ಎಚ್ಡಿಕೆ ವಿರುದ್ಧ ದೂರು ನೀಡಿದ್ದ ಉದ್ಯಮಿ ವಿರುದ್ಧ ಪ್ರತಿದೂರು ದಾಖಲು
ವಿಜಯ್ ಟಾಟಾ ವಿರುದ್ಧ ತನಿಖೆಗೆ ಎಸ್ಐಟಿ ರಚಿಸುವಂತೆ ಎಚ್.ಎಂ.ರಮೇಶ್ ಗೌಡ ಆಗ್ರಹ
ಜೆಡಿಎಸ್ ಕಚೇರಿಯಲ್ಲಿ ರಮೇಶ್ ಗೌಡ ಸುದ್ದಿಗೋಷ್ಠಿ
ಬೆಂಗಳೂರು: ಚನ್ನಪಟ್ಟಣ ಉಪಚುನಾವಣೆ ಖರ್ಚಿಗಾಗಿ 50 ಕೋಟಿ ರೂ. ನೀಡುವಂತೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಉದ್ಯಮಿ ವಿಜಯ್ ಟಾಟಾ ಕೊಟ್ಟಿರುವ ದೂರಿಗೆ ಮಾಜಿ ವಿಧಾನಪರಿಷತ್ ಸದಸ್ಯ ರಮೇಶ್ಗೌಡ ಅವರು ನಗರದ ಅಮೃತಹಳ್ಳಿ ಪೊಲೀಸ್ ಠಾಣೆಗೆ ಪ್ರತಿ ದೂರು ನೀಡಿದ್ದಾರೆ.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಉದ್ಯಮಿ ವಿಜಯ್ ಟಾಟಾ ಸುಳ್ಳು ದೂರು ನೀಡಿರುವುದಾಗಿ ರಮೇಶ್ ಗೌಡ ಆರೋಪಿಸಿದ್ದಾರೆ.
ದೂರಿನ ವಿವರ: ಆ.24ರಂದು ಮನೆಗೆ ಊಟಕ್ಕೆ ಕರೆದಾಗ ಬೆದರಿಕೆ ಹಾಕಿದ್ದಾರೆ. ತಾನು ಈಗಾಗಲೇ ಉದ್ಯಮದಲ್ಲಿ ನಷ್ಟ ಹೊಂದಿದ್ದೇನೆ. ತನಗೆ 100 ಕೋಟಿ ರೂ. ಬೇಕಿದ್ದು, ನೀವು ಕೊಡಿ, ಇಲ್ಲವಾದರೆ ಎಚ್.ಡಿ.ಕುಮಾರಸ್ವಾಮಿ ಹಾಗೂ ನಿಮ್ಮನ್ನು ಬಿಡುವುದಿಲ್ಲ ಎಂದು ವಿಜಯ್ ಟಾಟಾ ಅವರು ಬೆದರಿಕೆ ಹಾಕಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ನಮ್ಮ ಘನತೆಗೆ ಧಕ್ಕೆತರುವ ಉದ್ದೇಶದಿಂದ ನಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿರುವ ಉದ್ಯಮಿ ವಿಜಯ್ ಟಾಟಾ ವಿರುದ್ಧ ತನಿಖೆ ನಡೆಸಬೇಕು ಎಂದು ರಮೇಶ್ ಗೌಡ ದೂರಿನಲ್ಲಿ ತಿಳಿಸಿದ್ದಾರೆ.
ವಿಜಯ್ ಟಾಟಾ ವಿರುದ್ಧ ತನಿಖೆಗೆ ಎಸ್ಐಟಿ ರಚಿಸುವಂತೆ ಎಚ್.ಎಂ.ರಮೇಶ್ ಗೌಡ ಆಗ್ರಹ
ವಂಚಕ ವಿಜಯ್ ಟಾಟಾನಿಂದ ಅನೇಕರಿಗೆ ಮೋಸವಾಗಿದೆ. ನೂರಾರು ಎಫ್ಐಆರ್ಗಳು ಆತನ ಮೇಲೆ ದಾಖಲಾಗಿವೆ. ಆತನಿಂದ ಮೋಸ ಹೋದವರಿಗೆ ನ್ಯಾಯ ಕೊಡಿಸಲು ಸರಕಾರ ವಿಶೇಷ ತನಿಖಾ ತಂಡ (ಎಸ್ಐಟಿ) ರಚನೆ ಮಾಡಬೇಕು ಎಂದು ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಚ್.ಎಂ.ರಮೇಶ್ ಗೌಡ ಆಗ್ರಹಿಸಿದ್ದಾರೆ.
ಶುಕ್ರವಾರ ನಗರದಲ್ಲಿರುವ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಆಂತರಿಕ ಭದ್ರತಾ ವಿಭಾಗದಿಂದ ನನ್ನ ಫೋನ್ ಕದ್ದಾಲಿಕೆ ಆಗುತ್ತಿದೆ. ಪೊಲೀಸ್ ಆಯುಕ್ತರಿಗೆ ನಾನು ದೂರು ನೀಡುತ್ತೇನೆ. ಈ ಬಗ್ಗೆಯೂ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು.
ಕುಮಾರಸ್ವಾಮಿ ಮತ್ತು ನಿಮ್ಮ ಮೇಲೆ ಕೇಸು ದಾಖಲಿಸಲು ನನ್ನ ಮೇಲೆ ಸಿಎಂ ಕಚೇರಿ ಹಾಗೂ ಕೆಲ ಸಚಿವರ ಒತ್ತಡ ಇದೆ ಎಂದು ಸ್ವತಃ ವಿಜಯ್ ಟಾಟಾ ನನಗೆ ಪೊಲೀಸ್ ಠಾಣೆಯಲ್ಲಿಯೆ ಹೇಳಿದ್ದಾನೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿನ ಸಿಸಿ ಕ್ಯಾಮೆರಾಗಳನ್ನು ಪರಿಶೀಲನೆ ಮಾಡಲಿ ಎಂದು ಅವರು ಹೇಳಿದರು.
ವಿಜಯ್ ಟಾಟಾ ಮೇಲೆ ಕರ್ನಾಟಕದಲ್ಲಿ ಮಾತ್ರವಲ್ಲ, ನಾಗಪುರ, ಪುಣೆ, ಮುಂಬೈಯಲ್ಲೂ ಪ್ರಕರಣಗಳು ದಾಖಲಾಗಿವೆ. ಇದಕ್ಕೆ ಸಂಬಂಧಪಟ್ಟ ಎಲ್ಲ ದಾಖಲೆಗಳು ನನ್ನ ಬಳಿ ಇವೆ. ನಾನು ದೂರು ಕೊಟ್ಟರೆ ಎಫ್ಐಆರ್ ಆಗಲ್ಲ. ಆತ ದೂರು ಕೊಟ್ಟರೆ ಆಗುತ್ತದೆ. ಪೊಲೀಸ್ ಠಾಣೆ ಮುಂದೆ ಧರಣಿ ಕೂರುತ್ತೇನೆ. ನಾಳೆಯಿಂದ ಎಲ್ಲ ಸಚಿವರ ಮೇಲೆ ದೂರು ಕೊಟ್ಟರೆ ಎಫ್ಐಆರ್ ಹಾಕುತ್ತಾರಾ? ಎಂದು ರಮೇಶ್ ಗೌಡ ಪ್ರಶ್ನಿಸಿದರು.
ನಾನು ವಿಜಯ್ ಟಾಟಾ ಬಳಿ ಯಾವುದೇ ಹಣ ಕೇಳಿಲ್ಲ. ಆತನೆ ನನಗೆ ಹಲವು ಬಾರಿ ಕರೆ ಮಾಡಿದ್ದಾನೆ. ನನ್ನ ಹಾಗೂ ಆತನ ಫೋನ್ ಜಪ್ತಿ ಮಾಡಿ ಪರಿಶೀಲನೆ ನಡೆಸಲಿ ಎಂದು ಅವರು ಸವಾಲು ಹಾಕಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಸದ ಮಲ್ಲೇಶ್ ಬಾಬು, ವಿಧಾನಪರಿಷತ್ ಸದಸ್ಯರಾದ ಕೆ.ಎನ್.ತಿಪ್ಪೇಸ್ವಾಮಿ, ಟಿ.ಎ.ಶರವಣ, ಜವರಾಯಿಗೌಡ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ಪೊಲೀಸ್ ಆಯುಕ್ತರ ಕಚೇರಿ ಎದುರು ಧರಣಿ
ವಿಜಯ್ ಟಾಟಾ ವಿರುದ್ಧ ದೂರು ಕೊಟ್ಟಿದ್ದರೂ ಎಫ್ಐಆರ್ ಮಾಡದಿರುವ ಪೊಲೀಸರ ಕ್ರಮ ಖಂಡಿಸಿ ರಮೇಶ್ ಗೌಡ ಸೇರಿದಂತೆ ಇನ್ನಿತರ ಮುಖಂಡರು ನಗರ ಪೊಲೀಸ್ ಆಯುಕ್ತರ ಕಚೇರಿ ಎದುರು ಧರಣಿ ನಡೆಸಿದರು.