ಎಚ್‌ಡಿಕೆ, ದೇವರಾಜೇಗೌಡ ವಿರುದ್ಧ ಎಸ್‍ಐಟಿಗೆ ಕಾಂಗ್ರೆಸ್ ದೂರು
ಬೆಂಗಳೂರು : ಪ್ರಜ್ವಲ್ ರೇವಣ್ಣ ಹಾಗೂ ಎಚ್.ಡಿ.ರೇವಣ್ಣ ಅವರ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯಾಗಿರುವ ವಿಡಿಯೋ ಚಿತ್ರಗಳು ನನ್ನ ಬಳಿ ಇದೆ ಎಂದು ಒಪ್ಪಿಕೊಂಡಿರುವ ಬಿಜೆಪಿ ಮುಖಂಡ ದೇವರಾಜೇಗೌಡ ಹಾಗೂ ತನಿಖೆ ದಾರಿ ತಪ್ಪಿಸುವ ಹೇಳಿಕೆ ನೀಡುತ್ತಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ವಿಶೇಷ ತನಿಖಾ ತಂಡದ ಮುಖಸ್ಥರಿಗೆ ದೂರು ಕಾಂಗ್ರೆಸ್ ದೂರು ನೀಡಿದೆ.
ಗುರುವಾರ ಈ ಬಗ್ಗೆ ಬೆಂಗಳೂರು ಕೇಂದ್ರ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಜಿ.ಪ್ರಕಾಶ್ ಸಲ್ಲಿಸಿದ್ದು, ಕುಮಾರಸ್ವಾಮಿಯವರ ಇಲ್ಲಸಲ್ಲದ ಹೇಳಿಕೆಯಿಂದ ಸಂತ್ರಸ್ತ ಮಹಿಳೆಯರು ತನಿಖಾ ತಂಡದ ಮುಂದೆ ಬಂದು ದೂರು ನೀಡಲು ಹಾಗೂ ನಿರ್ಭಿತಿಯಿಂದ ಮಾಹಿತಿ ನೀಡಲು ಭಯಪಡುತ್ತಿದ್ದಾರೆ. ಕುಮಾರಸ್ವಾಮಿಯವರಿಗೆ ಸಂತ್ರಸ್ತರಿರುವ ಸ್ಥಳ ಹಾಗೂ ಈ ವಿಡಿಯೋ ಚಿತ್ರೀಕರಣ ಪ್ರಕರಣದಲ್ಲಿ ಪ್ರಜ್ವಲ್‍ರೇವಣ್ಣನ ಕಾರು ಚಾಲಕ ಕಾರ್ತಿಕ್ ಇರುವ ಮಾಹಿತಿಯನ್ನು ಅವರೇ ಬಹಿರಂಗ ಪಡಿಸಿದ್ದಾರೆ. ಆಗಾದರೆ ಪ್ರಕರಣ ರೂವಾರಿ ಹಾಗೂ ಪ್ರಮುಖ ಆರೋಪಿ ಪ್ರಜ್ವಲ್ ತಲೆಮರೆಸಿಕೊಂಡಿರುವ ಬಗ್ಗೆ ಕುಮಾರಸ್ವಾಮಿ ಅವರ ಬಳಿ ಮಾಹಿತಿ ಇರಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ದೇವರಾಜೇಗೌಡ ಮಾಧ್ಯಮಗಳಿಗೆ ನೀಡಿರುವ ಸಂದರ್ಶನದಲ್ಲಿ ಹಾಗೂ ಬಿಜೆಪಿ ವರಿಷ್ಠರಿಗೆ ಬರದಿರುವ ಪತ್ರದಲ್ಲಿ ಅಶ್ಲೀಲ ವಿಡಿಯೋ ಚಿತ್ರಗಳು ನನ್ನ ಬಳಿ ಇದೆ ಎಂದು ಒಪ್ಪಿಕೊಂಡಿರುತ್ತಾರೆ. ಆದರೆ, ಕಾನೂನು ಬಗ್ಗೆ ಅರಿವಿರುವ ಹಾಗೂ ವೃತ್ತಿಯಲ್ಲಿ ವಕೀಲರಾಗಿರುವ ಅವರಿಗೆ ಎಲ್ಲ ಮಾಹಿತಿ ತಿಳಿದಿದ್ದರೂ ಏಕೆ ಸಂಬಂಧಪಟ್ಟ ಪೊಲೀಸರು ಅಥವಾ ತನಿಖಾ ಸಂಸ್ಥೆಗೆ ಅಥವಾ ಮಹಿಳಾ ಆಯೋಗಕ್ಕೆ ದೂರನ್ನು ನೀಡಿಲ್ಲ ಎಂದು ದೂರಿನಲ್ಲಿ ಪ್ರಶ್ನಿಸಿದ್ದಾರೆ.
ದೇವರಾಜೇಗೌಡ ಹಾಗೂ ಕುಮಾರಸ್ವಾಮಿ ಅವರು ಮಾಧ್ಯಮಗಳಿಗೆ ನೀಡಿರುವ ಹೇಳಿಕೆ ಮಾಹಿತಿಯನ್ನು ಆಧರಿಸಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.