ಕಿರುವಿಮಾನ ನಿಲ್ದಾಣ, ಹೆಲಿಪೋರ್ಟ್ ನಿರ್ಮಾಣ: ಚಿಕ್ಕಮಗಳೂರು ಜಿಲ್ಲೆಗೆ 10 ಕೋ. ರೂ. ಮಂಜೂರು
ಚಿಕ್ಕಮಗಳೂರು, ಸೆ.9: ಪ್ರಸಿದ್ಧ ಪ್ರವಾಸೋದ್ಯಮ, ಧಾರ್ಮಿಕ ಕೇಂದ್ರವಾಗಿರುವ ಜಿಲ್ಲೆಗೆ ರಾಜ್ಯ, ಹೊರ ರಾಜ್ಯ ಮತ್ತು ವಿದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿರುವುದರಿಂದ ಜಿಲ್ಲಾ ಕೇಂದ್ರದಲ್ಲಿ ಕಿರು ವಿಮಾನ ನಿಲ್ದಾಣದ ಅಗತ್ಯವಿದೆ ಎಂದು ರಾಜ್ಯ ಕೈಗಾರಿಕೆ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ಎಂ.ಆರ್.ರವಿ ಹೇಳಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಏರ್ ಸ್ಟ್ರಿಪ್ ಅಭಿವೃದ್ಧಿ ಸಂಬಂಧ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತಾನಾಡಿದ ಅವರು, ನಗರದ ಅಂಬಳೆ ಗ್ರಾಮದ ಕೈಗಾರಿಕ ಪ್ರದೇಶದ ಸಮೀಪದಲ್ಲಿ ಗುರುತಿಸಲಾಗಿರುವ 105 ಎಕರೆ ಸರಕಾರಿ ಜಾಗದಲ್ಲಿ ಏರ್ ಸ್ಟ್ರಿಪ್ ನಿರ್ಮಿಸಲಾಗುವುದು. ಇದರ ಪಕ್ಕದಲ್ಲಿರುವ ಸುಮಾರು 19 ಎಕರೆ ಜಮೀನನ್ನು ಖಾಸಗಿಯವರಿಂದ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ಶೀಘ್ರ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ ಅವರು, ಹೆಲಿಪೋರ್ಟ್‍ಗೆ ಅಗತ್ಯವಿರುವ ಹೆಚ್ಚುವರಿ ಜಮೀನನ್ನು ರೈತರಿಂದಲೇ ಖರೀದಿಸಲಾಗುವುದು ಎಂದರು.
ಕಿರು ವಿಮಾನ ನಿಲ್ದಾಣಕ್ಕೆ ಸರಕಾರ 2018ರಲ್ಲಿ ಅನುಮತಿ ನೀಡಿದ್ದು, ಕಾರ್ಯ ಸಾಧ್ಯತೆ ಪಟ್ಟಿಯಲ್ಲಿ ಚಿಕ್ಕಮಗಳೂರು ಜಿಲ್ಲೆ ಸೇರ್ಪಡೆಯಾಗಿದೆ ಎಂದ ಅವರು, ಕೇಂದ್ರ ಮತ್ತು ರಾಜ್ಯ ಸರಕಾರಗಳ ನಿಯಮದಂತೆ ಕಿರುವಿಮಾನ ನಿಲ್ದಾಣವನ್ನು ಅಭಿವೃದ್ಧಿ ಪಡಿಸಲು ಕೆಎಸ್‍ಐಐಡಿಸಿಗೆ ವಹಿಸಲಾಗಿದೆ. ಇದಕ್ಕಾಗಿ 10 ಕೋಟಿ ರೂ. ಮಂಜೂರಾಗಿದ್ದು, ಈಗಾಗಲೇ 7 ಕೋಟಿ ರೂ. ಬಿಡುಗಡೆಯಾಗಿದೆ. ಹೆಲಿಪೋರ್ಟ್ ಹಾಗೂ ಕಿರು ವಿಮಾನ ನಿಲ್ದಾಣ ಈವೆರಡನ್ನು ಅವಲಂಬಿಸಿ 2022-23ರಲ್ಲಿ ಚಿಕ್ಕಮಗಳೂರು, ರಾಯಚೂರು ಹಾಗೂ ಹಂಪಿಯಲ್ಲಿ ವಿಮಾನ ನಿಲ್ದಾಣಗಳ ನಿರ್ಮಾಣಕ್ಕೆ ಸರಕಾರ ಆದೇಶ ನೀಡಿದೆ ಎಂದರು.
2023-24ರ ಆಯವ್ಯಯದಲ್ಲಿ ಜಿಲ್ಲೆಯಲ್ಲಿ ಏರ್ ಸ್ಟ್ರಿಪ್ ಅಭಿವೃದ್ಧಿ ಪಡಿಸಲು 122 ಎಕರೆ ಜಾಗವನ್ನು ಏರ್ ಸ್ಟ್ರಿಪ್‍ಗಾಗಿ ಕಾಯ್ದಿರಿಸಲಾಗಿದ್ದು, 1200 ಮೀಟರ್ ಉದ್ದದ ರನ್ ವೇ ನಿರ್ಮಾಣಕ್ಕೆ ಅಗತ್ಯವಿರುವ ಭೂಮಿಯನ್ನು ಸ್ವಾಧೀನಪಡಿಕೊಳ್ಳಲಾಗಿದೆ ಇದರ ಡಿಪಿಆರ್‍ಅನ್ನು ಸಿದ್ದಪಡಿಸಲು ಪವನ್ ಹನ್ಸ್ ಲಿ ಸಂಸ್ಥೆಯನ್ನು ನೇಮಿಸಲಾಗಿದೆ. ಮುಂದಿನ 18ರಿಂದ 20 ತಿಂಗಳಲ್ಲಿ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಪ್ರವಾಸಿಗರಿಗೆ ಕಿರು ವಿಮಾನ ನಿಲ್ದಾಣ, ಹೆಲಿ ಪೋರ್ಟ್‍ನಿಂದ ಭಾರೀ ಅನುಕೂಲವಾಗಲಿದೆ ಎಂದರು.
ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮಾತನಾಡಿ, ಸರಕಾರ ಜಮೀನು ಬಿಟ್ಟು ಉಳಿದ ಖಾಸಗಿ ಜಮೀನುಗಳನ್ನು ಭೂಸ್ವಾಧೀನ ಪಡಿಸಿಕೊಳ್ಳಲು ಕ್ರಮವಹಿಸಲಾಗುತ್ತಿದೆ. ಜಮೀನುಗಳಲ್ಲಿರುವ ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆಗೆ ಸೂಚಿಸಲಾಗಿದೆ ಎಂದ ಅವರು, ರೈತರ ಜಮೀನುಗಳಲ್ಲಿರುವ ಬೆಳೆಗಳ ದರ ನಿಗದಿಪಡಿಸಲು ಕ್ರಮಕೈಗೊಳ್ಳಲಾಗಿದೆ ಆದಷ್ಟು ಬೇಗ ಹೆಲಿಪೋರ್ಟ್, ಕಿರು ವಿಮಾನ ನಿಲ್ದಾಣ ಕಾಮಗಾರಿ ಆರಂಭಿಸಲು ಪ್ರಾರಂಭಿಸಲು ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದರು.
ಸಭೆಗೂ ಮುನ್ನ ಅಧಿಕಾರಿಗಳ ತಂಡ ಹಾಗೂ ತಂತ್ರಜ್ಞಾನ ಸಮಿತಿ ಸದಸ್ಯರು ಕಿರುವಿಮಾನ ನಿಲ್ದಾಣಕ್ಕೆ ಗುರುತಿಸಲಾಗಿರುವ ಜಾಗಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಿಗಮದ ಕಾರ್ಯಾನಿರ್ವಾಹಕ ಅಧಿಕಾರಿ ಪ್ರಕಾಶ್, ಉಪವಿಭಾಗಾಧಿಕಾರಿ ರಾಜೇಶ್, ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರಾದ ಸಿದ್ದರಾಜು, ರವಿಪ್ರಸಾದ್, ತಹಶೀಲ್ದಾರ್ ಡಾ.ಸುಮಂತ್ ಹಾಗೂ ಅನುಷ್ಠನಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.