ಹಗರಣಗಳಿಂದಾಗಿ ಕೋಮಾಗೆ ಹೋದ ಕಾಂಗ್ರೆಸ್ ಸರಕಾರ : ಆರ್.ಅಶೋಕ್
ಬೆಂಗಳೂರು : ಕಾಂಗ್ರೆಸ್ ಸರಕಾರ ಹಗರಣಗಳಿಂದಾಗಿ ಕೋಮಾ ಸ್ಥಿತಿಗೆ ಹೋಗಿದ್ದು, ಅಭಿವೃದ್ಧಿ ಕಾರ್ಯಗಳೇ ನಡೆಯುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದರೆ, ಅಭಿವೃದ್ಧಿ ಕಾರ್ಯಗಳಿಗೆ ಇಷ್ಟು ತೊಡಕಾಗುತ್ತಿರಲಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿದರು.
ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹ ಉಂಟಾಗಿದ್ದು, ಅದಕ್ಕೆ ಪ್ರತ್ಯೇಕ ಪರಿಹಾರ ನೀಡಲು ಸರಕಾರ ಮುಂದಾಗಿಲ್ಲ. ಮಳೆಯಿಂದಾಗಿ ಎಲ್ಲ ಕಡೆ ರಸ್ತೆಗಳು ಹದಗೆಟ್ಟಿವೆ. ಬೆಂಗಳೂರಿನಲ್ಲಿ ಕಮಿಶನ್ ಆಸೆಗಾಗಿ ಗುತ್ತಿಗೆದಾರರಿಗೆ ಕೊಡಬೇಕಿರುವ 1,500 ಕೋಟಿ ರೂ. ತಡೆಹಿಡಿದಿದ್ದು, ಗುತ್ತಿಗೆದಾರರು ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಹೇಳಿದರು.
ರಸ್ತೆಗಳಲ್ಲಿ ಗುಂಡಿ ಬಿದ್ದಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ. ಎಲ್ಲೆಡೆ ಕಸದ ರಾಶಿ ಬಿದ್ದಿದೆ. ಇದು ಕಾಸಿಲ್ಲದ ಬ್ರ್ಯಾಂಡ್ ಬೆಂಗಳೂರಾಗಿದೆ. ಕೆಪಿಎಸ್‍ಸಿಯಲ್ಲಿ ಕನ್ನಡ ಭಾಷಾಂತರ ಮಾಡಲು ಯೋಗ್ಯತೆ ಇಲ್ಲ. ಮುಡಾ, ವಾಲ್ಮೀಕಿ ನಿಗಮದ ಹಗರಣದ ಒತ್ತಡದಿಂದಾಗಿ ಕೆಪಿಎಸ್‍ಸಿಯಲ್ಲಿ ಪರೀಕ್ಷೆ ನಡೆಸಲು ಸಾಧ್ಯವಾಗಿಲ್ಲ ಎಂದು ಅವರು ಕಿಡಿಗಾರಿದರು.
ಕಾರ್ಕಳದಲ್ಲಿ ಹಿಂದೂ ಯುವತಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಪ್ರಕರಣದ ಹಿಂದಿರುವ ಮಾದಕ ದ್ರವ್ಯ ಜಾಲದ ಬಗ್ಗೆ ಕಾರ್ಕಳ ನಗರ ಪೊಲೀಸರು ನಡೆಸಿದ ತನಿಖೆಯಲ್ಲಿ ಹಲವು ಮಹತ್ವದ ವಿಚಾರಗಳು ಬಹಿರಂಗಗೊಂಡಿವೆ. ಇದರ ಹಿಂದೆ ದೊಡ್ಡ ಡ್ರಗ್ಸ್ ಜಾಲವೇ ಇದೆ. ಈ ಸರಕಾರ ಡ್ರಗ್ಸ್ ದಂಧೇಕೋರರಿಗೆ ಅನುಮತಿ ನೀಡಿದೆ. ಇದರಿಂದಾಗಿ ಯುವತಿ ಮೇಲೆ ಅತ್ಯಾಚಾರವಾಗಿದೆ ಎಂದು ಅಶೋಕ್ ಆರೋಪಿಸಿದರು.
ರೀಲ್ಸ್ ಗೆ ಹಣ ಖರ್ಚು: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅಂಗನವಾಡಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಪಡಿಸಿಲ್ಲ. ಆದರೆ ರೀಲ್ಸ್ ಮಾಡಲು 60-70 ಕೋಟಿ ರೂ. ನೀಡುತ್ತಿದ್ದಾರೆ. ಅದೇ ಹಣದಲ್ಲಿ ಶಾಲೆಗಳ ದುರಸ್ತಿ ಮಾಡಬಹುದಿತ್ತು ಎಂದು ಅಶೋಕ್ ಹೇಳಿದರು.
ಛಲವಾದಿ ನಾರಾಯಣಸ್ವಾಮಿ ಮಾಡಿರುವ ಆರೋಪಕ್ಕೆ ಸರಕಾರ ಉತ್ತರ ನೀಡುವುದನ್ನು ಬಿಟ್ಟು, ಪ್ರತಿಭಟನೆ ಮಾಡುತ್ತಿದೆ. ಕೋವಿಡ್ ವಿಚಾರದಲ್ಲೂ ತನಿಖಾ ಆಯೋಗದಿಂದ ಅರ್ಧದಲ್ಲೇ ವರದಿ ಪಡೆದು ದ್ವೇಷ ರಾಜಕಾರಣ ಮಾಡಲಾಗಿದೆ ಎಂದು ಅವರು ಆರೋಪಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮುಡಾದ 14 ನಿವೇಶನಗಳು ಏಕೆ ಬೇಕಿತ್ತು ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಬಿಜೆಪಿ ಇದನ್ನು ವಿರೋಧಿಸಿದರೆ ಹಿಂದುಳಿದ ನಾಯಕನನ್ನು ಗುರಿ ಮಾಡಲಾಗಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ರಾಜ್ಯಪಾಲರು ತನಿಖೆಗೆ ಅನುಮತಿ ಕೊಟ್ಟಿದ್ದಕ್ಕೆ ನಿಂದಿಸಲಾಗುತ್ತಿದೆ. ತಪ್ಪೇ ಮಾಡಿಲ್ಲವೆಂದರೆ ಆಯೋಗವನ್ನು ಏಕೆ ನೇಮಕ ಮಾಡಿದ್ದಾರೆ? ತಪ್ಪಿತಸ್ಥರಾದ ಮುಖ್ಯಮಂತ್ರಿಯೆ ಆಯೋಗ ನೇಮಕ ಮಾಡಲು ಕಾನೂನಿನಲ್ಲಿ ಅವಕಾಶವಿದೆಯೇ? ಎಂದು ಅಶೋಕ್ ಪ್ರಶ್ನಿಸಿದರು.
ಅಪನಂಬಿಕೆಯ ಸರಕಾರ: ಅಪನಂಬಿಕೆ ಸರಕಾರದಿಂದ ನಂಬಿಕೆ ಯೋಜನೆ ಜಾರಿಯಾಗಿದೆ. ಬೆಂಗಳೂರಿನಲ್ಲಿ ಕಟ್ಟಡ ನಕ್ಷೆ ಮಂಜೂರಾತಿಗೆ ‘ನಂಬಿಕೆ ನಕ್ಷೆ’ ಯೋಜನೆ ಜಾರಿಗೆ ತರಲಾಗುತ್ತಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿರುವುದು ಬ್ರ್ಯಾಂಡ್ ಬೆಂಗಳೂರು ನಾಟಕದ ಮತ್ತೊಂದು ಅಧ್ಯಾಯವಷ್ಟೇ ಎಂದು ಅವರು ಟೀಕಿಸಿದರು.
ಬೆಂಗಳೂರಿನ ಜನತೆಗೆ ಮೇಕೆದಾಟು ನೀರು ಸಿಗುವ ನಂಬಿಕೆ ಇಲ್ಲ, ರಸ್ತೆ ಗುಂಡಿ ಮುಚ್ಚುವ ಬಗ್ಗೆ ನಂಬಿಕೆ ಇಲ್ಲ, ಮನೆ ಬಾಗಿಲಿಗೆ ಆಡಳಿತ ಘೋಷಣೆ ಬಗ್ಗೆ ನಂಬಿಕೆ ಇಲ್ಲ, ಕಾನೂನು ಸುವ್ಯವಸ್ಥೆ ಬಗ್ಗೆ ನಂಬಿಕೆ ಇಲ್ಲ, ಭ್ರಷ್ಟಾಚಾರ ಮುಕ್ತ ಆಡಳಿತದ ಬಗ್ಗೆಯಂತೂ ಎಳ್ಳಷ್ಟೂ ನಂಬಿಕೆ ಇಲ್ಲ. ಈ ಅಪನಂಬಿಕೆ ಸರಕಾರದಿಂದ ನಂಬಿಕೆ ಹೆಸರಿನಲ್ಲಿ ಯೋಜನೆ ಘೋಷಣೆ ಆಗಿರುವುದು ಈ ಶತಮಾನದ ಅತ್ಯಂತ ದೊಡ್ಡ ವಿರೋಧಾಭಾಸ ಎಂದು ಅಶೋಕ್ ಟೀಕೆ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಶಾಸಕ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಉಪಸ್ಥಿತರಿದ್ದರು.