ʼಜಾತಿ ಗಣತಿʼ ಮೂಲಕ ಎಲ್ಲಾ ವರ್ಗದವರ ರಕ್ಷಣೆಗೆ ಕಾಂಗ್ರೆಸ್ ಸರಕಾರ ಬದ್ಧವಾಗಿದೆ: ಡಿಸಿಎಂ ಡಿ.ಕೆ. ಶಿವಕುಮಾರ್
Photo: X/@DKShivakumar
ಚಿತ್ರದುರ್ಗ: "ಎಲ್ಲಾ ಶೋಷಿತ ವರ್ಗದವರಿಗೆ ನ್ಯಾಯ ಒದಗಿಸಿಕೊಡಲು, ಜನಸಂಖ್ಯೆ ಆಧಾರದ ಮೇಲೆ ಅವರಿಗೆ ಶಕ್ತಿ ತುಂಬಲು ರಾಹುಲ್ ಗಾಂಧಿ ಅವರು ದೇಶದಲ್ಲಿ ಜಾತಿ ಗಣತಿಗೆ ಕರೆ ನೀಡಿದ್ದಾರೆ. ರಾಜ್ಯದಲ್ಲಿ ಇದನ್ನು ಮಾಡಲು ಕಾಂಗ್ರೆಸ್ ಸರಕಾರ ಬದ್ಧವಾಗಿದೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಚಿತ್ರದುರ್ಗದಲ್ಲಿ ಭಾನುವಾರ ನಡೆದ ಶೋಷಿತರ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, "ರಾಹುಲ್ ಗಾಂಧಿ ಅವರು ಎಲ್ಲಾ ವರ್ಗದ ಜನರಿಗೆ ನ್ಯಾಯ ಒದಗಿಸಲು ಹೋರಾಡುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಎಲ್ಲರಿಗೂ ಸಮಾನತೆ ಕಲ್ಪಿಸಲಾಗುವುದು. ಶೋಷಿತರಿಗೆ ಶಕ್ತಿ ನೀಡಬೇಕು ಎಂಬುದು ಕಾಂಗ್ರೆಸ್ ಸಂಕಲ್ಪ. ಯಾರೂ ಗಾಬರಿಯಾಗಬಾರದು. ಕಾಂಗ್ರೆಸ್ ಸರಕಾರ ನಿಮ್ಮ ಬದುಕಿನ ರಕ್ಷಣೆಗೆ ಬದ್ಧವಾಗಿದೆ ಎಂದರು.
ʼಮಹಿಳೆಯರು ಶಕ್ತಿ ಯೋಜನೆಯಲ್ಲಿ ಉಚಿತವಾಗಿ ಬಸ್ ಪ್ರಯಾಣ ಮಾಡುತ್ತಿದ್ದಾರೆ, ಗೃಹಜ್ಯೋತಿ ಯೋಜನೆಯಲ್ಲಿ 200 ಯೂನಿಟ್ ವರೆಗೂ ವಿದ್ಯುತ್ ಉಚಿತವಾಗಿ ಸಿಗುತ್ತಿದೆ. ಗೃಹಲಕ್ಷ್ಮಿ ಯೋಜನೆಯಲ್ಲಿ ಮನೆಯೊಡತಿಗೆ ಪ್ರತಿ ತಿಂಗಳು 2 ಸಾವಿರ ಬರುತ್ತಿದೆ. ಇದೇ ಕಾಂಗ್ರೆಸ್ ಶಕ್ತಿ ಎಂದು ಹೇಳಿದರು.
ಇದೊಂದು ಐತಿಹಾಸಿಕ ಸಮಾವೇಶ. ರಾಜ್ಯದಲ್ಲಿ ಬದಲಾವಣೆ ಪರ್ವ ತರಲು ಈ ಶೋಷಿತರ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಮರಕ್ಕೆ ಬೇರು ಎಷ್ಟು ಮುಖ್ಯವೋ ಹಾಗೆಯೇ ಮನುಷ್ಯರಿಗೆ ನಂಬಿಕೆ ಮುಖ್ಯ:
ದೇವರು ವರವನ್ನೂ ನೀಡುವುದಿಲ್ಲ. ಶಾಪವನ್ನೂ ನೀಡುವುದಿಲ್ಲ. ಕೇವಲ ಅವಕಾಶ ನೀಡುತ್ತಾನೆ. ನಾವು ನಮ್ಮ ಬದುಕಿನಲ್ಲಿ ಸಿಗುವ ಅವಕಾಶವನ್ನು ಬಹಳ ಜಾಗೃತವಾಗಿ ಬಳಸಿಕೊಳ್ಳಬೇಕು. ಯಶಸ್ಸು ಯಾರ ಆಸ್ತಿಯೂ ಅಲ್ಲ. ಯಾವುದೇ ರಾಜ ಸದಾ ರಾಜನಾಗಿರಲು ಸಾಧ್ಯವಿಲ್ಲ. ಶ್ರೀಮಂತ ಸದಾ ಶ್ರೀಮಂತನಾಗಿರಲು ಸಾಧ್ಯವಿಲ್ಲ. ಎಲ್ಲರಿಗೂ ರಾಜನಾಗುವ ಹಾಗೂ ಶ್ರೀಮಂತನಾಗುವ ಅವಕಾಶವನ್ನು ಪ್ರಜಾಪ್ರಭುತ್ವ ವ್ಯವಸ್ಥೆ ಕಲ್ಪಿಸಿದೆ. ಇದೇ ಪ್ರಜಾಪ್ರಭುತ್ವದ ಶಕ್ತಿ ಎಂದರು.
ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನ, ಭಗವದ್ಗೀತೆ, ಖುರಾನ್, ಬೈಬಲ್ ನಂತೆ ಪವಿತ್ರವಾದ ಗ್ರಂಥ. ಅವು ಧಾರ್ಮಿಕ ಗ್ರಂಥವಾದರೆ, ಸಂವಿಧಾನ ನಮ್ಮ ಬದುಕಿಗೆ ರಕ್ಷಣೆ ಹಾಗೂ ಆಶ್ರಯ ನೀಡುವ ಗ್ರಂಥ. ಹಸಿದವನ ಹೊಟ್ಟೆಗೆ ಅನ್ನ ನೀಡಬೇಕು. ಕಷ್ಟದಲ್ಲಿರುವವರ ಜೊತೆಯಾಗಿ ನಿಲ್ಲಬೇಕು, ನಿಮ್ಮ ಹೋರಾಟ ಮುಂದುವರಿಸಲು ನಾವು ಇಲ್ಲಿದ್ದೇವೆ. ಯಶಸ್ಸು ಯಾರ ವೈಯಕ್ತಿಕ ಸ್ವತ್ತು ಅಲ್ಲ. ನಿಮ್ಮ ಪರಿಶ್ರಮ, ಧೈರ್ಯ ಇದ್ದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಮನುಷ್ಯನ ಜೀವನದಲ್ಲಿ ಹೋರಾಟ ಮಾಡಿದಾಗ ಮಾತ್ರ ಪ್ರಗತಿ ಸಾಧ್ಯ. ನಂಬಿಕೆ ಹೋದರೆ ಅದು ಮತ್ತೆ ಸಿಗುವುದು ಕಷ್ಟ ಎಂದು ನುಡಿದರು.