ಮಾಜಿ ಸಿಎಂ ಕುಮಾರಸ್ವಾಮಿ ತನಿಖೆಗೆ ಒಳಪಡಿಸಲು ಆಗ್ರಹಿಸಿ ಲೋಕಾಯುಕ್ತಕ್ಕೆ ಕಾಂಗ್ರೆಸ್ ದೂರು
ಬೆಂಗಳೂರು, ಜು.6: ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಭ್ರಷ್ಟಾಚಾರದ ನಡೆದಿದೆ ಎಂಬುದರ ಮಾಹಿತಿ ನನ್ನ ಬಳಿ ಇದೆ ಎಂದು ಹೇಳಿಕೆ ನೀಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ತನಿಖೆಗೆ ಒಳಪಡಿಸಬೇಕೆಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ಕುಮಾರಸ್ವಾಮಿ ಅವರು ವರ್ಗಾವಣೆ ಹೆಸರಿನಲ್ಲಿ ಗಂಭೀರ ಆರೋಪವನ್ನು ಮಾಡಿದ್ದು, ಒಬ್ಬ ಅಧಿಕಾರಿ ವರ್ಗಾವಣೆಗೆ 10 ಕೋಟಿ ರೂ. ಹಣ ನೀಡಿದ್ದಾನೆ. ಹಾಗೂ ಪ್ರತಿನಿತ್ಯ ಒಬ್ಬ ಅಧಿಕಾರಿ 50 ಲಕ್ಷ ರೂ. ಹಣ ಪಡೆಯುತ್ತಾನೆ ಎಂದು ಬಹಿರಂಗ ಹೇಳಿಕೆ ನೀಡಿದ್ದಾರೆ. ಆದ್ದರಿಂದ ಕುಮಾರಸ್ವಾಮಿ ಅವರನ್ನು ಕೂಡಲೇ ತನಿಖೆಗೆ ಒಳಪಡಿಸಬೇಕು. ಭ್ರಷ್ಟಾಚಾರ ನಡೆದಿದ್ದಲ್ಲಿ ಆ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಭ್ರಷ್ಟಾಚಾರದ ಮಾಹಿತಿ ಇದ್ದರೂ ತನಿಖಾ ಸಂಸ್ಥೆಗೆ ದೂರು ನೀಡದಿರುವುದೇ ಮಹಾ ಅಪರಾಧ. ಈ ಹಿನ್ನೆಲೆ ಕೂಡಲೇ ಎಚ್.ಡಿ.ಕುಮಾರಸ್ವಾಮಿ ಅವರನ್ನು ತನಿಖೆಗೆ ಒಳಪಡಿಸಿ ಭ್ರಷ್ಟಾಚಾರದ ಬಗ್ಗೆ ಮಾಹಿತಿ ಇದ್ದರೆ ಅವರಿಂದ ದಾಖಲೆಗಳನ್ನು ಪಡೆದುಕೊಂಡು ಯಾರೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಲೋಕಾಯುಕ್ತರಿಗೆ ದೂರಿನಲ್ಲಿ ತಿಳಿಸಿದ್ದಾರೆ.