ಕಾಂಗ್ರೆಸ್ ಪಕ್ಷ ಸಮುದ್ರವಿದ್ದಂತೆ, ಯಾರೇ ಹೋದರೂ ಪಕ್ಷಕ್ಕೆ ನಷ್ಟವಾಗದು: ಡಿಸಿಎಂ ಡಿ.ಕೆ. ಶಿವಕುಮಾರ್
ಬೆಂಗಳೂರು: “ಕಾಂಗ್ರೆಸ್ ಪಕ್ಷ ಸಮುದ್ರವಿದ್ದಂತೆ. ನೂರಾರು ನಾಯಕರು ಬರುತ್ತಾರೆ, ಹೋಗುತ್ತಾರೆ. ಯಾರೇ ಬರಲಿ, ಯಾರೇ ಹೋಗಲಿ ಪಕ್ಷಕ್ಕೆ ಅದರಿಂದ ನಷ್ಟವಾಗುವುದಿಲ್ಲ” ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ಜಗದೀಶ್ ಶೆಟ್ಟರ್ ಅವರು ಬಿಜೆಪಿ ಆಂತರಿಕ ವಿಚಾರದಿಂದ ಬೇಸತ್ತು ಆ ಪಕ್ಷದ ವಿರುದ್ಧ ದೊಡ್ಡ ಆರೋಪ ಮಾಡಿ ಕಾಂಗ್ರೆಸ್ ಸೇರಿದ್ದರು. ಅವರಿಗೆ ಪಕ್ಷದ ಟಿಕೆಟ್ ನೀಡಿದ್ದೆವು. 35 ಸಾವಿರ ಮತಗಳ ಅಂತರದಲ್ಲಿ ಸೋತಿದ್ದರು. ಆದರೂ ಅವರಿಗೆ ವಿಧಾನ ಪರಿಷತ್ತಿಗೆ ನಾಮನಿರ್ದೆಶನ ಮಾಡಿದ್ದೆವು. ಕಳೆದ 2-3 ತಿಂಗಳಿಂದ ಬಿಜೆಪಿ ನಾಯಕರು ಅವರನ್ನು ಸಂಪರ್ಕ ಮಾಡುತ್ತಿದ್ದರು. ಮೊನ್ನೆ ಕೂಡ ಬಿಜೆಪಿ ಸೇರುವುದಿಲ್ಲ ಎಂದು ಅವರು ಹೇಳಿದ್ದರು. ಆದರೆ ನಿನ್ನೆ ಏಕಾಏಕಿ ಪಕ್ಷ ತೊರೆದಿದ್ದಾರೆ ಎಂದು ಹೇಳಿದ್ದಾರೆ.
ನಮ್ಮ ಪಕ್ಷ 136 ಸೀಟು ಗೆದ್ದಿದೆ. ನಮ್ಮ ತಪ್ಪಿನಿಂದ 6-7 ಸೀಟು ಸೋತಿದ್ದೇವೆ. ಈಗಲೂ ಬಹಳ ಮಂದಿ ನಮ್ಮ ಪಕ್ಷ ಸೇರಲು ಎದುರು ನೋಡುತ್ತಿದ್ದಾರೆ. ನಾವು ಸಿದ್ಧಾಂತ, ನೀತಿ ಮೇಲೆ ರಾಜಕಾರಣ ಮಾಡುವವರು. ಬೆಳಗಾವಿ ಹಾಗೂ ಇತರೆ ಭಾಗದ ನಾಯಕರು, ಕಾರ್ಯಕರ್ತರು ಜಗದೀಶ್ ಶೆಟ್ಟರ್ ಅವರು ಬಿಜೆಪಿಗೆ ಹೋಗಿದ್ದು ಒಳ್ಳೆಯದಾಯಿತು ಎಂದು ಹೇಳಿದ್ದಾರೆ. ದೂರದೃಷ್ಟಿ ಇಟ್ಟುಕೊಂಡು ಅವರಿಗೆ ನಾವು ಅವಕಾಶ ಮಾಡಿಕೊಟ್ಟಿದ್ದೆವು. ಅವರು ಬಿಜೆಪಿ ವಿರುದ್ಧ ಕೊಟ್ಟ ಹೇಳಿಕೆಗಳಿಗೆ ಈಗ ಅವರೇ ಉತ್ತರ ನೀಡಬೇಕು. ಅದರ ಬಗ್ಗೆ ನಾವು ಮಾತನಾಡುವ ಅಗತ್ಯವಿಲ್ಲ. ಅವರ ರಾಜೀನಾಮೆಯಿಂದ ತೆರವಾದ ಸ್ಥಾನವನ್ನು ಕಾಂಗ್ರೆಸ್ ನಿಷ್ಠಾವಂತ ಕಾರ್ಯಕರ್ತನಿಗೆ ನೀಡುತ್ತೇವೆ ಎಂದರು.
ಸಂವಿಧಾನ ಭಾರತೀಯರ ಪವಿತ್ರ ಗ್ರಂಥ
ರಾಜ್ಯದ ಜನತೆಗೆ ಗಣರಾಜ್ಯೋತ್ಸವದ ಶುಭಾಶಯಗಳು. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿರುವ ಪವಿತ್ರ ಗ್ರಂಥ ಸಂವಿಧಾನ. ಇದು ನಮ್ಮ ರಾಷ್ಟ್ರೀಯ ಗ್ರಂಥ. ಸಂವಿಧಾನ ಎತ್ತಿಹಿಡಿಯುವುದು ನಮ್ಮ ಕರ್ತವ್ಯ. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ. ಕಾಂಗ್ರೆಸ್ ಇತಿಹಾಸ, ದೇಶದ ಇತಿಹಾಸ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಮಾಜದ ಎಲ್ಲಾ ವರ್ಗದ ಜನರೂ ಅಧಿಕಾರಕ್ಕೆ ಬಂದಂತೆ. ಕಾಂಗ್ರೆಸ್ ಎಲ್ಲಾ ವರ್ಗದವರನ್ನು ಒಟ್ಟಾಗಿ ತೆಗೆದುಕೊಂಡು ಹೋಗುತ್ತದೆ ನುಡಿದರು.
ಜೆಡಿಎಸ್ ಮತ್ತು ಕುಮಾರಸ್ವಾಮಿ ಬಿಜೆಪಿ ವಕ್ತಾರರು
“ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು. ನಾವು ಬಿಜೆಪಿಯವರನ್ನು ಅಧಿಕಾರದಿಂದ ದೂರವಿಡಲು ಕುಮಾರಸ್ವಾಮಿ ಅವರಿಗೆ ಬೇಷರತ್ ಬೆಂಬಲ ನೀಡಿ ಮುಖ್ಯಮಂತ್ರಿ ಮಾಡಿದ್ದೆವು. ಆ ಸರ್ಕಾರವನ್ನು ಅವರು ಉಳಿಸಿಕೊಳ್ಳಲಿಲ್ಲ. ಆಪರೇಷನ್ ಕಮಲದ ಮೂಲಕ ಸರ್ಕಾರ ಬೀಳಿಸಿದವರ ಜತೆಗೆ ಅವರು ಇಂದು ನೆಂಟಸ್ತನ ಬೆಳೆಸಿದ್ದಾರೆ. ಜೆಡಿಎಸ್ ಹಾಗೂ ಕುಮಾರಸ್ವಾಮಿ ಈಗ ಬಿಜೆಪಿಯ ವಕ್ತಾರರಂತೆ ಕೆಲಸ ಮಾಡುತ್ತಿದ್ದಾರೆ. ಮೈತ್ರಿ ಸರ್ಕಾರ ಬಿದ್ದಾಗ ಕುಮಾರಸ್ವಾಮಿ ಅವರು ಬಿಜೆಪಿ ವಿರುದ್ಧ ಆಡಿದ ಮಾತುಗಳಿಗೆ ಈಗ ಅವರೇ ಉತ್ತರ ನೀಡಬೇಕು. ರಾಜಕಾರಣ ಹೀಗಿರುವಾಗ ನಮಗೆ ನಾಚಿಕೆಯಾಗುತ್ತದೆ. ಅಧಿಕಾರ ಬರುತ್ತದೆ, ಹೋಗುತ್ತದೆ. ಆದರೂ ನಾವು ನೀತಿ, ಸಿದ್ಧಾಂತದ ಮೇಲೆ ರಾಜಕಾರಣ ಮಾಡಬೇಕು” ಎಂದು ತಿಳಿಸಿದರು.
ಲಕ್ಷ್ಮಣ ಸವದಿ ಪಕ್ಷ ಬಿಡುವುದಿಲ್ಲ
“ನಾನು ಶೆಟ್ಟರ್ ಅವರ ಜತೆಗೆ ಬಂದವನಲ್ಲ. ನಾನು ನನ್ನ ವೈಯಕ್ತಿಕ ನಿರ್ಧಾರದಿಂದ ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದೇನೆ. ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು ಸವದಿ ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಜತೆಗೆ ಅವರೇ ಮಾಧ್ಯಮಗಳಿಗೆ ಉತ್ತರ ನೀಡಿದ್ದಾರೆ. ಅವರು ಈಗ ನಮ್ಮ ಪಕ್ಷದ ನಾಯಕರು ಹಾಗೂ ಪ್ರಮುಖ ಆಸ್ತಿ” ಎಂದು ತಿಳಿಸಿದರು.