ಕಾಂಗ್ರೆಸ್ ಸೇರಲ್ಲ; ಬೇಕಿದ್ದರೆ ರಕ್ತದಲ್ಲಿ ಬರೆದು ಕೊಡುತ್ತೇನೆ ಎಂದ ಬಿಜೆಪಿ ಸಂಸದ
ಕೊಪ್ಪಳ: ಆ. 21: ರಾಜ್ಯದಲ್ಲಿ ‘ಆಪರೇಷನ್ ಹಸ್ತ’ದ ಚರ್ಚೆಯ ಬೆನ್ನಲ್ಲೇ ಕೆಲವೊಂದು ರಾಜಕೀಯ ಬೆಳವಣಿಗೆಗಳು ನಡೆಯುತ್ತಿದ್ದು, ಇಂದು ಮಾಜಿ ಸಚಿವ ಹಾಗೂ ಬಿಜೆಪಿಯ ಹಿರಿಯ ನಾಯಕ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ. ನಿನ್ನೆಯಷ್ಟೇ (ರವಿವಾರ) ಬಿಜೆಪಿ ತೊರೆದು ಜೆಡಿಎಸ್ ಸೇರಿದ್ದ ಮಾಜಿ ಎಂಎಲ್ಸಿ ಆಯನೂರು ಮಂಜುನಾಥ್ ಕೆಪಿಸಿಸಿ ಅಧ್ಯಕ್ಷರನ್ನು ಭೇಟಿಯಾಗಿ ಕಾಂಗ್ರೆಸ್ ಸೇರುವುದಾಗಿ ಘೋಷಣೆ ಮಾಡಿದ್ದರು.
ಈ ಕುರಿತಾಗಿ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕೊಪ್ಪಳ ಸಂಸದ ಸಂಗಣ್ಣ ಕರಡಿ , ʼʼನಾನು ಬಿಜೆಪಿಯಲ್ಲೇ ಇರುತ್ತೇನೆ, ಕಾಂಗ್ರೆಸ್ ಸೇರಲ್ಲʼʼ ಎಂದು ಸ್ಪಷ್ಪಪಡಿಸಿದ್ದಾರೆ.
ʼʼನಾನು ಲೋಕಸಭೆ ಚುಣಾವಣೆಯಲ್ಲಿ ಮತ್ತೆ ಸ್ಪರ್ಧಿಸುತ್ತೇನೆ. ನೀವು ಮತ್ತೆ ಮತ್ತೆ ಕೇಳಿದರೆ ರಕ್ತದಲ್ಲಿ ಬರೆದು ಕೊಡುತ್ತೇನೆ ಕಾಂಗ್ರೆಸ್ ಸೇರಲ್ಲ. ಲೋಕಸಭಾ ಚುನಾವಣೆಗೆ ಟಿಕೆಟ್ ನೀಡುತ್ತೆ ಎಂಬ ವಿಶ್ವಾಸ ಇದೆ. ಟಿಕೆಟ್ ನೀಡದಿದ್ದರೂ ಪಕ್ಷದ ಪರವಾಗಿ ಕೆಲಸ ಮಾಡ್ತೇನೆ. ಕುಷ್ಟಗಿ ಕ್ಷೇತ್ರದ ಶಾಸಕ ದೊಡ್ಡನಗೌಡ ಬಿಜೆಪಿ ಬಿಡುವುದಿಲ್ಲʼʼ ಎಂದು ಸ್ಪಷ್ಪಪಡಿಸಿದ್ದಾರೆ.