ಕಾಂಗ್ರೆಸ್ ನಾಯಕರನ್ನು ಪಕ್ಷಕ್ಕೆ ಕರೆದುಕೊಂಡು ಬಂದಿದ್ದಕ್ಕೆ ನಾವು ಅನುಭವಿಸುತ್ತಿದ್ದೇವೆ: ಕೆ.ಎಸ್. ಈಶ್ವರಪ್ಪ
ಅಶಿಸ್ತು ತೋರಿಸುವವರ ಬಾಲ ಕಟ್ ಮಾಡುತ್ತೇವೆ ಎಂದ ಮಾಜಿ ಸಚಿವ
ಹುಬ್ಬಳ್ಳಿ, ಜೂ.26: ''ಬಿಜೆಪಿಯಲ್ಲಿ ಈಗ ಸ್ವಲ್ಪ ಮಟ್ಟಿಗೆ ಶಿಸ್ತು ಕಡಿಮೆ ಆಗಿದೆ. ಕಾಂಗ್ರೆಸ್ ಗಾಳಿ ನಮ್ಮ ಮೇಲೂ ಬಂದಿದೆ. ಕಾಂಗ್ರೆಸ್ ನಾಯಕರನ್ನು ಕರೆದುಕೊಂಡು ಬಂದಿದ್ದಕ್ಕೆ ನಾವು ಈಗ ಅನುಭವಿಸುತ್ತಿದ್ದೇವೆ'' ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ''ಕಾಂಗ್ರೆಸ್ ನಾಯಕರು ಬಂದ ಮೇಲೆ ಪಕ್ಷದಲ್ಲಿ ಅಲ್ಪ ಸ್ವಲ್ಪ ಶಿಸ್ತು ಹೋಗಿದೆ. ಮುಂದೆ ಅಶಿಸ್ತು ತೋರಿಸುವವರ ಬಾಲ ಕಟ್ ಮಾಡುತ್ತೇವೆ'' ಎಂದು ಈಶ್ವರಪ್ಪ.
''ಹೊಂದಾಣಿಕೆ ರಾಜಕಾರಣದ ಬಗ್ಗೆ ಬಹಿರಂಗವಾಗಿ ಹೀಗೆ ಮಾತನಾಡಬಾರದು. ಇದು ನಾಲ್ಕು ಗೋಡೆ ಮದ್ಯೆ ಮಾತಾಡುವ ವಿಚಾರ. ನಾನು ಅಧ್ಯಕ್ಷರಿಗೆ ಮನವಿ ಮಾಡಿದ್ದೇನೆ,ಈ ರೀತಿ ಆಗದಂತೆ ನೋಡಿಕೊಳ್ಳಿ ಅಂದಿದ್ದೇನೆ. ಬಹಿರಂಗ ಹೇಳಿಕೆ ಕೊಡುವವರ ಜೊತೆ ನಾನು ಮಾತಾಡುತ್ತೇನೆ'' ಎಂದು ಹೇಳಿದರು.
ವಿದ್ಯುತ್ ದರ ಏರಿಕೆಗೆ ಬಿಜೆಪಿ ಸರ್ಕಾರ ಒಪ್ಪಿಗೆ ಕೊಟ್ಟಿಲ್ಲ. ಕಾಂಗ್ರೆಸ್ ಸರ್ಕಾರ ಸಂಪುಟದಲ್ಲಿ ಒಪ್ಪಿಗೆ ಕೊಟ್ಟಿದೆ. ರಾಜ್ಯ ಸರ್ಕಾರ ವಿದ್ಯುತ್ ದರ ಏರಿಕೆ ಕೂಡಲೆ ಹಿಂಪಡೆಯಬೇಕು. ದೇಶದ್ರೋಹಿಗಳ ಮೇಲಿನ ಕೇಸ್ ಹಿಂಪಡೆಯಲು ಆಗುತ್ತೆ, ವಿದ್ಯುತ್ ದರ ಏರಿಕೆ ಹಿಂಪಡೆಯಲು ಆಗಲ್ವಾ? ಎಂದು ಪ್ರಶ್ನಿಸಿದ ಅವರು, ಕಳೆದ ಚುನಾವಣೆ ಕೆಟ್ಟ ಕನಸು ಅಂತಾ ಮರೆತಿದ್ದೇವೆ. ರಾಜ್ಯ ಮತ್ತು ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಏರಲು ಜನರ ಬಳಿ ಹೊರಟಿದ್ದೇವೆ, ರಾಜ್ಯಾದ್ಯಂತ ಓಡಾಡಿ ಪಕ್ಷವನ್ನು ಬಲಿಷ್ಠ ಮಾಡುತ್ತಿದ್ದೇವೆ ಎಂದು ಹೇಳಿದರು.