ಕಲ್ಲುಗಣಿ ಗುತ್ತಿಗೆ ರಾಜಧನ ಮತ್ತು ದಂಡ ಓಟಿಎಸ್ ಮೂಲಕ ವಸೂಲು: ಸಚಿವ ಸಂಪುಟ ನಿರ್ಧಾರ
ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ಕಡ್ಡಾಯ ಪ್ರವೇಶಕ್ಕೆ ರಿಯಾಯಿತಿ
ಸಚಿವ ಎಚ್.ಕೆ. ಪಾಟೀಲ್
ಬೆಂಗಳೂರು: ಕಲ್ಲು ಗಣಿ ಗುತ್ತಿಗೆ ಪ್ರದೇಶಗಳಲ್ಲಿ ಸಂಚಿತ ಆಡಿಟ್ ಪ್ರಮಾಣಕ್ಕಿಂತ ಹೆಚ್ಚುವರಿಯಾಗಿ ಉಪಖನಿಜವನ್ನು ತೆಗೆದು ರಾಜಧನ ಪಾವತಿಸದೇ ಸಾಗಾಣಿಕೆ ಮಾಡಿರುವ ಸಂಬಂಧ ಗಣಿ ಇಲಾಖೆ ವಿಧಿಸಿರುವ 6105.98 ಕೋಟಿ ರೂ. ದಂಡವನ್ನು ಓಟಿಎಸ್(ಒಂದು ಬಾರಿ ಪರಿಹಾರ) ಮೂಲಕ ಸಂಗ್ರಹಿಸಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ.
ಶುಕ್ರವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್, 2018-19ನೇ ಸಾಲಿನಲ್ಲಿ ಚಾಲ್ತಿಯಲ್ಲಿದ್ದ 2438 ಕಟ್ಟಡ ಕಲ್ಲು ಗಣಿ ಗುತ್ತಿಗೆಗಳನ್ನು ಡ್ರೋಣ್ ಉಪಕರಣ ಬಳಸಿ ಸರ್ವೇ ಮಾಡಲಾಗಿದೆ ಎಂದು ಹೇಳಿದರು.
ಈ ಸರ್ವೆ ಮೂಲಕ ಖನಿಜ ಪರವಾನಗಿ ಪಡೆಯದೇ ಸಾಗಾಣಿಕೆ ಮಾಡಿದ ಪ್ರಮಾಣ ಮತ್ತು ಗುತ್ತಿಗೆ ಪ್ರದೇಶವನ್ನು ಒತ್ತುವರಿ ಮಾಡಿರುವ ಪ್ರಮಾಣವನ್ನು ಅಂದಾಜಿಸಿ ಪ್ರತಿ ಮೆಟ್ರಿಕ್ ಟನ್ಗೆ 60 ರೂ.ಗಳಂತೆ 1221 ಕೋಟಿ ರೂ. ರಾಜಧನವಾಗುತ್ತದೆ. ಅದರ 5 ಪಟ್ಟು ದಂಡವಿಧಿಸಿ 6105.98 ಕೋಟಿ ರೂ. ವಸೂಲಿ ಮಾಡಲು ನೋಟಿಸ್ ನೀಡಲಾಗಿದೆ. 2023-24ರಲ್ಲಿ ಮತ್ತೊಂದು ಸಲ ಗುತ್ತಿಗೆದಾರರ ಸಮ್ಮುಖದಲ್ಲಿ ನ್ಯಾಯಾಲಯದ ಆದೇಶದಂತೆ ಸರ್ವೆ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
2018-19ನೇ ಸಾಲಿನ ಮತ್ತು 2023-24ನೇ ಸಾಲಿನ ಸರ್ವೆಯಲ್ಲಿ ಗುತ್ತಿಗೆ ಪ್ರದೇಶದ ಒತ್ತುವರಿ ಮಾಡಿ ತೆಗೆದಿರುವ ಪ್ರಮಾಣ ಹೆಚ್ಚಾಗಿದೆ. ಇನ್ನೂ 20 ಜಿಲ್ಲೆಗಳಲ್ಲಿ ಸರ್ವೆ ಕಾರ್ಯ ಬಾಕಿಯಿದೆ. ಸಂಚಿತ ಆಡಿಟ್ ಪ್ರಮಾಣಕ್ಕಿಂತ ಹೆಚ್ಚುವರಿಯಾಗಿ ಉಪಖನಿಜ ತೆಗೆದು ರಾಜಧನ ಪಾವತಿಸದೇ ಸಾಗಾಣಿಕೆ ಮಾಡಿರುವ ಸಂಬಂಧ ಗಣಿ ಇಲಾಖೆ ವಿಧಿಸಿರುವ ದಂಡವನ್ನು ಓಟಿಎಸ್ ಮೂಲಕ ಸಂಗ್ರಹಿಸಲು ಪ್ರಸ್ತಾಪಿಸಲಾಗಿತ್ತು ಎಂದು ಎಚ್.ಕೆ.ಪಾಟೀಲ್ ಹೇಳಿದರು.
311 ಕೋಟಿ ರೂ.ಆದಾಯ ನಿರೀಕ್ಷೆ: ಉಪಖನಿಜಗಳ ಮೇಲಿನ ರಾಜಧನವನ್ನು 3 ವರ್ಷಗಳ ಅವಧಿಯಲ್ಲಿ ಒಂದು ಬಾರಿ ಪರಿಷ್ಕರಿಸಲು ಅವಕಾಶ ಕಲ್ಪಿಸಲಾಗಿದೆ. ಹೆಚ್ಚುವರಿ ರಾಜಸ್ವ ಸಂಗ್ರಹಣೆಗೆ ಇದರಿಂದ ಅನುಕೂಲವಾಗುವುದರಿಂದ ರಾಜಧನ ಪರಿಷ್ಕರಣೆಗೆ ಅನುಕೂಲವಾಗುವ ನಿಯಮಗಳಿಗೆ ತಿದ್ದುಪಡಿ ಮಾಡಲು ಪ್ರಸ್ತಾಪಿಸಲಾಗಿತ್ತು ಎಂದು ಅವರು ಹೇಳಿದರು.
ಅದರಂತೆ, ‘ಕರ್ನಾಟಕ ಉಪಖನಿಜ ರಿಯಾಯಿತಿ (ತಿದ್ದುಪಡಿ) ನಿಯಮಗಳು, 2024’ಕ್ಕೆ ಅನುಮೋದನೆ ನೀಡಲು ಸಚಿವ ಸಂಪುಟ ನಿರ್ಣಯಿಸಿದೆ. ಈ ಪರಿಷ್ಕರಣೆಯಿಂದ ಒಟ್ಟಾರೆಯಾಗಿ 311.55 ಕೋಟಿ ರೂ.ಗಳ ಹೆಚ್ಚುವರಿ ಆದಾಯ ಸಂಗ್ರಹಣೆ ನಿರೀಕ್ಷೆಯಿದೆ. ಕಟ್ಟಡ ಕಲ್ಲು ಉಪಖನಿಜದ ರಾಜಧನವನ್ನು ಪ್ರತಿ ಮೆಟ್ರಿಕ್ ಟನ್ಗೆ 70 ರೂ.ಗಳಿಂದ 80 ರೂ.ಗಳಿಗೆ ನಿಗದಿಪಡಿಸಲಾಗಿದೆ ಎಂದು ಅವರು ಹೇಳಿದರು.
ಗಣಿ ಗುತ್ತಿಗೆ ಮಂಜೂರಾದ ವಿಧಾನ ಮತ್ತು ಪಾವತಿಸುವ ರಾಜಧನವನ್ನು ಆಧರಿಸಿ ಗಣಿ ಗುತ್ತಿಗೆಗಳ ವರ್ಗಕ್ಕನುಸಾರವಾಗಿ ವಿವಿಧ ತೆರಿಗೆ ದರ ಪ್ರಸ್ತಾಪಿಸಿ ಆಯಾ ವರ್ಗಗಳಲ್ಲಿ ಏಕರೀತಿಯ ತೆರಿಗೆಯನ್ನು ವಿಧಿಸಲು ಪ್ರಸ್ತಾಪಿಸಲಾಗಿದೆ. ರಾಜಧನದ ಮೇಲೆ ಶೇ.0.25ರಷ್ಟು ಖನಿಜ ಹಕ್ಕುಗಳ ತೆರಿಗೆಯಾಗಿ ವಿಧಿಸಲು ಪ್ರಸ್ತಾಪಿಸಲಾಗಿದೆ. ಖನಿಜ ಹಕ್ಕುಗಳ ತೆರಿಗೆಯಿಂದ ರಾಜ್ಯವು ಪ್ರತಿವರ್ಷ ಸುಮಾರು 4,207.95 ಕೋಟಿ ರೂ.ಹೆಚ್ಚುವರಿ ಆದಾಯವನ್ನು ಮತ್ತು ಖನಿಜವಿರುವ ಭೂಮಿಗಳ ಮೇಲಿನ ತೆರಿಗೆ ಪ್ರಕಾರ ಪ್ರತಿ ವರ್ಷ ಸುಮಾರು 505.90 ಕೋಟಿ ರೂ.ಹೆಚ್ಚುವರಿ ಆದಾಯವನ್ನು ನಿರೀಕ್ಷಿಸಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.
ರಾಜ್ಯ ಸರಕಾರದ ಅಂತರ್ ನಿಗಮ ಠೇವಣಿಗಳಿಗೆ ಅಸ್ತು: ಬ್ಯಾಂಕ್ಗಳು ನೀಡುವ ಬಡ್ಡಿ ದರಗಳಿಗಿಂತ ಅಂತರ್ ನಿಗಮದ ಠೇವಣಿಗಳಲ್ಲಿ ಹೆಚ್ಚಿನ ಬಡ್ಡಿದರಗಳು ಲಭ್ಯವಾಗುವುದರಿಂದ ಸಾರ್ವಜನಿಕ ಉದ್ದಿಮೆಗಳು ತಮ್ಮ ಹೆಚ್ಚುವರಿ ನಿಧಿಯನ್ನು ಅಂತರ್ ನಿಗಮ ಠೇವಣಿಗಳಲ್ಲಿ ಹೂಡಿಕೆ ಮಾಡಿ ಹೆಚ್ಚಿನ ಆದಾಯಗಳಿಸಲು ಪ್ರಸ್ತಾಪಿಸಿರುವುದಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.
ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ ಮಸೂದೆಗೆ ತಿದ್ದುಪಡಿ: ವಂಚಕ ಹಣಕಾಸು ಸಂಸ್ಥೆಗಳ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು ಹರಾಜು ಮೂಲಕ ಅವುಗಳನ್ನು ಮಾರಾಟ ಮಾಡಿ ಅದರಿಂದ ಬಂದ ಹಣವನ್ನು ಬಾಧಿತ ಠೇವಣಿದಾರರಿಗೆ ಹಂಚಿಕೆ ಮಾಡುವ ಮೂಲಕ ನ್ಯಾಯ ಒದಗಿಸಲು ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಮತ್ತು ಸಂರಕ್ಷಣೆ ಮಸೂದೆಗೆ ಕೆಲವು ತಿದ್ದುಪಡಿಗಳನ್ನು ತರಲು ಸಚಿವ ಸಂಪುಟ ಸಮ್ಮಿತಿಸಿದೆ ಎಂದು ಅವರು ತಿಳಿಸಿದರು.
ಆರೋಗ್ಯ ಪ್ರಯೋಗಶಾಲೆಗಳ ಪರಿಕರ ಖರೀದಿಗೆ ಅನುಮೋದನೆ: 2024-25ನೇ ಸಾಲಿಗೆ ರಾಷ್ಟ್ರೀಯ ಆರೋಗ್ಯ ಅಭಿಯಾನದ ಉಚಿತ ರೋಗ ಪತ್ತೆ ಮತ್ತು ಉಚಿತ ಔಷಧಿ ಸೇವೆಗಳ ಕಾರ್ಯಕ್ರಮದ ಅಡಿಯಲ್ಲಿ ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆ, ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಜಿಲ್ಲಾ ಆಸ್ಪತ್ರೆ ಹಾಗೂ ರಾಜ್ಯ ಮಟ್ಟದ ಆಸ್ಪತ್ರೆಗಳಲ್ಲಿನ ಪ್ರಯೋಗಾಲಯ ಉಪಕರಣಗಳಿಗೆ ಪರಿಕರಗಳನ್ನು 19.70 ಕೋಟಿ ರೂ.ವೆಚ್ಚದಲ್ಲಿ ಖರೀದಿಸಿ ಸರಬರಾಜು ಮಾಡಲು ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.
ಸರಕಾರಿ ಕಾಲೇಜುಗಳ ಮೂಲಸೌಕರ್ಯ ಅಭಿವೃದ್ಧಿಗೆ ಅಸ್ತು: ವಿಶ್ವಬ್ಯಾಂಕ್ ನೆರವಿನೊಂದಿಗೆ 2500 ಕೋಟಿ ರೂ.ಗಳ ವೆಚ್ಚದಲ್ಲಿ(ವಿಶ್ವಬ್ಯಾಂಕ್ 1750 ಕೋಟಿ ರೂ. ಮತ್ತು ರಾಜ್ಯ ಸರಕಾರ 750 ಕೋಟಿ ರೂ.) ಸರಕಾರಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಬಲಪಡಿಸುವ ಯೋಜನೆಯನ್ನು ಅನುಷ್ಠಾನಗೊಳಿಸಲು ಹಾಗೂ ಬಾಹ್ಯ ನಿಧಿಯ ಅನುಮೋದನೆಗಾಗಿ ಕೇಂದ್ರ ಸರಕಾರದ ಆರ್ಥಿಕ ವ್ಯವಹಾರಗಳ ಇಲಾಖೆಯ ಮೂಲಕ ಪ್ರಾಥಮಿಕ ಯೋಜನೆಯ ವರದಿಯನ್ನು ವಿಶ್ವಬ್ಯಾಂಕ್ಗೆ ಸಲ್ಲಿಸಲು ಸಚಿವ ಸಂಪುಟ ನಿರ್ಣಯಿಸಿದೆ ಎಂದು ಅವರು ಹೇಳಿದರು.
ಸುಧಾರಿತ ಕೌಶಲ್ಯಗಳೊಂದಿಗೆ ಉತ್ಕೃಷ್ಟತೆ ಹೊಂದಿರುವ ವಿಭಾಗಗಳ ಸ್ಥಾಪನೆ, ಪಠ್ಯಕ್ರಮದ ಉನ್ನತೀಕರಣ, ಶಿಕ್ಷಕರ ತರಬೇತಿ, ಇಂಟರ್ನ್ಶಿಪ್ ಮತ್ತು ಡಿಜಿಟಲ್ ಅಪ್ರೇಟಿಶಿಪ್ಗಳ ಮೂಲಕ ಸುಧಾರಿತ ಉದ್ಯೋಗಾವಕಾಶ, ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಳ, ಮಹಿಳಾ ಕಾಲೇಜುಗಳು, ಪಾಲಿಟೆಕ್ನಿಕ್ ಮತ್ತು ಸಂಸ್ಥೆಗಳಲ್ಲಿ ಮೂಲಸೌಕರ್ಯ, ಬೋಧನೆ ಉನ್ನತೀಕರಣ, ಸಂಶೋಧನಾ ಪ್ರಯೋಗಾಲಯಗಳ ನವೀಕರಣಗೊಳಿಸುವುದು ಈ ಯೋಜನೆಯ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.
ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ಕಡ್ಡಾಯ ಪ್ರವೇಶಕ್ಕೆ ರಿಯಾಯಿತಿ: ಅಲ್ಪಸಂಖ್ಯಾತರ ಸಮುದಾಯದವರು(ಮುಸ್ಲಿಮ್, ಕ್ರೈಸ್ತ, ಸಿಖ್, ಜೈನ, ಬೌದ್ಧ ಹಾಗೂ ಪಾರ್ಸಿ) ನಡೆಸುವ ಶೈಕ್ಷಣಿಕ ಸಂಸ್ಥೆಗಳನ್ನು ಅಲ್ಪಸಂಖ್ಯಾತರ ಶೈಕ್ಷಣಿಕ ಸಂಸ್ಥೆಗಳೆಂದು ಘೋಷಿಸಲು ಹಾಲಿ ಜಾರಿಯಲ್ಲಿರುವ ನಿಯಮ ಮತ್ತು ಆದೇಶಗಳಲ್ಲಿ ನಿಗಧಿಪಡಿಸಿರುವ ಶೇಕಡಾವಾರು ವಿದ್ಯಾರ್ಥಿಗಳು ಲಭ್ಯವಾಗುವುದು ಕಷ್ಟಕರವಾಗಿದೆ. ಆದುದರಿಂದ, ಈಗಿರುವ ನಿಯಮಗಳನ್ನು ಪರಿಷ್ಕರಿಸಲು ನಿರ್ಧರಿಸಲಾಗಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.
ಎಸ್.ಸಿ/ ಎಸ್.ಟಿ ಹಾಸ್ಟೆಲ್ಗಳಿಗೆ ಮಂಚ-ಹಾಸಿಗೆ ಪೂರೈಕೆಗೆ ಒಪ್ಪಿಗೆ: ಕಲ್ಯಾಣ ಕರ್ನಾಟಕದ ಎಸ್.ಸಿ/ಎಸ್.ಟಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಸರಕಾರಿ ವಸತಿ ಶಾಲೆಗಳು ಮತ್ತು ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಸತಿ ನಿಲಯಗಳಿಗೆ ಟೂ ಟಯರ್ ಕಾಟ್, ಕಾಯರ್ ಮ್ಯಾಟ್ರಸ್ ಹಾಗೂ ಎಲೆಕ್ಟ್ರೀಕ್ ಹಿಟ್ ಪಂಪ್ಗಳನ್ನು 426 ಕೋಟಿ ರೂ.ವೆಚ್ಚದಲ್ಲಿ ಪೂರೈಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.
ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಇಜೇರಿಯಿಂದ ಯಡ್ರಾಮಿ ವರೆಗೆ 53.42 ಕಿ.ಮೀ ರಿಂದ 63.42 ಕಿ.ಮೀ ವರೆಗೆ ರಸ್ತೆ ಸುಧಾರಣೆ ಕಾಮಗಾರಿಯನ್ನು 25 ಕೋಟಿ ರೂ.ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಅವರು ಹೇಳಿದರು.
‘ಕರ್ನಾಟಕ ಜನನ ಮರಣಗಳ ನೋಂದಣಿ (ತಿದ್ದುಪಡಿ) ನಿಯಮಗಳು-2024’ಕ್ಕೆ ಸಂಪುಟದಿಂದ ಅನುಮೋದನೆ ನೀಡಿದೆ. ಮರಣದ ಪ್ರಮಾಣ ಪತ್ರದಲ್ಲಿ ಕಾಯಿಲೆಯ ಅಥವಾ ಅಸ್ವಸ್ಥತೆಯ ಇತಿಹಾಸ ಒಂದುವೇಳೆ ಲಭ್ಯವಿದ್ದರೇ ದಾಖಲಿಸಲು ವಿದ್ಯುನ್ಮಾನ ಮಾಧ್ಯಮದ ಮೂಲಕ ಜನನ ಮತ್ತು ಮರಣ ಪತ್ರ ವಿತರಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಅವರು ಹೇಳಿದರು.
ರಾಷ್ಟ್ರೀಯ ಹೆದ್ದಾರಿ 207 ಹೊಸಕೋಟೆ ತಾಲೂಕಿನ ಕೊರಳೂರು ಗ್ರಾಮದಲ್ಲಿ 48.30 ಕಿ.ಮೀ.ರಲ್ಲಿ ಹಾಲಿ ಇರುವ ಎಲ್.ಸಿ.130ರ ಬದಲಾಗಿ ರೈಲ್ವೆ ಮೇಲುಸೇತುವೆ ನಇರ್ಮಾಣ ಕಾಮಗಾರಿಯ 97.27 ಕೋಟಿ ರೂ.ಗಳ ಪರಿಷ್ಕೃತ ಅಂದಾಜಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಅವರು ಹೇಳಿದರು.
ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳ ವಿದ್ಯಾರ್ಥಿಗಳಿಗೆ ಒಟ್ಟು 11 ಕೋಟಿ ರೂ.ಗಳ ವೆಚ್ಚದಲ್ಲಿ ಮೊಟ್ಟೆಯನ್ನು ಪ್ರಸ್ತುತ ಜಾರಿಯಲ್ಲಿರುವ ಆಹಾರ ಟೆಂಡರ್ ಪ್ರಕ್ರಿಯೆ ಮೂಲಕ ಖರೀದಿಸಿ ಒದಗಿಸಲು ನಿರ್ಣಯಿಸಿದೆ. ಅಲ್ಲದೇ, ವಸತಿ ಶಾಲೆ, ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಗಳೂ ಮತ್ತು ಕ್ರೈಸ್ ವಸತಿ ಶಾಲೆ/ಕಾಲೇಜುಗಳ ವಿದ್ಯಾರ್ಥಿಗಳಿಗೆ ಮಾಸಿಕ 100 ರೂ.ಗಳಲ್ಲಿ ಶೇ.25ರಷ್ಟು ವೆಚ್ಚದಲ್ಲಿ ಶೇಂಗಾ ಚಿಕ್ಕಿ ಮತ್ತು ಇನ್ನುಳಿದ ಶೇ.75ರಷ್ಟರಲ್ಲಿ ಪೌಷ್ಟಿಕಾಂಶದ ಪುಡಿಯನ್ನು 32.95 ಕೋಟಿ ರೂ.ಗಳ ವೆಚ್ಚದಲ್ಲಿ ಖರೀದಿಸಿ, ಒದಗಿಸಲು ಅನುಮೋದಿಸಿದೆ ಎಂದು ಅವರು ಹೇಳಿದರು.
ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ರೈತರ ಸಹಭಾಗಿತ್ವದಲ್ಲಿ 50:50ರ ಅನುಪಾತದಲ್ಲಿ ಕಲಬುರಗಿ ತಾಲೂಕಿನ ಹಾಗರಗಾ ಗ್ರಾಮದ ವಿವಿಧ ಸರ್ವೆ ನಂಬರ್ ಗಳಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ವಸತಿ ಯೋಜನೆಯ ರೂ.97.50 ಕೋಟಿಗಳ ಮೊತ್ತದ ಪರಿಷ್ಕೃತ ಅಂದಾಜಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.