ನೀಟ್, ಯುಜಿಸಿ ನೆಟ್ ಪರೀಕ್ಷೆಯ ಅಕ್ರಮ | ಪ್ರಧಾನಿ ‘ಪರೀಕ್ಷಾ ಪೆ ಚರ್ಚಾ’ಗೆ ಈಗೇಕೆ ತಯಾರಿಲ್ಲ? : ಕಾಂಗ್ರೆಸ್
Photo : PTI
ಬೆಂಗಳೂರು : ‘ನೀಟ್ ಪರೀಕ್ಷೆಯ ಅಕ್ರಮ, ಯುಜಿಸಿ ನೆಟ್ ಪರೀಕ್ಷೆಯ ಅಕ್ರಮ, ಯುವ ಸಮುದಾಯ ಹೈರಾಣಾಗಿದ್ದಾರೆ. ‘ಪರೀಕ್ಷಾ ಪೆ ಚರ್ಚಾ’ ಎಂದವರು ‘ಪರೀಕ್ಷಾ ಪೆ ಧೋಖಾ’ ಮಾಡಿದ್ದಾರೆ. ಪ್ರಧಾನಿಗಳು ಈಗೇಕೆ ‘ಪರೀಕ್ಷಾ ಪೆ ಚರ್ಚಾ’ ಮಾಡಲು ತಯಾರಿಲ್ಲ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಗುರುವಾರ ಎಕ್ಸ್ನಲ್ಲಿ ಪೋಸ್ಟ್ ಹಾಕಿರುವ ಕಾಂಗ್ರೆಸ್, ‘ಮೋದಿಯವರ ಮೂರನೆ ಅವಧಿಯ ಆಡಳಿತದಲ್ಲಿ 3 ಹಗರಣಗಳು ನಡೆದಿವೆ. ಅದೂ ಕೇವಲ 15 ದಿನಗಳ ಅವಧಿಯಲ್ಲಿ. ಷೇರು ಹಗರಣದಲ್ಲಿ ಕೋಟ್ಯಂತರ ಜನ ಕೋಟಿ ಕೋಟಿ ರೂ.ಹಣ ಕಳೆದುಕೊಂಡಿದ್ದಾರೆ, ಕೆಲವೇ ಕೆಲವು ಉದ್ಯಮಿಗಳು ಸಾವಿರಾರು ಕೋಟಿ ಸಂಪಾದಿಸಿದ್ದಾರೆ. ನೀಟ್ ಹಗರಣದಲ್ಲಿ 25 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಭವಿಷ್ಯ ಕಳೆದುಕೊಂಡಿದ್ದಾರೆ. ನೆಟ್ ಹಗರಣದಲ್ಲಿ 9ಲಕ್ಷಕ್ಕೂ ಅಧಿಕ ಯುವ ಸಮುದಾಯದ ಉದ್ಯೋಗದ ಕನಸು ಛಿದ್ರವಾಗಿದೆ. ಇಷ್ಟೆಲ್ಲಾ ಅಕ್ರಮಗಳು ನಡೆದರೂ ‘ಮೋದಿ ಮೌನ’ ಮುಂದುವರೆದಿದೆ’ ಎಂದು ಟೀಕಿಸಿದೆ.
‘ನೀಟ್ ಹಾಗೂ ನೆಟ್ ಪರೀಕ್ಷಾ ಅಕ್ರಮಗಳು ಯುವ ಸಮುದಾಯದ ಬೆನ್ನಿಗೆ ಚೂರಿ ಹಾಕಿವೆ. ದೇಶದ 35 ಲಕ್ಷಕ್ಕೂ ಅಧಿಕ ಭವಿಷ್ಯದ ಕನಸು ಹೊತ್ತಿದ್ದ ಯುವಕರ ಬದುಕಲ್ಲಿ ಕತ್ತಲೆ ಆವರಿಸಿದೆ. ನರೇಂದ್ರ ಮೋದಿ ಅವರೇ, ಯುವಜನತೆಗೆ ನಿಮ್ಮ ಉತ್ತರವೇನು? ಏಕೆ ಮೌನವಹಿಸಿದ್ದೀರಿ? ನಿಮ್ಮ ಸಚಿವರು ಅಕ್ರಮ ನಡೆದೇ ಇಲ್ಲ ಎಂದು ಹಗರಣ ಮುಚ್ಚಿ ಹಾಕಲು ಯತ್ನಿಸಿದ್ದೇಕೆ?’ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.