ಪುನೀತ್ ಕೆರೆಹಳ್ಳಿ ವಿರುದ್ಧ ಕಾಂಗ್ರೆಸ್ ನಿಂದ ದೂರು
ಕೋಮುದ್ವೇಶ ಹರಡಲು ಯತ್ನ; ಆರೋಪ
ಬೆಂಗಳೂರು: ವಾಟ್ಸಾಪ್ ಸಂದೇಶದ ಮೂಲಕ ಕೋಮು ದ್ವೇಷ ಹರಡುತ್ತಿರುವ ಪುನೀತ್ ಕೆರೆಹಳ್ಳಿ ವಿರುದ್ಧ ಬೆಂಗಳೂರಿನ ಹಲಸೂರು ಪೊಲೀಸ್ ಠಾಣೆಯ ಸೈಬರ್ ಅಪರಾಧ ವಿಭಾಗದಲ್ಲಿ ದೂರು ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಬೆಂಗಳೂರು ಕೇಂದ್ರ ಜಿಲ್ಲಾ ಕಾಂಗ್ರೆಸ್ ಸಮಿತಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷರಾದ ಬಿ ಎಲ್ ಚೇತನ್ ಎಂಬುವರು ಪುನೀತ್ ಕೆರೆಹಳ್ಳಿ ವಿರುದ್ಧ ಸೈಬರ್ ಠಾಣೆಗೆ ದೂರು ದಾಖಲಿಸಿದ್ದಾರೆ ಎನ್ನಲಾಗಿದೆ.
“ರಾಷ್ಟ್ರ ರಕ್ಷಣಾ ಪಡೆ” ಎಂಬ ಹೆಸರಿನ ವಾಟ್ಸಪ್ ಗ್ರೂಪಿನಲ್ಲಿ ಕೋಮು ದ್ವೇಷಕ್ಕೆ ಸಂಬಂಧಿಸಿದಂತೆ ಸಂದೇಶ ಹಂಚಲಾಗಿದೆ ಎಂದು ದೂರಲಾಗಿದೆ. ಮುಂದಿನ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ “ರಾಷ್ಟ್ರ ರಕ್ಷಣಾ ಪಡೆ” ವಾಟ್ಸಾಪ್ ಗ್ರೂಪ್‌ನಲ್ಲಿ ಕರ್ನಾಟಕದಲ್ಲಿ ಕೋಮುಗಲಭೆ ಎಬ್ಬಿಸಲು ಪುನೀತ್ ಕೆರೆಹಳ್ಳಿ ಪ್ರಯತ್ನಿಸುತ್ತಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ.
“ಕರ್ನಾಟಕದಲ್ಲಿ ಕೋಮು ಗಲಭೆ ಎಬ್ಬಿಸೋಕೆ ಬಿಜೆಪಿ ನಮಗೆ ಬೆಂಬಲ ಕೊಟ್ಟಿದೆ, ಆದ್ದರಿಂದ ಎಲ್ಲ ಕಾರ್ಯಕರ್ತರು ತಯಾರಾಗಿ. ಎಲ್ಲಿ ಏನು ಮಾಡಬೇಕು ಎಂಬುದು ನಾವು ಈ ವಾಟ್ಸಾಪ್ ಗ್ರೂಪ್‌ನಲ್ಲಿ ಮಾಹಿತಿ ಕೊಡುತ್ತಿರುತ್ತೇವೆ” ಎಂದು ಉಲ್ಲೇಖಿಸಿರುವುದರಿಂದ ರಾಜ್ಯದಲ್ಲಿ ಕೋಮು ಗಲಭೆ ಸೃಷ್ಟಿಸಲು ಸಂಚು ರೂಪಿಸುತ್ತಿರುವುದು ಕಂಡುಬರುತ್ತಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ ಎಂದು ತಿಳಿದು ಬಂದಿದೆ.