ಕೋಮು ದ್ವೇಷ ಯತ್ನ ಆರೋಪ : ಸುವರ್ಣ ನ್ಯೂಸ್, ನಿರೂಪಕ ಅಜಿತ್ ಹನುಮಕ್ಕನವರ್ ವಿರುದ್ಧ ದೂರು
ಬೆಂಗಳೂರು : ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಅದರ ನಿರೂಪಕ ಅಜಿತ್ ಹನುಮಕ್ಕನವರ್ ವಿರುದ್ಧ ಕೋಮು ದ್ವೇಷವನ್ನು ಹರಡುತ್ತಿದ್ದಾರೆ ಎಂದು ಆರೋಪಿಸಿ ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಸಿವಿಲ್ ರೈಟ್ಸ್ ಸಂಘಟನೆಯ ನಿಯೋಗವು (ಎಪಿಸಿಆರ್) ಬೆಂಗಳೂರು ಸಹಾಯಕ ಪೊಲೀಸ್ ಆಯುಕ್ತರಿಗೆ ಶನಿವಾರ ದೂರು ನೀಡಿದೆ.
ದೂರು ಸಲ್ಲಿಸಿದ ಬಳಿಕ ಮಾತನಾಡಿರುವ ಎಪಿಸಿಆರ್ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ನಿಯಾಝ್, ಮೇ 9ರಂದು ಸುವರ್ಣ ನ್ಯೂಸ್ ಕನ್ನಡ ವಾಹಿನಿಯಲ್ಲಿ ಕಾರ್ಯಕ್ರಮವೊಂದರ ಪ್ರಸಾರದ ಸಮಯದಲ್ಲಿ ಅಜಿತ್ ಹನಮಕ್ಕನವರ್ ಹಿಂದೂ ಜನಸಂಖ್ಯೆಯನ್ನು ಪ್ರತಿನಿಧಿಸಲು ಭಾರತೀಯ ಧ್ವಜವನ್ನು ಮತ್ತು ಮುಸ್ಲಿಮರನ್ನು ಪ್ರತಿನಿಧಿಸಲು ಪಾಕಿಸ್ತಾನದ ಧ್ವಜವನ್ನು ಬಳಸಿ ಕೋಮು ದ್ವೇಷ ಹರಡಲು ಯತ್ನಿಸಿದ್ದಾರೆ ಎಂದು ಆರೋಪಿಸಿದರು.
ಸುವರ್ಣ ಸುದ್ದಿವಾಹಿನಿ ಕಾರ್ಯಕ್ರಮವನ್ನು ದೂರದರ್ಶನದಲ್ಲಿ ಮತ್ತು ಚಾನಲ್‌ನ ಯೂಟ್ಯೂಬ್ ಪ್ಲಾಟ್ ಫಾರ್ಮ್‌ನಲ್ಲಿ ಪ್ರಸಾರ ಮಾಡಲಾಯಿತು. 1950 ಮತ್ತು 2015ರ ನಡುವೆ ಭಾರತದಲ್ಲಿ ಹಿಂದೂಗಳ ಪಾಲು 7.8 ರಷ್ಟು ಕಡಿಮೆಯಾಗಿದೆ ಎಂದು ಹೇಳುವ ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿ ಬಿಡುಗಡೆ ಮಾಡಿದ ಜನಸಂಖ್ಯಾ ವರದಿಯನ್ನು ಕಾರ್ಯಕ್ರಮದಲ್ಲಿ ಚರ್ಚಿಸಲಾಗಿದೆ ಎಂದು ನಿಯಾಝ್ ಹೇಳಿದರು.
ಅಜಿತ್ ಹನುಮಕ್ಕನವರ್ ಅವರು ರಾಷ್ಟ್ರೀಯ ಧ್ವಜಗಳನ್ನು ಧಾರ್ಮಿಕ ಸಮುದಾಯಗಳಿಗೆ ರೂಪಕಗಳಾಗಿ ಬಳಸುವುದು ತಪ್ಪುದಾರಿಗೆಳೆಯುವಂತಿದೆ ಮಾತ್ರವಲ್ಲದೆ ಮುಸ್ಲಿಮ್ ಜನಸಂಖ್ಯೆ ಕಡಿಮೆ ಇರುವ ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಬದಲಾಗುತ್ತಿರುವ ಜನಸಂಖ್ಯಾಶಾಸ್ತ್ರದ ಬಗ್ಗೆ ವೀಕ್ಷಕರಲ್ಲಿ ಭಯವನ್ನು ಬೆಳೆಸಿದೆ ಎಂದು ನಿಯಾಝ್ ತಿಳಿಸಿದರು.
ಸುವರ್ಣ ಸುದ್ದಿ ವಾಹಿನಿ ಮತ್ತು ನಿರೂಪಕ ಅಜಿತ್ ಹನಮಕ್ಕನವರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ನಿಯಾಝ್ ಒತ್ತಾಯಿಸಿದರು,