ಕಾಂಗ್ರೆಸ್ನವರು ದಲಿತರನ್ನು ಉದ್ಧಾರ ಮಾಡಲಿಲ್ಲ: ಆರ್. ಅಶೋಕ್

ಆರ್. ಅಶೋಕ್
ಬೆಂಗಳೂರು: ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಕಾಂಗ್ರೆಸ್ನವರು ದಲಿತರನ್ನು ತುಳಿದುಕೊಂಡೇ ಬಂದಿದ್ದಾರೆಯೇ ಹೊರತು, ಉದ್ಧಾರ ಮಾಡಲಿಲ್ಲ ಎಂದು ವಿಪಕ್ಷ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದರು.
ಶುಕ್ರವಾರ ವಿಧಾನಸೌಧದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ ʼಭೀಮ ಹೆಜ್ಜೆ 100ರ ಸಂಭ್ರಮ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದಲಿತರ ಬಗ್ಗೆ ಮಾತಾಡುವಾಗಲೆಲ್ಲಾ, ಅವರು ತುಳಿತಕ್ಕೆ ಒಳಗಾದವರು ಎಂದು ಹೇಳುತ್ತೇವೆ. ಆದರೆ, ಈ ರೀತಿ ತುಳಿದವರು ಯಾರು ಎಂದು ಪ್ರಶ್ನೆ ಮಾಡಿದರೆ, ಕಾಂಗ್ರೆಸ್ನವರೇ ಎಂಬ ಉತ್ತರ ಸಿಗುತ್ತದೆ ಎಂದು ದೂರಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರ ಹೆಸರನ್ನು ಕಾಂಗ್ರೆಸ್ನವರು ದುರುಪಯೋಗ ಮಾಡಿಕೊಂಡರು. ನರೇಂದ್ರ ಮೋದಿ ಪ್ರಧಾನಿಯಾದ ಬಳಿ ಅಂಬೇಡ್ಕರರ ಜೀವನದ ಪ್ರಮುಖ ಸ್ಥಳಗಳನ್ನು ಪಂಚತೀರ್ಥವೆಂದು ಯಾತ್ರಾ ಸ್ಥಳವಾಗಿಸಿದರು. ಕಾಂಗ್ರೆಸ್ ನಾಯಕರು ತಾವು ದಲಿತರ ಪರ ಎಂದು ಹೇಳುತ್ತಾರೆ. ಆದರೆ, ದಲಿತರಿಗೆ ಮೋಸ ಮಾಡುತ್ತಾರೆ ಎಂದು ಆರ್.ಅಶೋಕ್ ಆರೋಪಿಸಿದರು.
ವಕ್ಫ್ ಮಂಡಳಿ ಲಕ್ಷಾಂತರ ದಲಿತರ ಆಸ್ತಿಗಳನ್ನು ಲೂಟಿ ಮಾಡಿದೆ. ವಕ್ಫ್ ನಿಂದಾಗಿ ಭೂ ಕಬಳಿಕೆ ಬಗ್ಗೆ ನಾನು ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾಗ, ದೂರು ಹೇಳಿಕೊಳ್ಳಲು ಬರುತ್ತಿದ್ದವರಲ್ಲಿ ದಲಿತರೇ ಹೆಚ್ಚಿನ ಸಂಖ್ಯೆಯಲ್ಲಿರುತ್ತಿದ್ದರು ಎಂದು ಆರ್. ಅಶೋಕ್ ತಿಳಿಸಿದರು.
ಸಂಸತ್ತಿನಲ್ಲಿ ವಕ್ಫ್ ತಿದ್ದುಪಡಿ ಮಸೂದೆಗೆ ವಿರುದ್ಧವಾಗಿ ಕಾಂಗ್ರೆಸ್ ನಿಂತುಕೊಳ್ಳುತ್ತದೆ ಎಂಬುದರಲ್ಲೇ ಅವರಿಗೆ ದಲಿತರ ಮೇಲಿರುವ ಕಾಳಜಿ ಅರ್ಥವಾಗುತ್ತದೆ. ಸಂವಿಧಾನ ಉಳಿಯಬೇಕು. ಕಾಂಗ್ರೆಸ್ನ ಪೊಳ್ಳು ಭರವಸೆಗಳು ಹೋಗಬೇಕು ಎಂದು ಆರ್.ಅಶೋಕ್ ಹೇಳಿದರು.