ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿಯಿಂದ ದೂರು
ಬೆಂಗಳೂರು: ‘ಬಿಜೆಪಿ ಅಧಿಕಾರಕ್ಕೆ ಬಂದರೆ ಮಹಿಳೆಯರ ಮಂಗಳಸೂತ್ರ ಮಾತ್ರವಲ್ಲ, ತಮ್ಮ ಗಂಡದಿರು, ಮಕ್ಕಳನ್ನು ಕಳೆದುಕೊಳ್ಳುತ್ತಾರೆ’ ಎಂಬ ಹೇಳಿಕೆಗೆ ಸಂಬಂಧಿಸಿದಂತೆ ಮಾಜಿ ಶಾಸಕ ಡಾ. ಯತೀಂದ್ರ ಸಿದ್ಧರಾಮಯ್ಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ, ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಸೋಮವಾರ ಬಿಜೆಪಿ ಮುಖ್ಯ ವಕ್ತಾರ ಅಶ್ವತ್ಥ ನಾರಾಯಣ ನೇತೃತ್ವದ ಬಿಜೆಪಿ ಮುಖಂಡ ನಿಯೋಗ, ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ಡಾ.ಯತೀಂದ್ರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದೆ.
ಕ್ಷಮೆ ಕೇಳಬೇಕು: ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅಶ್ವತ್ಥ್ ನಾರಾಯಣ, ‘ಡಾ. ಯತೀಂದ್ರ ವಿರುದ್ದ ನಾವು ದೂರು ನೀಡಿದ್ದೇವೆ. ಈ ರೀತಿ ಯಾವುದೇ ಹೇಳಿಕೆ ಕೊಡದಂತೆ ಸೂಚನೆ ನೀಡಬೇಕೆಂದು ಮನವಿ ಮಾಡಿದ್ದೇವೆ. ಕೂಡಲೇ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದೇವೆ. ಜೊತೆಗೆ ಯತೀಂದ್ರ ಸಿದ್ದರಾಮಯ್ಯ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದ್ದೇವೆ ಎಂದರು.
ಚುನಾವಣೆ ಘೋಷಣೆ ಬಳಿಕ ಕಾಂಗ್ರೆಸ್ ನಾಯಕರು ಬೇಜವಾಬ್ದಾರಿ ಮಾತುಗಳನ್ನ ಆಡುತ್ತಿದ್ದಾರೆ. ಈ ಹಿಂದೆ ನಟಿ ಹೇಮಾ ಮಾಲಿನಿ ಕುರಿತು ಹೇಳಿಕೆ ಕೊಟ್ಟು ಸುರ್ಜೇವಾಲಾ ಎರಡು ದಿನ ಪ್ರಚಾರದಿಂದ ದೂರ ಉಳಿಯಬೇಕಾಯಿತು. ಈಗ ಡಾ.ಯತೀಂದ್ರ, ಮೋದಿ ವಿರುದ್ಧ ಏನೇನೋ ಮಾತಾಡಿದ್ದಾರೆ ಎಂದು ಅವರು ಟೀಕಿಸಿದರು.