ಕಾಂಗ್ರೆಸ್ ಚರಿತ್ರೆಯ ಕೊನೇ ಪುಟದಲ್ಲಿ ಏದುಸಿರು ಬಿಡುತ್ತಿದೆ: ಜೆಡಿಎಸ್ ವ್ಯಂಗ್ಯ
ಬೆಂಗಳೂರು, ಜ.7: ದೇಶವನ್ನು ಜಾತಿ, ಧರ್ಮದಿಂದಲೇ ವಿಭಜಿಸಿ ಪ್ರಜಾಪ್ರಭುತ್ವವನ್ನೇ ಅಂತ್ಯ ಕಾಣಿಸಲು ಹೊರಟಿದ್ದ ಕಾಂಗ್ರೆಸ್, ಚರಿತ್ರೆಯ ಕೊನೇ ಪುಟದಲ್ಲಿ ಏದುಸಿರು ಬಿಡುತ್ತಿದೆ ಎಂದು ಜೆಡಿಎಸ್ ವ್ಯಂಗ್ಯವಾಡಿದೆ.
ಈ ಬಗ್ಗೆ 'X'ನಲ್ಲಿ ಸರಣಿ ಪೋಸ್ಟ್ ಗಳನ್ನು ಮಾಡಿರುವ ಜೆಡಿಎಸ್ ಸಿದ್ದರಾಮಯ್ಯರ ವಿರುದ್ಧ ವಾಗ್ದಾಳಿ ನಡೆಸಿದೆ.
ಸಿದ್ದರಾಮಯ್ಯ, ಡಿಕೆಶಿ ನೇತೃತ್ವದಲ್ಲಿ ಇಲ್ಲಿ ಕಾಂಗ್ರೆಸ್ ಅಂತ್ಯ ಕಾಣುತ್ತದೆ. ಈ ಬಗ್ಗೆ ಮಾಜಿ ಪ್ರಧಾನಿಗಳು ಹೇಳಿದ್ದರಲ್ಲಿ ಲವಲೇಶವೂ ಉತ್ಪ್ರೇಕ್ಷೆ ಇಲ್ಲ ಎಂದು ಜೆಡಿಎಸ್ ಪ್ರತಿಪಾದಿಸಿದೆ.
ಶಾಪ ಹಾಕುವುದನ್ನು ಗೌಡರೆಂದೂ ಮಾಡಿಲ್ಲ, ಮಾಡುವುದೂ ಇಲ್ಲ. ಅವರ ಹಸ್ತ ಅಭಯಹಸ್ತ. ಅದು ಆಶೀರ್ವಾದ. ಗುರುಸ್ವಾಮಿ ಎಂಬ ಅನಾಮಧೇಯ ವ್ಯಕ್ತಿ ಎದುರು ಸೋತ ನಿಮ್ಮನ್ನು ಅವರು ಅನುಗ್ರಹಿಸಿದ್ದನ್ನು ಮರೆತಿರಾ? ಅಂದು ಆ ಕೈ ನಿಮ್ಮ ಕೈ ಹಿಡಿಯದಿದ್ದರೆ ನೀವಿಷ್ಟು ಎತ್ತರಕ್ಕೇರಲು ಸಾಧ್ಯವಿತ್ತೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಪ್ರಶ್ನಿಸಿದೆ.
ಸಿಎಂ ಸಚಿವಾಲಯದ ಕೊಳಕು ಕೊಡವಿದರೆ ಸಿದ್ದರಾಮಯ್ಯರ ಢೋಂಗಿ ಜಾತ್ಯತೀತತೆಯ ಅಸಲಿ ಮುಖ ಕಳಚಿ ಬೀಳುತ್ತದೆ. ಅಭಿಪ್ರಾಯ, ಭಿನ್ನಾಭಿಪ್ರಾಯ, ಪ್ರಾಮಾಣಿಕತೆ, ಜಾತ್ಯತೀತತೆ... ಈ ಪದಗಳೆಲ್ಲ ನಿಮಗೆ ಆಗಿ ಬರಲ್ಲ. ನಿಮ್ಮದೇನಿದ್ದರೂ ಏಕಾಭಿಪ್ರಾಯ. ಸರ್ವಾಧಿಕಾರ ಧೋರಣೆ, ತುಘಲಕ್ ಮನಃಸ್ಥಿತಿ ಎಂದು ಜೆಡಿಎಸ್ ಟೀಕಿಸಿದೆ.
ಎಚ್.ಡಿ.ದೇವೇಗೌಡರು ಸಾಮಾಜಿಕ ನ್ಯಾಯ, ಜಾತ್ಯತೀತತೆ, ನಂಬಿಕೆ, ವಿಶ್ವಾಸಾರ್ಹತೆ ಉಳ್ಳವರು ಆಗಿಲ್ಲದಿದ್ದಿದ್ದರೆ ನೀವು ಈವರೆಗೆ ಏನೇನೋ ಆಗಿದ್ದಿರಲ್ಲಾ... ಅದರಲ್ಲಿ ಏನೊಂದೂ ಆಗುತ್ತಿರಲಿಲ್ಲ. ನಿಮಗೆ ಏಣಿಯಾಗಿ, ಹೆಗಲಾಗಿದ್ದ ಅವರ ಬೆನ್ನಿಗಿರಿದ 'ಅಪರ ಬ್ರೂಟಸ್' ನೀವು. ಬೂಟಾಟಿಕೆ ಮಾಡಿಕೊಂಡೇ ರಾಜಕೀಯ ಬದುಕು ಕಟ್ಟಿಕೊಂಡವರು ನೀವು ಎಂದು ಹೇಳಿದೆ.
ಯಾರು, ಯಾರ ಸಂಗ ಮಾಡಿದ್ದರು? ಯಾವ ಗಾಳಿ ಯಾರಿಗೆ ಸೋಕಿತ್ತು? ನಿಮ್ಮ ಇಂಥ ಕಾಗಕ್ಕ, ಗೂಬ್ಬಕ್ಕ ಕಥೆಗಳ ಮೂಲಕ್ಕೆ ಹೋದರೆ ನೀವೇ ಬೆತ್ತಲೆ ಸ್ಥಿತಿಯಲ್ಲಿ ನಿಲ್ಲಬೇಕಾಗುತ್ತದೆ. ಅಂತಹ ಸ್ಥಿತಿ ತಂದುಕೊಳ್ಳಬೇಡಿ. ನಿಮ್ಮ ರಾಜಕೀಯ ಅಂತ್ಯಕಾಲ ಆನಂದವಾಗಿರಲಿ, ಅದಕ್ಕೆ ಕಳಂಕ ಮೆತ್ತಿಕೊಳ್ಳಬೇಡಿ ಎಂದು ಹೇಳಿದೆ.