ಸಾವರ್ಕರ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ಆರೋಪ: ಸಚಿವ ದಿನೇಶ್ ಗುಂಡೂರಾವ್ ವಿರುದ್ಧ ದೂರು ದಾಖಲು
ಬೆಂಗಳೂರು: ಸಾವರ್ಕರ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ಸಂಬಂಧ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಿರುದ್ಧ ನಗರದ ಶಂಕರಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸಂಘಪರಿವಾರದ ಕಾರ್ಯಕರ್ತ ತೇಜಸ್ಗೌಡ ಎಂಬುವರು ದೂರು ನೀಡಿದ್ದು, ಈ ಸಂಬಂಧ ಪರಿಶೀಲನೆ ನಡೆಸಿ ಕಾನೂನು ತಜ್ಞರ ಅಭಿಪ್ರಾಯ ಪಡೆದು ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಅ.2ರ ಗಾಂಧಿ ಜಯಂತಿಯ ಕಾರ್ಯಕ್ರಮವೊಂದರಲ್ಲಿ ಸಚಿವ ದಿನೇಶ್ ಗುಂಡೂರಾವ್ ಅವರು ಮಾತನಾಡುತ್ತಾ ‘ಸಾವರ್ಕರ್ ಅವರು ಬ್ರಾಹ್ಮಣನಾಗಿದ್ದರೂ ಗೋಮಾಂಸವನ್ನು ತಿನ್ನುತ್ತಿದ್ದರು. ಅವರು ಗೋಹತ್ಯೆ ವಿರೋಧಿಸುತ್ತಿರಲಿಲ್ಲ’ ಎಂದು ಅವಹೇಳನಾಕಾರಿ ಹೇಳಿಕೆ ನೀಡಿದ್ದಾರೆ. ಆರೋಗ್ಯ ಸಚಿವರ ಹೇಳಿಕೆಯಿಂದ ನೋವುಂಟಾಗಿದೆ ಎಂದು ತೇಜಸ್ಗೌಡ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಆರೋಗ್ಯ ಸಚಿವರ ಹೇಳಿಕೆಯು ಕೋಮುದ್ವೇಷ, ಕೋಮು ಪ್ರಚೋದನೆಗೆ ಹೆಚ್ಚು ಒತ್ತಡ ತರುವಂತಹ ಅಂಶ ಹೊಂದಿದೆ. ಆದ್ದರಿಂದ, ಪರಿಶೀಲಿಸಿ ದಿನೇಶ್ ಗುಂಡೂರಾವ್ ಅವರ ವಿರುದ್ಧ ದೂರು ದಾಖಲಿಸಬೇಕು. ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ತೇಜಸ್ ಗೌಡ ದೂರಿನಲ್ಲಿ ಮನವಿ ಮಾಡಿದ್ದಾರೆ.