ಕೈಯಲ್ಲಿ ಮಂತ್ರಾಕ್ಷತೆ, ಬಗಲಲ್ಲಿ ದೊಣ್ಣೆ ಹಿಡಿದಿರುವ ಬಿಜೆಪಿ ಗೂಂಡಾಗಳಿಗೆ ಕಾಂಗ್ರೆಸಿಗರು ಹೆದರಲ್ಲ: ಡಿ.ಕೆ ಶಿವಕುಮಾರ್
ಬೆಂಗಳೂರು: “ಬಿಜೆಪಿ ಗೂಂಡಾಗಳು ಕೈಯಲ್ಲಿ ಮಂತ್ರಾಕ್ಷತೆ ಹಿಡಿದಿದ್ದರೆ, ಬಗಲಲ್ಲಿ ದೊಣ್ಣೆ ಹಿಡಿದಿದ್ದಾರೆ. ಈ ಗೂಂಡಾಗಳ ಗೊಡ್ಡು ಬೆದರಿಕೆಗೆ ಯಾವುದೇ ಕಾಂಗ್ರೆಸಿಗ ಹೆದರುವುದಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.
ಅಸ್ಸಾಂನಲ್ಲಿ ರಾಹುಲ್ ಗಾಂಧಿ ಅವರ ಭಾರತ ಜೋಡೋ ನ್ಯಾಯ ಯಾತ್ರೆ ಮೇಲೆ ಬಿಜೆಪಿ ಕಾರ್ಯಕರ್ತರ ದಾಳಿ ಖಂಡಿಸಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಅಸ್ಸಾಂನಲ್ಲಿ ಕಳೆದೆರಡು ದಿನಗಳಿಂದ ಈ ಯಾತ್ರೆಯನ್ನು ತಡೆಯಲಾಗಿದೆ. ಇಂದು ಗುವಾಹಟಿಗೆ ಪ್ರವೇಶಿಸಲು ಅವಕಾಶ ನೀಡುತ್ತಿಲ್ಲ. ಆ ಮೂಲಕ ದೇಶದಲ್ಲಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆ ಬದುಕಿದೆಯೋ ಸತ್ತಿದೆಯೋ ಎಂಬ ಪ್ರಶ್ನೆ ಉದ್ಭವಿಸಿದೆ. ಅಸ್ಸಾಂ ಸರ್ಕಾರದ ಈ ನಡೆಯನ್ನು ನಾವೆಲ್ಲರೂ ಖಂಡಿಸುತ್ತೇವೆ ಎಂದರು.
ರಾಹುಲ್ ಗಾಂಧಿ ಅವರು ದೇಶದ ಮನಸ್ಸುಗಳನ್ನು ಒಗ್ಗೂಡಿಸಲು, ಜನರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಿ, ಅವರಿಗೆ ನ್ಯಾಯ ಒದಗಿಸಲು ಮಣಿಪುರದಿಂದ ಮುಂಬೈವರೆಗೂ ಎರಡನೇ ಹಂತದ ಭಾರತ ಜೋಡೋ ನ್ಯಾಯ ಯಾತ್ರೆ ಹಮ್ಮಿಕೊಂಡಿದ್ದಾರೆ. ಈ ಯಾತ್ರೆಯಿಂದ ಬಿಜೆಪಿ ನಾಯಕರಲ್ಲಿ ನಡುಕ ಹುಟ್ಟಿದೆ. ಹೀಗಾಗಿ ಅವರ ಯಾತ್ರೆಯನ್ನು ತಡೆಯುತ್ತಿದ್ದಾರೆ ಎಂದು ಆರೋಪಿಸಿದರು.
ಭಾರತ ಜೋಡೋ ನ್ಯಾಯ ಯಾತ್ರೆ ಕುರಿತು ಪಕ್ಷದ ಮುಖಂಡರು ಚರ್ಚೆ ಮಾಡುವಾಗ ನಾನು ಸಿದ್ದರಾಮಯ್ಯ ಅವರು ಇದ್ದೆವು. ಈ ಚಳಿ, ಬಿಸಿಲಿನಲ್ಲಿ ಹೆಜ್ಜೆ ಹಾಕಿ ಈ ದೇಶದ ಹೃದಯಗಳನ್ನು ಒಗ್ಗೂಡಿಸಬೇಕು, ಜನರ ಧ್ವನಿಯಾಗಿ, ಅವರ ಸಮಸ್ಯೆ ಬಗೆಹರಿಸಬೇಕು. ಆ ಮೂಲಕ ನ್ಯಾಯ ಒದಗಿಸಬೇಕು ಎಂಬ ನಿರ್ಣಯಕ್ಕೆ ರಾಹುಲ್ ಗಾಂಧಿ ಅವರು ಬದ್ಧರಾಗಿದ್ದಾರೆ. ಈ ಯಾತ್ರೆ ಕೇವಲ ಕಾಂಗ್ರೆಸ್ ಪಕ್ಷಕ್ಕೆ ಮಾತ್ರವಲ್ಲ. ಎಲ್ಲಾ ವಿರೋಧ ಪಕ್ಷಗಳಿಗೆ ಮಾದರಿ ಎಂದು ಹೇಳಿದರು.
ದೇಶದ ಐಕ್ಯತೆ, ಸಮಗ್ರತೆ ಶಾಂತಿಗೆ ಸಾವಿರಾರು ಕಾಂಗ್ರೆಸ್ ನಾಯಕರು ಪ್ರಾಣತ್ಯಾಗ ಮಾಡಿದ್ದಾರೆ. ರಾಹುಲ್ ಗಾಂಧಿ ಅವರು, ತನ್ನ ಅಜ್ಜಿಗೆ ಗುಂಡು ಹಾರಿಸಿ ಕೊಂದಿದ್ದನ್ನು, ಅವರ ಚಿಕ್ಕಪ್ಪ ಸಂಜಯ್ ಗಾಂಧಿ ಹತ್ಯೆಯನ್ನು, ತನ್ನ ತಂದೆ ರಾಜೀವ್ ಗಾಂಧಿ ಮೇಲೆ ಬಾಂಬ್ ದಾಳಿ ಮಾಡಿದ್ದನ್ನು ಚಿಕ್ಕ ವಯಸ್ಸಿನಲ್ಲೇ ಕಂಡಿದ್ದಾರೆ. ಇಷ್ಟು ದುಖಃ ಅನುಭವಿಸಿದ್ದರೂ ಅವರು ದೇಶದ ಒಗ್ಗಟ್ಟಿಗಾಗಿ ಯಾತ್ರೆ ಮಾಡುತ್ತಿದ್ದಾರೆ. ಅದನ್ನು ನೋಡಿ ಬಿಜೆಪಿಯವರಿಂದ ಸಹಿಸಲು ಆಗುತ್ತಿಲ್ಲ. ಬಿಜೆಪಿಯ ಯಾವುದಾದರೂ ಒಬ್ಬ ನಾಯಕ ಇಂತಹ ತ್ಯಾಗ ಮಾಡಿದ್ದಾರಾ? ಕಾಂಗ್ರೆಸ್ ಪಕ್ಷ ಮಾತ್ರ ಇಂತಹ ಯಾತ್ರೆ ಮಾಡಲು ಸಾಧ್ಯ. ಬೇರೆ ಯಾರಿಂದಲೂ ಸಾಧ್ಯವಿಲ್ಲ ಎಂದು ನುಡಿದರು.
ಕೆಲವೇ ಗಂಟೆಗಳ ಸೂಚನೆಗೆ ಸ್ಪಂದಿಸಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಬಂದು ಭಾಗವಹಿಸಿದ್ದೀರಿ. ನೀವು ರಾಹುಲ್ ಗಾಂಧಿ ಅವರ ಬೆಂಬಲವಾಗಿ ನಿಂತಿರುವುದಕ್ಕೆ ಧನ್ಯವಾದಗಳು. ಯಾತ್ರೆ ನಿಲ್ಲಿಸಲು ಬಿಜೆಪಿ ಮಾಡುತ್ತಿರುವ ಯಾವುದೇ ಷಡ್ಯಂತ್ರಕ್ಕೂ ನಾವು ಜಗ್ಗುವುದಿಲ್ಲ. ದೇಶದ ಒಗ್ಗಟ್ಟು, ಐಕ್ಯತೆ, ಸಮಗ್ರತೆ, ಶಾಂತಿಗಾಗಿ ಹೋರಾಟ ಮುಂದುವರಿಸುತ್ತೇವೆ.
ಧರ್ಮದ ವಿಚಾರದಲ್ಲಿ ಬಿಜೆಪಿ ರಾಜಕಾರಣ:
ಬಿಜೆಪಿಯವರು ಧರ್ಮದ ವಿಚಾರವಾಗಿ ರಾಜಕಾರಣ ಮಾಡುತ್ತಿದ್ದಾರೆ. ಹೀಗಾಗಿ ಅವರು ಒಂದು ಕೈಯಲ್ಲಿ ಮಂತ್ರಾಕ್ಷತೆ ಹಿಡಿದರೆ, ಮತ್ತೊಂದು ಕೈಯಲ್ಲಿ ದೊಣ್ಣೆ ಹಿಡಿದು ಜನಪರ ಧ್ವನಿ ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ರಾಜಕಾರಣದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕಾರಣ ಇರಬಾರದು. ನೀವು ಧರ್ಮವನ್ನು ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದ್ದರೂ ನಾವು ಅದರ ಬಗ್ಗೆ ಹೆಚ್ಚು ಚರ್ಚೆ ಮಾಡುತ್ತಿಲ್ಲ. ಸಿದ್ದರಾಮಯ್ಯ ಅವರ ಹೆಸರಲ್ಲಿ ರಾಮ, ಶಿವಕುಮಾರ ಹೆಸರಲ್ಲಿ ಶಿವ ಹಾಗೂ ಷಣ್ಮುಗ ಇದ್ದಾರೆ. ಹರಿಪ್ರಸಾದ್ ಅವರ ಹೆಸರಲ್ಲಿ ಹರಿ ಇದ್ದಾನೆ. ಕೃಷ್ಣ ಭೈರೇಗೌಡರ ಹೆಸರಲ್ಲಿ ಕೃಷ್ಣ ಇದ್ದಾನೆ. ಹಿಂದೂ ಧರ್ಮ ನಿಮ್ಮ ಮನೆ ಆಸ್ತಿಯೇ ಎಂದು ಪ್ರಶ್ನಿಸಿದರು.
ನಮ್ಮ ಸರ್ಕಾರದಲ್ಲಿ ಧಾರ್ಮಿಕ ದತ್ತಿ ಇಲಾಖೆ, ಹಜ್ ಸಮಿತಿ, ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆ ಇದೆ. ಸಂವಿಧಾನದ ಪರವಾಗಿ ನಾವು ಎಲ್ಲಾ ಧರ್ಮಕ್ಕೂ ಆದ್ಯತೆ ನೀಡುತ್ತಾ ಬಂದಿದ್ದೇವೆ. ಎಲ್ಲರಿಗೂ ಸಮಾನವಾಗಿ ಕಂಡು ಸರ್ವರಿಗೂ ಸಮಬಾಳು, ಸಮಪಾಲು ಎಂಬ ತತ್ವದ ಮೇಲೆ ಆಡಳಿತ ಮಾಡುತ್ತಿದ್ದೇವೆ. ನಿಮ್ಮ ಕೈಯಲ್ಲು ಅಧಿಕಾರ ಇತ್ತು. ಆಗ ಜನಪರ ಕಾರ್ಯಕ್ರಮ ಯಾಕೆ ಮಾಡಲಿಲ್ಲ. ಈಗ ಅಧಿಕಾರ ಹೋದ ನಂತರ ಸಂಕಟಪಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು