ಗೊಬ್ಬರ, ಔಷಧಿ, ತೈಲ ದರ ಆಕಾಶಕ್ಕೇರಿಸಿದ ಮೋದಿ ಭಾರತದ ಮಧ್ಯಮ ವರ್ಗ-ಬಡವರ ವಿರೋಧಿ : ಸಿದ್ದರಾಮಯ್ಯ ವಾಗ್ದಾಳಿ
ಕೇಂದ್ರ ಸರಕಾರದ ಬೆಲೆ ಏರಿಕೆ ನೀತಿ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

ಬೆಂಗಳೂರು ಕೇಂದ್ರ ಸರಕಾರದ ಬೆಲೆ ಏರಿಕೆ ನೀತಿ ಖಂಡಿಸಿ ರಾಜ್ಯ ಕಾಂಗ್ರೆಸ್ ನಾಯಕರು ಗುರುವಾರ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಡುಗೆ ಅನಿಲ(ಎಲ್‍ಪಿಜಿ), ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಸೇರಿದಂತೆ ಕೇಂದ್ರದಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಆಕ್ರೋಶ ಹೊರಹಾಕಿದರು. ಕೇಂದ್ರ ಸರಕಾರ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಧಾನಿ ಮೋದಿ ಅಡುಗೆ ಅನಿಲ ಸಬ್ಸಿಡಿ ತೆಗೆದು ಬಡವರ ವಿರೋಧಿಯಾಗಿದ್ದಾರೆ. ಗೊಬ್ಬರ, ಔಷಧಿ, ರಾಗಿ, ಗೋಧಿ, ಡೀಸೆಲ್, ಪೆಟ್ರೋಲ್ ಎಲ್ಲದರ ಬೆಲೆ ಆಕಾಶಕ್ಕೇರಿಸುವ ಮೂಲಕ ಪ್ರಧಾನಿ ಮೋದಿಯವರು ಭಾರತದ ಮಧ್ಯಮ ವರ್ಗ ಮತ್ತು ಬಡವರ ವಿರೋಧಿಯಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಆರೆಸ್ಸೆಸ್ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿಲ್ಲ. ಹೀಗಾಗಿ ಈ ಆರೆಸ್ಸೆಸ್ ಪರಿವಾರಕ್ಕೆ ಭಾರತದ ಬೆಲೆಯೂ ಗೊತ್ತಿಲ್ಲ. ಸ್ವಾತಂತ್ರ್ಯದ ಬೆಲೆಯೂ ಗೊತ್ತಿಲ್ಲ. ಆರೆಸ್ಸೆಸ್‍ನವರ ದೇಶದ್ರೋಹದ ವಿರುದ್ಧ ಮತ್ತೊಂದು ಸ್ವಾತಂತ್ರ್ಯ ಹೋರಾಟದ ಮಾದರಿ ದೇಶಾದ್ಯಂತ ನಡೆಸೋಣ, ಕಾರ್ಯಕರ್ತರು ಸಜ್ಜಾಗಬೇಕು ಎಂದು ಸಿದ್ದರಾಮಯ್ಯ ಕರೆ ನೀಡಿದರು.
ಕೇಂದ್ರ ಸರಕಾರ ಸಿಲಿಂಡರ್ ಗೆ 50 ರೂ. ಬೆಲೆ ಏರಿಕೆ ಮಾಡಿದ್ದಾರೆ. ಅದು ಲಜ್ಜೆಗೆಟ್ಟ ಸರಕಾರವಾಗಿದ್ದು, ರಾಜ್ಯ ಬಿಜೆಪಿ ಹಾಗೂ ಜೆಡಿಎಸ್‍ಗೆ ಪ್ರತಿಭಟನೆ ಮಾಡುವ ಯಾವುದೇ ನೈತಿಕತೆ ಇಲ್ಲ. ಅವರಿಗೆ ಮಾನ, ಮರ್ಯಾದೆ ಇದ್ದರೆ ಪ್ರತಿಭಟನೆ ಮಾಡುತ್ತಿರಲಿಲ್ಲ. ಕೇಂದ್ರದವರು ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿದ್ದರಿಂದ ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗಿದೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಮೋದಿ ಅವರು ಅಚ್ಚೇ ದಿನ ಆಯೇಗಾ ಅಂತ ಹೇಳಿದ್ದರು. ಆದರೆ, ಒಳ್ಳೆಯ ದಿನ ಬಂತಾ?. ಆದರೆ, ಎಲ್ಲ ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗಿದೆ. ಸಿಮೆಂಟ್ ಬೆಲೆ, ಪಿವಿಸಿ ಪೈಪ್ ಬೆಲೆ, ಸಕ್ಕರೆ ಬೆಲೆ, ಬೇಳೆ ಕಾಳುಗಳ ಬೆಲೆ, ಉಪ್ಪು ಬೆಲೆ, ಅಕ್ಕಿ, ರಾಗಿ ಬೆಲೆಗಳು ಏರಿಕೆಯಾಗಿದೆ ಎಂದು ಸಿದ್ದರಾಮಯ್ಯ ಕಿಡಿಕಾರಿದರು.
ಬೆಲೆ ಏರಿಕೆಗೆ ನರೇಂದ್ರ ಮೋದಿ ಕಾರಣ. ನಮ್ಮ ವಿರುದ್ಧ ಹೋರಾಟ ಮಾಡುವ ನೈತಿಕ ಹಕ್ಕಿಲ್ಲ. ಹಾಲಿನ ಬೆಲೆ ಏರಿಕೆ ಮಾಡುವಂತೆ ರೈತರು ಮನವಿ ಮಾಡುತ್ತಿದ್ದರು. ಅದಕ್ಕಾಗಿ ಹಾಲಿನ ಬೆಲೆ ಏರಿಕೆ ಮಾಡಿದ್ದೇವೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಹಾಲಿನ ದರ ಕಡಿಮೆ ಇದೆ. ಬಿಜೆಪಿಯವರು ರೈತರ ವಿರೋಧಿಗಳು. ಅದಕ್ಕಾಗಿ ಹಾಲಿನ ದರ ಏರಿಕೆ ವಿರುದ್ಧ ಹೋರಾಟ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ರಾಜಕೀಯ ಅಂದರೆ ಬರೀ ಅಧಿಕಾರ ಅಲ್ಲ. ಸೈದ್ಧಾಂತಿಕ ಸ್ಪಷ್ಟತೆಯಿಂದ ಜನರ ಪರವಾಗಿ ನಿಂತು ನಿರಂತರ ಹೋರಾಟ ನಡೆಸುವುದೂ ರಾಜಕೀಯ ಬದ್ಧತೆಯೇ ಆಗಿದೆ. ಆದರೆ, ಬಿಜೆಪಿ ಅಧಿಕಾರಕ್ಕಾಗಿ ಹಪಾಹಪಿಸುತ್ತಿದೆ. ದೇಶಾದ್ಯಂತ ಸುಳ್ಳುಗಳನ್ನೇ ಹೇಳಿಕೊಂಡು ಜನರಿಂದ ಅಧಿಕಾರ ಪಡೆಯುತ್ತಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರು.
ಪ್ರತಿಭಟನೆಯಲ್ಲಿ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‍ಸಿಂಗ್ ಸುರ್ಜೆವಾಲ, ಎಐಸಿಸಿ ಕಾರ್ಯದರ್ಶಿಗಳಾದ ಅಭಿಷೇಕ್ ದತ್, ಮಯೂರ್ ಜೈಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ.ಚಂದ್ರಶೇಖರ್, ಸಚಿವರಾದ ರಾಮಲಿಂಗಾರೆಡ್ಡಿ, ಕೃಷ್ಣಭೈರೇಗೌಡ, ಕೆ.ಎಚ್.ಮುನಿಯಪ್ಪ, ಕೆ.ಜೆ.ಜಾರ್ಜ್, ಎಚ್.ಸಿ.ಮಹದೇವಪ್ಪ, ಚಲುವರಾಯಸ್ವಾಮಿ, ಎಂ.ಬಿ.ಪಾಟೀಲ್, ಸತೀಶ್ ಜಾರಕಿಹೊಳಿ, ಈಶ್ವರ್ ಖಂಡ್ರೆ, ಲಕ್ಷ್ಮೀ ಹೆಬ್ಬಾಳ್ಕರ್, ಬೋಸರಾಜು, ಶರಣಬಸಪ್ಪ ದರ್ಶನಾಪುರ, ಎಂ.ಸಿ.ಸುಧಾಕರ್, ಭೈರತಿ ಸುರೇಶ್, ರಾಷ್ಟ್ರೀಯ ಯುವ ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷ ಬಿ.ವಿ.ಶ್ರೀನಿವಾಸ್, ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್‍ಗೌಡ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.
ಮೋದಿ ಸರಕಾರದಿಂದ 10 ವರ್ಷಗಳಲ್ಲಿ 34 ಲಕ್ಷ ಕೋಟಿ ರೂ.ಲೂಟಿ: ಸುರ್ಜೇವಾಲ
ಮೋದಿ ಸರಕಾರ ಹಿಂದಿನ 10 ವರ್ಷಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಸುಮಾರು 34 ಲಕ್ಷ ಕೋಟಿ ಹಣವನ್ನು ಲೂಟಿ ಮಾಡಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ ಆಕ್ರೋಶ ಹೊರಹಾಕಿದ್ದಾರೆ.
ಕೇಂದ್ರ ಸರಕಾರ ಅಬಕಾರಿ ಸುಂಕವನ್ನು ಪೆಟ್ರೋಲ್, ಡೀಸೆಲ್ ಮೇಲೆ ಹಾಕುತ್ತಿದೆ. ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿ ಇದ್ದಾಗ ಡೀಸೆಲ್ ಮೇಲಿನ ಅಬಕಾರಿ ಸುಂಕ 3.14 ರೂ. ಮಾತ್ರ ಸಂಗ್ರಹ ಮಾಡುತ್ತಿತ್ತು. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ತಕ್ಷಣ ಇದನ್ನು 15.80 ರೂ. ಹೆಚ್ಚು ಮಾಡಿ ಸುಲಿಗೆ ಮಾಡಲಾಗುತ್ತಿದೆ ಎಂದು ಸುರ್ಜೇವಾಲ ವಾಗ್ದಾಳಿ ನಡೆಸಿದರು.
ರಾಜ್ಯದ ಬಿಜೆಪಿ, ಜೆಡಿಎಸ್ ಸಂಸದರು ಯಾವ ನೈತಿಕತೆ ಇಟ್ಟುಕೊಂಡು ಸಚಿವ ಸ್ಥಾನ ಅನುಭವಿಸುತ್ತಿದ್ದಾರೆ. ಇವರಿಗೆ ಮೋದಿ ಅವರನ್ನು ಪ್ರಶ್ನಿಸುವ ಗುಂಡಿಗೆಯಿಲ್ಲವೇ? ಧೈರ್ಯವಿಲ್ಲವೇ? ಎಂದು ಸುರ್ಜೇವಾಲ ಪ್ರಶ್ನಿಸಿದರು.
ಕೇಂದ್ರ ಸರಕಾರದ ಅಡುಗೆ ಅನಿಲ ಬೆಲೆ ಏರಿಕೆಯಿಂದ ರಾಜ್ಯದ ಜನರ ಮೇಲೆ ವಾರ್ಷಿಕ 550 ಕೋಟಿ ರೂ. ಹೊರೆ ಬೀಳುತ್ತಿದೆ. ಈ ಬೆಲೆ ಏರಿಕೆ ವಿರುದ್ಧ ಬಿಜೆಪಿ, ಜೆಡಿಎಸ್ ಶಾಸಕರು ಏಕೆ ಮಾತನಾಡುತ್ತಿಲ್ಲ. ಇದರ ವಿರುದ್ಧ ಮೋದಿ ಬಳಿ ಮಾತನಾಡುವ ಧೈರ್ಯ ಇಲ್ಲದೇ ಇದ್ದರೆ ಬಿಜೆಪಿ ಸಂಸದರು, ಶಾಸಕರು ರಾಜೀನಾಮೆ ನೀಡಿ ಮನೆಗೆ ಹೋಗಲಿ ಎಂದು ಸುರ್ಜೇವಾಲ ಆಗ್ರಹಿಸಿದರು.