ಉಡುಪಿ – ಚಿಕ್ಕಮಗಳೂರು ಕ್ಷೇತ್ರದಲ್ಲಿ ನನಗೆ ಟಿಕೆಟ್ ತಪ್ಪಿಸಲು ನಮ್ಮವರಿಂದಲೇ ಪಿತೂರಿ: ಶೋಭಾ ಕರಂದ್ಲಾಜೆ ಆರೋಪ
ಬೆಳಗಾವಿ, ಮಾ.9: ಲೋಕಸಭೆ ಚುನಾವಣೆಯಲ್ಲಿ ತನಗೆ ಟಿಕೆಟ್ ತಪ್ಪಿಸಲು ಉಡುಪಿ – ಚಿಕ್ಕಮಗಳೂರು ಕ್ಷೇತ್ರದಲ್ಲಿ ಪಿತೂರಿ ನಡೆಯುತ್ತಿದೆ ಎಂದು ಕೇಂದ್ರ ಸಚಿವೆ, ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮವರು ವಿರೋಧ ಮಾಡುತ್ತಿರುವ ಕಾರಣಕ್ಕೆ ನನಗೆ ಅನುಕೂಲ ಆಗಿದೆ. ಯಾವಾಗ ವಿರೋಧ ವ್ಯಕ್ತವಾಗುತ್ತದೆಯೋ ಆಗಲೇ ನಮ್ಮ ನಾಯಕರು ನಮ್ಮ ಬಗ್ಗೆ ಮಾಹಿತಿ ಕಲೆ ಹಾಕುತ್ತಾರೆ. ಇಲ್ಲವಾದರೆ ಶೋಭಾ ಒಳ್ಳೆಯ ಕೆಲಸ ಮಾಡ್ತಿದ್ದಾರೆ, ಪಕ್ಷದ ಕೆಲಸ ಮಾಡುತ್ತಾರೆ ಎಂದಷ್ಟೇ ಹೇಳುತ್ತಿದ್ದರು ಎಂದು ಹೇಳಿದ್ದಾರೆ.
ಶೋಭಾರನ್ನು ಏಕೆ ವಿರೋಧ ಮಾಡ್ತಿದ್ದಾರೆ ಎಂದು ಪಕ್ಷದ ನಾಯಕರೂ ಮಾಹಿತಿ ಕಲೆ ಹಾಕುತ್ತಿದ್ದಾರೆ. ಆಗಲೇ ಸತ್ಯ ತಿಳಿದುಬರುವುದು. ನನ್ನ ವ್ಯಕ್ತಿತ್ವವೇನು? ನನ್ನ ಅಭಿವೃದ್ಧಿ ಕೆಲಸಗಳೇನು ಎಂಬುದು ಗೊತ್ತಾಗುತ್ತವೆ. ಮಾಹಿತಿ ಸಂಗ್ರಹದಿಂದ ನನಗೆ ಅನುಕೂಲ ಆಗಲಿದೆಯೇ ಹೊರತು ಕೆಟ್ಟದಾಗುವುದಿಲ್ಲ ಎಂದ ಶೋಭಾ ಕರಂದ್ಲಾಜೆ, ಹೈಕಮಾಂಡ್ ಬಗ್ಗೆ ತನಗೆ ನಂಬಿಕೆಯಿದೆ. ಕೆಲಸದ ಆಧಾರದ ಮೇಲೆ ಟಿಕೆಟ್ ಸಿಗಲಿದೆ ಎಂದು ಶೋಭಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನನ್ನ ಕ್ಷೇತ್ರದಲ್ಲಿ ನಾನು ಸಾಕಷ್ಟು ಕೆಲಸ ಮಾಡಿದ್ದೇನೆ, ಅಭಿವೃದ್ಧಿ ಆಧಾರದ ಮೇಲೆ ಮತ ಕೇಳುತ್ತೇನೆ ಎಂದು ಅವರು ಹೇಳಿದ್ದಾರೆ.
ಪಕ್ಷದ ಕೆಲಸ ಅಥವಾ ಸರ್ಕಾರದ ಕೆಲಸ ಎರಡನ್ನೂ ಪ್ರಾಮಾಣಿಕ ನಿರ್ವಹಿಸಿದ ಸಂತೃಪ್ತಿ ನನಗಿದೆ. ಕೆಲಸ ಮಾಡಿದವರಿಗೆ ಅವಕಾಶ ಸಿಕ್ಕಿಯೇ ಸಿಗುತ್ತದೆ. ಇದು ಎಲ್ಲರಿಗೂ ಅನ್ವಯ ಆಗುತ್ತದೆ. ಜಾತಿ ಸಮೀಕರಣ ಕಾರಣಕ್ಕೆ ಕೆಲ ಸಂದರ್ಭದಲ್ಲಿ ಇದು ವ್ಯತ್ಯಾಸ ಆಗಬಹುದಷ್ಟೇ. ನಮ್ಮ ಶ್ರಮ, ನಮ್ಮ ಕೆಲಸವನ್ನು ಹೈಕಮಾಂಡ್ ಗುರುತಿಸುತ್ತೆ ಎಂಬುದಕ್ಕೆ ನಾನೇ ಉದಾಹರಣೆ ಎಂದು ಶೋಭಾ ಹೇಳಿದರು
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಬಹಳಷ್ಟು ಹಾಲಿ ಸಂಸದರಿಗೆ ಟಿಕೆಟ್ ಮಿಸ್ ಆಗುತ್ತದೆ ಎಂಬ ಚರ್ಚೆಯ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಮಾಹಿತಿ ಇಲ್ಲ. ಗೆಲ್ಲುವ ಪಕ್ಷದಿಂದ ಬಹಳಷ್ಟು ಜನರು ಟಿಕೆಟ್ ಕೇಳುವುದು ಸಹಜ, ಅದು ತಪ್ಪಲ್ಲ. ಹಲವು ವರ್ಷಗಳಿಂದ ಪಕ್ಷಕ್ಕಾಗಿ ದುಡಿದ ನಮ್ಮ ಕಾರ್ಯಕರ್ತರಿಗೆ ಟಿಕೆಟ್ ಕೇಳುವ ಹಕ್ಕಿದೆ ಎಂದು ಹೇಳಿದರು.