ರಾಷ್ಟ್ರೀಯ ಐಕ್ಯತಾ ಸಮಾವೇಶ ; ನಾಳೆ(ಫೆ.24) ಸಿಎಂ ಸಿದ್ದರಾಮಯ್ಯರಿಂದ ಉದ್ಘಾಟನೆ
ಬೆಂಗಳೂರು : ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಗರದ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ‘ಸಂವಿಧಾನ ಮತ್ತು ರಾಷ್ಟ್ರೀಯ ಐಕ್ಯತಾ ಸಮಾವೇಶ’ ನಡೆಯಲಿದ್ದು, ನಾಳೆ(ಫೆ.24) ಬೆಳಗ್ಗೆ 10ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾವೇಶ ಉದ್ಘಾಟನೆ ಮಾಡಲಿದ್ದಾರೆ.
ಈ ಸಮಾವೇಶದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಪ್ರಹ್ಲಾದ್ ಜೋಶಿ, ರಾಜೀವ್ ಚಂದ್ರಶೇಖರ್, ಶೋಭಾ ಕರಂದ್ಲಾಜೆ, ಎ.ನಾರಾಯಣಸ್ವಾಮಿ, ಭಗವಂತ ಖೂಬಾ, ಸಭಾಪತಿ ಬಸವರಾಜ ಹೊರಟ್ಟಿ, ಸ್ಪೀಕರ್ ಯು.ಟಿ.ಖಾದರ್ ಹಾಗೂ ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ.ಮಹದೇವಪ್ಪ ಸೇರಿದಂತೆ ಸಚಿವರು, ಶಾಸಕರು ಪಾಲ್ಗೊಳ್ಳಲಿದ್ದಾರೆ.
ಸಮಾರೋಪ: ಫೆ.25ರ ಮಧ್ಯಾಹ್ನ 1:30ಕ್ಕೆ ಸಮಾರೋಪ ಸಮಾರಂಭ ಜರುಗಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾರೋಪ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಮುಖಂಡರಾದ ಶರದ್ ಪವಾರ್, ಅಖಿಲೇಶ್ ಯಾದವ್, ಫಾರೂಕ್ ಅಬ್ದುಲ್ಲಾ, ಉದ್ಧವ್ ಠಾಕ್ರೆ, ಸೀತಾರಾಂ ಯೆಚೂರಿ, ಅಬಿಷೇಕ್ ಬ್ಯಾನರ್ಜಿ, ಡಿ.ರಾಜ, ಸುಪ್ರಿಯಾ ಸುಳೆ, ವೈಕೋ, ತೋಲ್ ತಿರುಮಾವಳವನ್, ರಾಘವ್ ಚಡ್ಡಾ, ಪಿ.ಸಿ.ಜೋಸೆಫ್, ಸಂಜಯ್ ರಾವತ್ ಸೇರಿದಂತೆ ಹಲವು ಗಣ್ಯರು ಭಾವಹಿಸಲಿದ್ದಾರೆ.
ಸಂವಿಧಾನ ರಚನೆಯಾಗಿ 75ವರ್ಷಗಳು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಜ.26ರಿಂದ ಒಂದು ತಿಂಗಳ ಕಾಲ ನಡೆಯುತ್ತಿರುವ ‘ಸಂವಿಧಾನ ಜಾಗೃತಿ ಜಾಥಾ’ ರಾಜ್ಯದೆಲ್ಲೆಡೆ ಮೇಳೈಸುತ್ತಿದ್ದು, ಪ್ರತಿಯೊಬ್ಬ ಪ್ರಜೆಗೂ ಸಂವಿಧಾನದ ಮಹತ್ವದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಸಮಾಜ ಕಲ್ಯಾಣ ಇಲಾಖೆಯಿಂದ ಸಂವಿಧಾನದ ಮಹತ್ವ-ಮೌಲ್ಯಗಳ ಕುರಿತು ಜಾಗೃತಿ ಮತ್ತು ರಾಷ್ಟ್ರೀಯ ಏಕತೆಯನ್ನು ಎತ್ತಿ ಹಿಡಯುವ ಉದ್ದೇಶದಿಂದ ‘ಸಂವಿಧಾನ ಜಾಗೃತಿ ಜಾಥಾ'ದ ಸ್ಥಬ್ಧಚಿತ್ರ ಮೆರವಣಿಗೆ ನಡೆಸಲಾಗುತ್ತಿದೆ.
ಪ್ರತಿ ಜಿಲ್ಲೆಯಲ್ಲೂ ವಿಭಿನ್ನ ಹಾಗೂ ವಿಶೇಷ ರೀತಿಯಲ್ಲಿ ಭಾರತದ ಪ್ರಜೆಗಳಾದ ನಾವು, ‘ಸಂವಿಧಾನ ತಿಳಿಯೋಣ, ಸಂವಿಧಾನ ಉಳಿಸೋಣ’ ಎಂಬ ಧ್ಯೇಯ ವಾಕ್ಯದೊಂದಿಗೆ ಫೆ.23ರ ವರೆಗೆ ಜಾಥಾ ನಡೆಸಿದ್ದು, ಫೆ.24 ಮತ್ತು ಫೆ.25ರಂದು ಸಮಾರೋಪ ಸಮಾರಂಭವನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ವೇಳೆ ವಿದ್ಯಾರ್ಥಿಗಳಿಂದ ವಿಜ್ಞಾನ ವಸ್ತು ಪ್ರದರ್ಶನ ನಡೆಯಲಿದೆ ಎಂದು ತಿಳಿಸಲಾಗಿದೆ.