾವು ಅರಣ್ಯವನ್ನು ಮತ್ತು ಅರಣ್ಯದಲ್ಲಿನ ಸಂಪತ್ತನ್ನು, ವನ್ಯಜೀವಿಗಳನ್ನು ಸಂರಕ್ಷಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಮಂಜುನಾಥ ಪ್ರಸಾದ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಬ್ರಿಜೇಶ್ ಕುಮಾರ್ ದೀಕ್ಷಿತ್ ಮತ್ತು ಸುಭಾಷ್ ಮಾಲ್ಕಡೆ ಮತ್ತಿತರರು ಪಾಲ್ಗೊಂಡಿದ್ದರು.