‘ಬರ’ ದುಪ್ಪಟ್ಟು ಪರಿಹಾರ ನೀಡಲು ಆರಂಭಿಸಿದ್ದು ಕಾಂಗ್ರೆಸ್ ಸರಕಾರ: ಸಚಿವ ಕೃಷ್ಣ ಬೈರೇಗೌಡ
ಬೆಂಗಳೂರು: ಬರ ಪರಿಹಾರವನ್ನು ದ್ವಿಗುಣಗೊಳಿಸುವುದು, ಕೇಂದ್ರದಿಂದ ಪರಿಹಾರ ಬರುವ ಮುನ್ನ ಕೊಟ್ಟಿರುವ ಉದಾಹರಣೆಯಿಲ್ಲ. ಅಕಾಲಿಕ ಮಳೆ, ಆಲಿಕಲ್ಲು ಮಳೆ, ಪ್ರವಾಹ ಸಂದರ್ಭದಲ್ಲಿ ದುಪ್ಪಟ್ಟು ಪರಿಹಾರವನ್ನು ನೀಡುವ ಸಂಪ್ರದಾಯವನ್ನು 2013-14ರಲ್ಲಿ ನಮ್ಮ ಕಾಂಗ್ರೆಸ್ ಸರಕಾರವೆ ಪ್ರಾರಂಭ ಮಾಡಿದ್ದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಬುಧವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ವಂದನಾ ನಿರ್ಣಯದ ಮೇಲೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮಾತನಾಡುವಾಗ ಮಧ್ಯ ಪ್ರವೇಶಿಸಿದ ಅವರು, 2013-14ರಲ್ಲಿ ಕೊಪ್ಪಳ, ರಾಯಚೂರು ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆ ಬಿದ್ದು ಭತ್ತ ಬೆಳೆ ಹಾನಿಯಾದಾಗ, ವಿಜಯಪುರ, ಬಾಗಲಕೋಟೆಯಲ್ಲಿ ದ್ರಾಕ್ಷಿ ಬೆಳೆ ನಷ್ಟವಾದಾಗ ಕಾಂಗ್ರೆಸ್ ಸರಕಾರ ಪರಿಹಾರವನ್ನು ದುಪ್ಪಟ್ಟು ಕೊಟ್ಟಿದೆ ಎಂದರು.
ಆದರೆ, ಬರ ಪರಿಹಾರದ ವಿಚಾರದಲ್ಲಿ ಬಿಜೆಪಿ ಸರಕಾರವಾಗಲಿ, ಕಾಂಗ್ರೆಸ್ ಸರಕಾರವಾಗಲಿ ಪರಿಹಾರವನ್ನು ದ್ವಿಗುಣಗೊಳಿಸಿಲ್ಲ. ಏಕೆಂದರೆ, ಆಲಿಕಲ್ಲು ಮಳೆ, ಅಕಾಲಿಕ ಮಳೆ, ಪ್ರವಾಹ ಸೀಮಿತ ಪ್ರದೇಶದಲ್ಲಿ ಸಂಭವಿಸುತ್ತವೆ. ಮಾನವೀಯತೆಯ ದೃಷ್ಟಿಯಿಂದ ರೈತರಿಗೆ ಅನುಕೂಲವಾಗಲಿ ಎಂದು ಪರಿಹಾರವನ್ನು ದ್ವಿಗುಣಗೊಳಿಸಿ ನೀಡಿರುತ್ತೇವೆ. ಆದುದರಿಂದ, ಬರ ಪರಿಹಾರ ಮತ್ತು ವಿಪತ್ತುಗಳ ವೇಳೆ ನೀಡುವ ಪರಿಹಾರವನ್ನು ಒಂದೇ ರೀತಿಯಲ್ಲಿ ನೋಡಿ ಗೊಂದಲ ಸೃಷ್ಟಿಸುವುದು ಬೇಡ ಎಂದು ಅವರು ಹೇಳಿದರು.