ಮಾಜಿ ಸಚಿವ ನಾಗೇಂದ್ರ ವಾಲ್ಮೀಕಿ ನಿಗಮ ಹಗರಣದ ಸೂತ್ರದಾರಿ: ಈಡಿ
ಶಾಸಕ ಬಿ. ನಾಗೇಂದ್ರ
ಹೊಸದಿಲ್ಲಿ: ಕರ್ನಾಟಕ ಸರಕಾರದ ಸಂಸ್ಥೆಯಾದ ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಬಹುಕೋಟಿ ಹಗರಣದಲ್ಲಿ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಶಾಸಕ ಬಿ. ನಾಗೇಂದ್ರ ಸೂತ್ರದಾರಿ ಎಂದು ಹೇಳಿರುವ ಜಾರಿ ನಿರ್ದೇಶನಾಲಯ(ಈಡಿ)ವು, ಈ ಸಂಸ್ಥೆಯಿಂದ ನೂರಾರು ಕೋಟಿ ರೂಪಾಯಿಗಳನ್ನು ಈ ವರ್ಷದ ಆರಂಭದಲ್ಲಿ ನಡೆದಿದ್ದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಯೊಬ್ಬರ ಪರವಾಗಿ ವರ್ಗಾಯಿಸಲಾಗಿದೆ ಎಂದು ಆರೋಪಿಸಿದೆ.
ಈ ಪ್ರಕರಣದ ಸಂಬಂಧ ಈ ಹಿಂದೆಯೆ ಬೆಂಗಳೂರಿನ ಅಕ್ರಮ ಹಣ ವರ್ಗಾವಣೆ ತಡೆ ನ್ಯಾಯಾಲಯದೆದುರು ಪ್ರಾಸಿಕ್ಯೂಟ್ ದೂರು ಅಥವಾ ಆರೋಪ ಪಟ್ಟಿಯನ್ನು ಸಲ್ಲಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ(ಈಡಿ) ಹೇಳಿದೆ. ಈ ಆರೋಪ ಪಟ್ಟಿಯನ್ನು ನ್ಯಾಯಾಲಯವು ಗಮನಕ್ಕೆ ತೆಗೆದುಕೊಂಡಿದೆ ಎಂದೂ ಅದು ತಿಳಿಸಿದೆ.
ಶಾಸಕ ಹಾಗೂ ಪರಿಶಿಷ್ಟ ಪಂಗಡಗಳ ವ್ಯವಹಾರ ಇಲಾಖೆಯ ಮಾಜಿ ಸಚಿವ ಬಿ.ನಾಗೇಂದ್ರ ಅವರನ್ನು ಆರೋಪಿ ಎಂದು ಹೆಸರಿಸಲಾಗಿದೆ. ಸತ್ಯನಾರಾಯಣ ವರ್ಮ, ಎಟಕಾರಿ ಸತ್ಯನಾರಾಯಣ, ಜೆ.ಜಿ.ಪದ್ಮನಾಭ, ನಾಗೇಶ್ವರ್ ರಾವ್, ನೆಕ್ಕೆಂಟಿ ನಾಗರಾಜ್ ಹಾಗೂ ವಿಜಯ್ ಕುಮಾರ್ ಗೌಡ ಅವರ ನೆರವಿನೊಂದಿಗೆ ಈ ಹಗರಣವನ್ನು ಎಸಗಲಾಗಿದೆ” ಎಂದು ಪತ್ರಿಕಾ ಪ್ರಕಟಣೆಯಲ್ಲಿ ಜಾರಿ ನಿರ್ದೇಶನಾಲಯ(ಈಡಿ) ಹೇಳಿದೆ.
ಈ ಪ್ರಕರಣದ ಸಂಬಂಧ ಜಾರಿ ನಿರ್ದೇಶನಾಲಯ(ಈಡಿ)ವು ನಾಗೇಂದ್ರರನ್ನು ಈಗಾಗಲೇ ಬಂಧಿಸಿದೆ.
“ಬಿ.ನಾಗೇಂದ್ರರ ಪ್ರಭಾವದಿಂದ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ಖಾತೆಯನ್ನು ಯಾವುದೇ ಸೂಕ್ತ ಅನುಮೋದನೆ ಇಲ್ಲದೆ ಎಂ.ಜಿ.ರಸ್ತೆಯ ಶಾಖೆಗೆ ವರ್ಗಾಯಿಸಲಾಗಿತ್ತು. ಈ ಖಾತೆಗೆ ಗಂಗಾ ಕಲ್ಯಾಣ ಯೋಜನೆಯಡಿ ರಾಜ್ಯ ಸರಕಾರದ ಖಜಾನೆಯಿಂದ ಬಂದಿದ್ದ 43.33 ಕೋಟಿ ರೂಪಾಯಿ ಸೇರಿ ಒಟ್ಟು 187 ಕೋಟಿ ರೂಪಾಯಿಯನ್ನು ಯಾವುದೇ ಸೂಕ್ತ ನಿಯಮಗಳನ್ನು ಪಾಲಿಸದೆ ಹಾಗೂ ಸರಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಠೇವಣಿ ಇರಿಸಲಾಗಿತ್ತು” ಎಂಬುದು ತನಿಖೆಯಲ್ಲಿ ಪತ್ತೆಯಾಗಿದೆ” ಎಂದು ಜಾರಿ ನಿರ್ದೇಶನಾಲಯ(ಈಡಿ) ಹೇಳಿದೆ.
“ಇದರ ಬೆನ್ನಿಗೇ ಈ ಮೊತ್ತವನ್ನು ಹಲವಾರು ನಕಲಿ ಖಾತೆಗಳಿಗೆ ವರ್ಗಾಯಿಸಲಾಗಿತ್ತು ಹಾಗೂ ಅದನ್ನು ನಗದು ಹಾಗೂ ಚಿನ್ನದ ಗಟ್ಟಿಗಳನ್ನಾಗಿ ಪರಿವರ್ತಿಸಲಾಗಿತ್ತು” ಎಂದೂ ಆರೋಪಿಸಲಾಗಿದೆ.
ವರ್ಗಾವಣೆಗೊಂಡಿದ್ದ ಮೊತ್ತದ ಪೈಕಿ ರೂ. 20.19 ಕೋಟಿಯನ್ನು 2024ರ ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಭ್ಯರ್ಥಿಯನ್ನು ಬೆಂಬಲಿಸಲು ಬಳಸಿಕೊಳ್ಳಲಾಗಿತ್ತು. ಅಲ್ಲದೆ, ಬಿ.ನಾಗೇಂದ್ರ ಅವರ ಖಾಸಗಿ ವೆಚ್ಚಕ್ಕೂ ಬಳಸಿಕೊಳ್ಳಲಾಗಿತ್ತು” ಎಂದೂ ಜಾರಿ ನಿರ್ದೇಶನಾಲಯ(ಈಡಿ) ಆಪಾದಿಸಿದೆ.
ನಮ್ಮ ಶೋಧ ಕಾರ್ಯಾಚರಣೆಯ ಸಂದರ್ಭದಲ್ಲಿ ಈ ವೆಚ್ಚಗಳಿಗೆ ಸಾಕ್ಷ್ಯಾಧಾರಗಳೂ ದೊರೆತಿವೆ ಎಂದು ಜಾರಿ ನಿರ್ದೇಶನಾಲಯ(ಈಡಿ) ಪ್ರತಿಪಾದಿಸಿದೆ.
ಮೇ 21ರಂದು ಮಹರ್ಷಿ ವಾಲ್ಮೀಕಿ ನಿಗಮದ ಲೆಕ್ಕ ಪರಿಶೋಧನೆ ಅಧೀಕ್ಷಕ ಚಂದ್ರಶೇಖರ್ ಪಿ. ಅವರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ನಂತರ ಈ ಅಕ್ರಮಗಳು ಬೆಳಕಿಗೆ ಬಂದಿದ್ದವು. ಹಲವಾರು ಬ್ಯಾಂಕ್ ಖಾತೆಗಳಿಗೆ ಅಕ್ರಮವಾಗಿ ಹಣ ವರ್ಗಾವಣೆ ಮಾಡಲಾಗಿದೆ ಎಂದು ಅವರು ತಮ್ಮ ಡೆತ್ ನೋಟ್ ನಲ್ಲಿ ಬರೆದಿದ್ದರು.