ಮುಖ್ಯಮಂತ್ರಿ ಸ್ಥಾನದ ಬಗ್ಗೆ ಹೇಳಿಕೆ | ಹಿರಿಯ ಸಚಿವರ ವಿರುದ್ಧ ಕಾಂಗ್ರೆಸ್ ನಾಯಕರ ಆಕ್ರೋಶ : ಹೈಕಮಾಂಡ್ಗೆ ಪತ್ರ
ನಾಯಕ ರಾಹುಲ್ ಗಾಂಧಿ/ ಮಲ್ಲಿಕಾರ್ಜುನ ಖರ್ಗೆ (PTI)
ಬೆಂಗಳೂರು: ಮುಖ್ಯಮಂತ್ರಿ ಸ್ಥಾನದ ಕುರಿತು ಪದೇ ಪದೇ ಹೇಳಿಕೆ ನೀಡುತ್ತಿರುವ ಹಿರಿಯ ಸಚಿವರು ಹಾಗೂ ನಾಯಕರಿಗೆ ಎಚ್ಚರಿಕೆ ನೀಡುವಂತೆ ಹೈ ಕಮಾಂಡ್ ಗೆ ರಾಜ್ಯದ ಕಾಂಗ್ರೆಸ್ ನಾಯಕರೇ ಲಿಖಿತ ದೂರು ಸಲ್ಲಿಸಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಗೆ ಪತ್ರ ಬರೆದಿರುವ 15 ಮಂದಿ ಹಿರಿಯ ಕಾಂಗ್ರೆಸ್ ನಾಯಕರು ಮುಖ್ಯಮಂತ್ರಿ ಸ್ಥಾನದ ಕುರಿತು ಹೇಳಿಕೆ ನೀಡುತ್ತಿರುವವರಿಗೆ ಕಡಿವಾಣ ಹಾಕುವಂತೆ ಕೋರಿದ್ದಾರೆ.
ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ದು ಯಾವುದೇ ಪಾತ್ರವಿಲ್ಲದಿದ್ದರೂ ಅವರ ವಿರುದ್ಧ ಕಾನೂನು ಕ್ರಮಕ್ಕೆ ರಾಜ್ಯಪಾಲರು ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಹೈಕೋರ್ಟ್ ನಲ್ಲಿ ಕಾನೂನು ಹೋರಾಟ ನಡೆಯುತ್ತಿದೆ ಎಂದು ನಾಯಕರು ತಿಳಿಸಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡು 28 ಸ್ಥಾನಗಳಲ್ಲಿ ಗೆಲ್ಲುತ್ತೇವೆ ಎಂದು ಪತ್ರಿಪಾದಿಸುತ್ತಿದ್ದರ ನಡುವೆಯೂ ಕಾಂಗ್ರೆಸ್ ಪಕ್ಷ 9 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ ಎಂದು ನಾಯಕರು ಪತ್ರದಲ್ಲಿ ತಿಳಿಸಿದ್ದಾರೆ.
ವಿಪಕ್ಷಗಳು ಕಾಂಗ್ರೆಸ್ ಸರಕಾರವನ್ನು ಅಸ್ಥಿರ ಗೊಳಿಸಲು ಪ್ರಯತ್ನಿಸುತ್ತಿವೆ. ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮುಡಾ ವಿಚಾರವನ್ನು ತಂದರು. ಇಂತಹ ಸಂದರ್ಭದಲ್ಲಿ ವಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ಹೋರಾಟ ಮಾಡುವುದನ್ನು ಬಿಟ್ಟು, ಮುಖ್ಯಮಂತ್ರಿಯಾಗುವ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಈ ಹೇಳಿಕೆಗಳಿಂದಾಗಿ ಕಾಂಗ್ರೆಸ್ ಕಾರ್ಯಕರ್ತರಷ್ಟೇ ಅಲ್ಲ, ಸರಕಾರದ ಆಡಳಿತ ಯಂತ್ರದ ಮೇಲೂ ಪರಿಣಾಮ ಬೀರುತ್ತಿದೆ ಎಂದು ನಾಯಕರು ಆತಂಕ ವ್ಯಕ್ತಪಡಿಸಿದ್ದಾರೆ. ಆದುದರಿಂದ, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಪಕ್ಷ ಹಾಗೂ ಸರಕಾರಕ್ಕೆ ಮುಜುಗರ ತರಿಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ನಾಯಕರು ಕೋರಿದ್ದಾರೆ.
ಪತ್ರದಲ್ಲಿ ಹಿರಿಯ ನಾಯಕರಾದ ಬಿ.ಎಲ್.ಶಂಕರ್, ವಿ.ಎಸ್.ಉಗ್ರಪ್ಪ, ಎಚ್.ಎಂ.ರೇವಣ್ಣ,ವಿ.ಆರ್.ಸುದರ್ಶನ್, ಸಿ.ಎಸ್.ದ್ವಾರಕನಾಥ್, ರಾಣಿ ಸತೀಶ್, ಮೋಹನ್ ಕೊಂಡಜ್ಜಿ, ಡಾ.ಎಲ್.ಹನುಮಂತಯ್ಯ, ಖಾಲಿದ್ ಅಹ್ಮದ್, ಬಿ.ಎನ್.ಚಂದ್ರಪ್ಪ ಸೇರಿದಂತೆ ಇನ್ನಿತರರು ಸಹಿ ಮಾಡಿದ್ದಾರೆ.